ಗವಿಮಠದ ಕೆರೆಯಲ್ಲಿ ತೆಪ್ಪೋತ್ಸವ –ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಕೊಪ್ಪಳ: ವೈಭವೋಪಿತ ಬಣ್ಣಬಣ್ಣದ ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿರುವ ಇಲ್ಲಿನ ಗವಿಸಿದ್ಧೇಶ್ವರ ಮಠದಲ್ಲಿ ಎಲ್ಲಿ ನೋಡಿದರೂ ಜನವೋ ಜನ. ತರಹೇವಾರಿ ಹೂಗಳು ಹಾಗೂ ವಿದ್ಯುತ್ ದೀಪದಿಂದ ಅಲಂಕೃತಗೊಂಡಿದ್ದ ತೆಪ್ಪದಲ್ಲಿ ಗವಿಸಿದ್ಧೇಶ್ವರನ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು.
ಈ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಭಾನುವಾರ ರಾತ್ರಿ ಸಾಕಷ್ಟು ಸಂಖ್ಯೆಯಲ್ಲಿ ಜನ ಪಾಲ್ಗೊಂಡಿದ್ದರು. ತೆಪ್ಪೋತ್ಸವಕ್ಕೆ ಆಗಮಿಸಿ ಗವಿಸಿದ್ಧೇಶ್ವರರ ಬಳಿ ಸಂಕಲ್ಪ ಮಾಡಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆಂಬ ಎನ್ನುವ ನಂಬಿಕೆ ಭಕ್ತರದ್ದು.
ಎರಡು ತೆಪ್ಪಗಳ ನಡುವೆ ಹಲಗೆಯಿಂದ ನಿರ್ಮಿಸಲಾದ ವೇದಿಕೆಯಲ್ಲಿ ಗವಿಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಬಾಳೆ, ಕಬ್ಬು, ಮಾವಿನ ತಳಿರು ತೋರಣ ಹಾಗೂ ಹೂವಿನಿಂದ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಮೂರ್ತಿಯನ್ನು ಅಲಂಕಾರ ಮಾಡಲಾಗಿತ್ತು. ಮಂಗಳವಾದ್ಯಗಳೊಂದಿಗೆ ತೆಪ್ಪವನ್ನು ಕರೆಯಲ್ಲಿ ನಾಲ್ಕೂ ದಿಕ್ಕುಗಳಲ್ಲಿ ಹುಟ್ಟು ಹಾಕಿ ಸಾಗಿಸಲಾಯಿತು.
ತೆಪ್ಪ ಮುಂದಕ್ಕೆ ಸಾಗುತ್ತಿದ್ದಂತೆ ಜನ ಕೈ ಮುಗಿದು ಭಕ್ತಿ ಸಮರ್ಪಿಸಿದರು. ಈ ವೇಳೆ ಮೃದುವಾದ ಧ್ವನಿಯಲ್ಲಿ ಮೊಳಗಿದ ‘ಗವಿಸಿದ್ಧೇಶ್ವರ ಪಾಹಿಮಾಮ್… ಪಾಹಿಮಾಮ್....’ ಎನ್ನುವ ಸ್ತೋತ್ರ ಗಮನ ಸೆಳೆಯಿತು. ಇದಕ್ಕೂ ಮೊದಲು ಕೆರೆಯ ಮಧ್ಯಭಾಗದಲ್ಲಿ ನಿಂತುಕೊಂಡು ಮಠದ ಅರ್ಚಕರು ತುಂಗಾರತಿ ಮಾಡಿದರು. ಅವರು ಆರತಿ ಮಾಡುತ್ತಿದ್ದಾಗ ಆ ಬೆಳಕು ಕೆರೆಯಲ್ಲಿ ನೀರಿನಲ್ಲಿ ಬಿದ್ದ ಪ್ರತಿಬಿಂಬ ಆಕರ್ಷಕವಾಗಿತ್ತು.
ಕ್ರಿಕೆಟ್ ಟೂರ್ನಿಗೆ ಚಾಲನೆ: ಮೊದಲ ಬಾರಿಗೆ ಆಯೋಜಿಸಲಾಗಿರುವ ಗವಿಶ್ರೀ ಕ್ರೀಡಾ ಉತ್ಸವದ ಮೊದಲ ಕ್ರೀಡಾಕೂಟ ಕ್ರಿಕೆಟ್ ಟೂರ್ನಿಗೆ ಭಾನುವಾರ ಚಾಲನೆ ಲಭಿಸಿತು. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಅವರು ಚಾಲನೆ ನೀಡಿದರು. ಬಳಿಕ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ನಗರಸಭೆ, ಖಾಸಗಿ ಕಂಪನಿ ಹೀಗೆ ವಿವಿಧ ತಂಡಗಳು ಪಂದ್ಯಗಳನ್ನಾಡಿದವು.
ತೆಪ್ಪೋತ್ಸವ ನೋಡಲು ಸೇರಿದ್ದ ಜನ ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.