ಕೊಪ್ಪಳ: ಜೂನ್‌ನಲ್ಲಿ ಮಳೆ ಕೊರತೆಯಾಗಿ ಜಿಲ್ಲೆಯಲ್ಲಿ ಬರಗಾಲದ ಆತಂಕದ ಛಾಯೆ ಮನೆ ಮಾಡಿತ್ತು. ಆದರೆ ಜುಲೈನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದಿದ್ದು, ಕೃಷಿ ಚಟುವಟಿಕೆಗಳಿಗೆ ಜೀವ ಕಳೆ ಬಂದಿದೆ. ಹಿಂದಿನ ತಿಂಗಳು ಕಾಡಿದ್ದ ಮಳೆ ಕೊರತೆ ಜುಲೈನಲ್ಲಿ ನೀಗಿದೆ.
ಈ ಸಲದ ಮುಂಗಾರು ಪೂರ್ವ ಆಶಾದಾಯಕವಾಗಿದ್ದರಿಂದ ಜೂನ್‌ನಿಂದಲೇ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆ ಚುರುಕುಗೊಳ್ಳುತ್ತದೆ ಎನ್ನುವ ನಿರೀಕ್ಷೆ ಬಲವಾಗಿತ್ತು. ಆದರೆ ಹಿಂದಿನ ತಿಂಗಳು ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಮಳೆ ಕೊರತೆಯಾಗಿತ್ತು. ಅದರಲ್ಲಿಯೂ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕನಕಗಿರಿ ತಾಲ್ಲೂಕುಗಳಲ್ಲಿ ವಾಡಿಕೆಗಿಂತಲೂ ಸಾಕಷ್ಟು ಕಡಿಮೆ ಮಳೆಯಾಗಿದ್ದರೆ ಕುಕನೂರು ತಾಲ್ಲೂಕಿನಲ್ಲಿ ಬಹುತೇಕ ಬರದ ಛಾಯೆ ಆವರಿಸಿತ್ತು. ಅಲ್ಲಿ ಜೂನ್‌ನಲ್ಲಿ ವಾಡಿಕೆಯಂತೆ 8.84 ಸೆಂ.ಮೀ. ನಷ್ಟು ಆಗಬೇಕಿದ್ದ ಮಳೆ ಕೇವಲ 1.74 ಸೆಂ.ಮೀ. ನಷ್ಟು ಮಾತ್ರ ಸುರಿದಿತ್ತು.
ಆದರೆ ರಾಜ್ಯದ ದಕ್ಷಿಣ ಭಾಗದ ಜಿಲ್ಲೆಗಳು, ಧಾರವಾಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ಮುಂಗಾರು ಪೂರ್ವದ ಆರಂಭದಲ್ಲಿಯೇ ಮಲೆನಾಡಿನ ಜಿಲ್ಲೆಗಳಲ್ಲಿ ಸಾಕಷ್ಟು ಮಳೆ ಸುರಿದು ತುಂಗಭದ್ರಾ ಜಲಾಶಯಕ್ಕೆ ವೇಗವಾಗಿ ಒಳಹರಿವು ಹರಿದು ಬಂದಿತು. ಜಿಲ್ಲೆಯಲ್ಲಿರುವ ತುಂಗಭದ್ರಾ ನೀರಿನಿಂದ ಮೈದುಂಬಿದ್ದರೂ ಅದೇ ಜಿಲ್ಲೆಯಲ್ಲಿ ಮಳೆಯ ಕೊರತೆ ಕಾಡಿತ್ತು.
ಆದ್ದರಿಂದ ಜುಲೈನಲ್ಲಿ ಉತ್ತಮ ಮಳೆಗಾಗಿ ಜಿಲ್ಲೆಯ ರೈತರು ಕಾಯುತ್ತಿದ್ದರು. ಅನ್ನದಾತರ ನಿರೀಕ್ಷೆ ಹುಸಿಯಾಗಲಿಲ್ಲ. ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿ ಕೃಷಿ ಚಟುವಟಿಕೆಗೆ ಅನುಕೂಲವಾಯಿತು. ಜುಲೈನಲ್ಲಿ ಕುಷ್ಟಗಿ (ವಾಡಿಕೆ 6.61 ಸೆಂ.ಮೀ. ಬಂದ ಮಳೆ 10.16 ಸೆಂ.ಮೀ.) ತಾಲ್ಲೂಕಿನಲ್ಲಿ ಶೇ. 54ರಷ್ಟು, ಯಲಬುರ್ಗಾ (ವಾಡಿಕೆ: 6.65 ಸೆಂ.ಮೀ., ಬಂದ ಮಳೆ 10 ಸೆಂ.ಮೀ.) ಶೇ. 50ರಷ್ಟು ಮತ್ತು ಕನಕಗಿರಿ (ವಾಡಿಕೆ: 4.43 ಸೆಂ.ಮೀ. ಬಂದ ಮಳೆ 8.56) ತಾಲ್ಲೂಕುಗಳಲ್ಲಿ ಶೇ. 90ರಷ್ಟು ಹೆಚ್ಚು ಮಳೆಯಾಗಿದೆ. ಜುಲೈನಲ್ಲಿ ಜಿಲ್ಲೆಯಲ್ಲಿ ಆಗಬೇಕಿದ್ದ ಬಹುತೇಕ ಮಳೆ ಎರಡು ಮತ್ತು ಮೂರನೇ ವಾರದಲ್ಲಿ ಆಗಿದೆ.
ಮಳೆಯಿಂದಾಗಿ ಒಂದೆಡೆ ರೈತರು ಕೃಷಿ ಚಟುವಟಿಕೆ ಚುರುಕುಗೊಳಿಸಿದ್ದರೆ, ಇನ್ನೊಂದೆಡೆ ಯೂರಿಯಾ ರಸಗೊಬ್ಬರದ ಕೊರತೆ ಕಾಡಿತು. ಜಲಾಶಯದ ನೀರು ಹಾಗೂ ಸ್ವಂತ ಬೋರ್‌ವೆಲ್ ನೆಚ್ಚಿಕೊಂಡು ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಭಾಗ, ಗಂಗಾವತಿ ಮತ್ತು ಕಾರಟಗಿ ತಾಲ್ಲೂಕುಗಳ ರೈತರು ಭತ್ತ ನಾಟಿ ಮಾಡಿದ್ದಾರೆ. ಆಗಸ್ಟ್‌ನಲ್ಲಿಯೂ ಇನ್ನಷ್ಟು ಉತ್ತಮ ಮಳೆಯ ನಿರೀಕ್ಷೆ ಹೊಂದಿದ್ದಾರೆ.
ಜುಲೈನಲ್ಲಿ ಉತ್ತಮ ಮಳೆಯಾಗಿದ್ದರಿಂದ ಭತ್ತದ ನಾಟಿ ಜೊತೆಗೆ ಮುಂಗಾರು ಬೆಳೆಗಳ ಬಿತ್ತನೆ ಬೇಗನೆ ಆಗಿದೆ. ಕಳೆದ ವರ್ಷ ಈ ವೇಳೆಗೆ 2.41 ಲಕ್ಷ ಈ ಬಾರಿ 3.26 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.– ರುದ್ರೇಶಪ್ಪ ಟಿ.ಎಸ್., ಕೃಷಿ ಇಲಾಖೆ ಜಂಟಿ ನಿರ್ದೇಶಕ
ಜೂನ್‌ನಲ್ಲಿ ಕಾಡಿದ್ದ ಮಳೆ ಕೊರತೆ ಜುಲೈನಲ್ಲಿ ನೀಗಿದ್ದು ಖುಷಿ ನೀಡಿದೆ. ಸಾಕಷ್ಟು ಶ್ರಮಪಟ್ಟು ಕೃಷಿ ಮಾಡಿದ್ದೇವೆ. ಆಗಸ್ಟ್‌ನಲ್ಲಿಯೂ ಉತ್ತಮ ಮಳೆ ಅಗತ್ಯವಿದೆ.– ಪಾಮಣ್ಣ ಹೊಸಕೇರಿ, ಗಂಗಾವತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.