ADVERTISEMENT

ಕಾರ್ಗಿಲ್‌ ವಿಜಯ್‌ ದಿವಸ್‌: ನಿವೃತ್ತ ಯೋಧರ ಬೇಡಿಕೆಗೆ ಸಿಗದ ಮನ್ನಣೆ

ಪ್ರಮೋದ ಕುಲಕರ್ಣಿ
Published 26 ಜುಲೈ 2025, 7:28 IST
Last Updated 26 ಜುಲೈ 2025, 7:28 IST
ಶ್ರೀಧರ ಪೊಲೀಸ್‌ ಪಾಟೀಲ್
ಶ್ರೀಧರ ಪೊಲೀಸ್‌ ಪಾಟೀಲ್   

ಕೊಪ್ಪಳ: ದೇಶದ ಜನ ಸುಭದ್ರವಾಗಿ ಹಾಗೂ ನೆಮ್ಮದಿಯಾಗಿ ಬದುಕಲು ಹಗಲಿರುಳು ಎನ್ನದೇ ಗಡಿ ಕಾಯುತ್ತ ಯೋಧರು ನಮ್ಮನ್ನು ರಕ್ಷಣೆ ಮಾಡುತ್ತಿದ್ದಾರೆ. ಆದರೆ ಅವರು ‘ಮಾಜಿ’ ಆದಾಕ್ಷಣ ಅವರ ಬೇಡಿಕೆಗಳಿಗೆ ಸ್ಪಂದನೆಯೇ ಸಿಗದಂತಾಗಿದೆ.

ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚು ನಿವೃತ್ತ ಸೈನಿಕರಿದ್ದು ಅದರಲ್ಲಿ 700 ಜನ ಕೊಪ್ಪಳ ಜಿಲ್ಲಾ ಮಾಜಿ ಸೈನಿಕ ಸಂಘದಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಇನ್ನುಳಿದ ಸೈನಿಕರನ್ನು ಒಂದೇ ವೇದಿಕೆಯಲ್ಲಿ ತರುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.

ನಾವೀಗ ಕಾರ್ಗಿಲ್‌ ವಿಜಯ್‌ ದಿವಸ್‌ ಸಂಭ್ರಮದಲ್ಲಿದ್ದೇವೆ. 1999ರಲ್ಲಿ ಭಾರತ ಮತ್ತು ಪಾಕಿಸ್ತಾನದ ಸೇನೆಗಳ ನಡುವೆ ಕಾರ್ಗಿಲ್ ಯುದ್ಧ ನಡೆದು ಜು. 26ರಂದು ಕೊನೆಗೊಂಡಿತು. ಅದರಲ್ಲಿ ಭಾರತವು ವಿಜಯಶಾಲಿಯಾಯಿತು. ಕಾರ್ಗಿಲ್ ವಿಜಯ್ ದಿವಸ್ ದಿನವನ್ನು ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರನ್ನು ಗೌರವಿಸಲು ಆಚರಿಸಲಾಗುತ್ತಿದ್ದು, ಇದಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರೂ ಕೊಪ್ಪಳ ಜಿಲ್ಲೆಯಲ್ಲಿದ್ದಾರೆ.

ADVERTISEMENT

ಅವರ ಕುಟುಂಬದ ಸದಸ್ಯರು, ಸಂಬಂಧಿಕರು, ದೇಶದ ವಿವಿಧೆಡೆ ಸೇವೆ ಸಲ್ಲಿಸಿ ನಿವೃತ್ತರಾದ ಯೋಧರು ಸೇರಿಕೊಂಡು ಸಂಘ ಕಟ್ಟಿಕೊಂಡಿದ್ದು, ನಗರದ ಹುಡ್ಕೊ ಕಾಲೊನಿಯಲ್ಲಿರುವ ಸಿ.ಎ. ನಿವೇಶನದ ತಾತ್ಕಾಲಿಕ ಕೊಠಡಿಯಲ್ಲಿ ಕಾಲೊನಿಗೆ ಸಂಬಂಧಿಸಿದ ಜಾಗದಲ್ಲಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ನಿವೃತ್ತ ಯೋಧರು ಹಾಗೂ ಮೃತ ಯೋಧರ ಕುಟುಂಬದವರು ಸೇರಿ ರಾಷ್ಟ್ರೀಯ ದಿನಗಳು, ಕಾರ್ಗಿಲ್‌ ವಿಜಯೋತ್ಸವ ಹೀಗೆ ದೇಶಭಕ್ತಿಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಮಾಡುತ್ತಲೇ ಇರುತ್ತಾರೆ. ಆದರೆ ಅವರಿಗೆ ನಿರ್ದಿಷ್ಟ ಸ್ಥಳವಿಲ್ಲ. ನಿವೃತ್ತ ಸೈನಿಕರ ಸಮಸ್ಯೆಗಳು ಅಥವಾ ಸೇವೆಯಲ್ಲಿದ್ದಾಗ ಮೃತಪಟ್ಟ ಯೋಧನಿಗೆ ಸಂಬಂಧಪಟ್ಟ ದಾಖಲೆಗಳನ್ನು ಸೇನೆಯಿಂದ ಪಡೆಯಲು ಮಾಡಬೇಕಾದ ಪ್ರಕ್ರಿಯೆ ಹೀಗೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲೂ ಸ್ಥಳವಿಲ್ಲದಂತಾಗಿದೆ. ಹುಡ್ಕೊ ಕಾಲೊನಿಯಲ್ಲಿರುವ ತಾತ್ಕಾಲಿಕ ಕಚೇರಿ ಖಾಲಿ ಮಾಡುವಂತೆ ಹೇಳಿದರೆ ಬೇರೆ ಕಡೆ ಜಾಗವೇ ಇಲ್ಲದಂತಾಗಿದೆ.  

‘ದೇಶಕ್ಕಾಗಿ ಹೋರಾಡುವಾಗ ಗೆಲ್ಲಬೇಕು ಅಥವಾ ಪ್ರಾಣ ತ್ಯಾಗ ಮಾಡಬೇಕು ಎನ್ನುವುದಷ್ಟೇ ನಮ್ಮ ಗುರಿಯಾಗಿರುತ್ತದೆ. ಅದಕ್ಕಾಗಿ ಕುಟುಂಬ, ಸ್ನೇಹಿತರು, ಊರು ಎಲ್ಲವನ್ನೂ ಬಿಟ್ಟು ವರ್ಷಾನುಗಟ್ಟಲೆ ಹೋಗಿರುತ್ತೇವೆ. ನಿವೃತ್ತರಾದ ಬಂದ ಬಳಿಕ ಯೋಧರಿಗೆ ಸೌಲಭ್ಯ ಪಡೆದುಕೊಳ್ಳಲು ಪರದಾಡುವ ಸ್ಥಿತಿಯಿದೆ. ಸಂಘದ ಕಟ್ಟಡಕ್ಕಾಗಿ ನಿವೇಶನ ನೀಡುವಂತೆ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ಕೊಪ್ಪಳ ತಹಶೀಲ್ದಾರ್‌ ಅವರಿಗೆ ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ನಿವೃತ್ತ ಯೋಧರು ಬೇಸರ ವ್ಯಕ್ತಪಡಿಸುತ್ತಾರೆ.

ಸಂಘಕ್ಕೆ ಈಗಿರುವ ತಾತ್ಕಾಲಿಕ ಕಟ್ಟಡದಲ್ಲಿ ಹುಡ್ಕೊ ಕಾಲೊನಿ ನಿವಾಸಿಗಳು ಸ್ವ ಸಹಕಾರ ಸಂಘದ ಫಲಕ ಹಾಕಿದ್ದಾರೆ. ಕೇಳಿದರೆ ಬಿಟ್ಟುಕೊಡಬೇಕಾಗುತ್ತದೆ. ಜಿಲ್ಲಾಡಳಿತ ಮೊದಲು ನಿವೇಶನ ಕೊಡಬೇಕು
ಶ್ರೀಧರ ಪೊಲೀಸ್‌ ಪಾಟೀಲ್ ನಿವೃತ್ತ ಯೋಧರ ಸಂಘದ ಉಪಾಧ್ಯಕ್ಷ
ಸಂಘಕ್ಕೆ ಸ್ವಂತ ಕಟ್ಟಡವಾಗಬೇಕು ಎಂದು ಬಹುವರ್ಷಗಳ ಬೇಡಿಕೆಗೆ ಸ್ಪಂದನೆ ಲಭಿಸಿಲ್ಲ. ದೇಶವೇ ಯೋಧರನ್ನು ಗೌರವದಿಂದ ಕಾಣುತ್ತಿದೆ. ನಮ್ಮವರ ಬೇಕು ಬೇಡ ಕೇಳಿಸಿಕೊಳ್ಳಲು ಒಂದು ಕಟ್ಟಡವೂ ಇಲ್ಲ  
ಮಾರುತಿ ಗೊಂದಿ,ನಿವೃತ್ತ ಸೈನಿಕರ ಸಂಘದ ಜಿಲ್ಲಾಧ್ಯಕ್ಷ 
ನಾನು ಕೊಪ್ಪಳಕ್ಕೆ ಬಂದ ಬಳಿಕ ಮಾಜಿ ಸೈನಿಕರು ಯಾವುದೇ ಮನವಿ ಸಲ್ಲಿಸಿಲ್ಲ. ಮನವಿ ಕೊಟ್ಟರೆ ಸಾಧ್ಯವಿರುವ ಅವಕಾಶದಲ್ಲಿ ಸೌಲಭ್ಯ ಕಲ್ಪಿಸಿಕೊಡುವೆ
ಸುರೇಶ ಇಟ್ನಾಳ ಜಿಲ್ಲಾಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.