ಕೊಪ್ಪಳ: ಜಿಲ್ಲೆಯ ಹಲವು ಕಡೆ ಗಾಂಜಾ ಸೇವನೆ ಮಾಡುತ್ತಿರುವ ಮತ್ತು ಬೆಳೆಯುತ್ತಿರುವವರ ಬೆನ್ನು ಬಿದ್ದಿರುವ ಪೊಲೀಸರು ನಿರಂತರ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ. ಗಾಂಜಾ ಸೇವನೆ ಮಾಡುತ್ತಿರುವವರಲ್ಲಿ ಯುವಜನತೆಯೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಕೊಪ್ಪಳದ ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆಯ ಮಧ್ಯದ ಸೇತುವೆ ಕೆಳಗೆ ಗಾಂಜಾ ಸೇವಿಸುತ್ತಿದ್ದ ಭಾಗ್ಯನಗರದ ಪ್ರಕಾಶ ಕಬಾಡಿಯಾ, ನಗರದ ಲಾಲ್ ಬಹಾದ್ದೂರ ಶಾಸ್ತ್ರಿ ವೃತ್ತದಲ್ಲಿ ಸುದೀಪ್ ಬೋದೂರು, ಭಾಗ್ಯನಗರ ಸಾಯಿಬಾಬಾ ದೇವಸ್ಥಾನ ಹತ್ತಿರದ ರಸ್ತೆಯಲ್ಲಿ ಗಾಂಜಾ ಅಮಲಿನಲ್ಲಿದ್ದ ಯತ್ನಟ್ಟಿ ಗ್ರಾಮದ ವೇದಾಂತ ಪವಾರ್ ಎಂಬಾತನ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಗಾವತಿ ನಗರದ ಗುಂಡಮ್ಮ ಕ್ಯಾಂಪ್ ಹತ್ತಿರದ ಹಳ್ಳದ ಬಳಿ ಮುಬಾರಕ್ ಎಂಬಾತ ಗಾಂಜಾ ಸೇವನೆ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ಎಲ್ಲರ ವಿರುದ್ಧ ಎನ್.ಡಿ.ಪಿ.ಎಸ್. ಅಡಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ.
ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಇರಕಲ್ಲಗಡ ಹೊರವಲಯದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ನಿಂಗಪ್ಪ ಗುರಿಕಾರ, ಮಾರುತಿ ಗುರಿಕಾರ, ರವಿ ಗುರಿಕಾರ, ಹಾಗೂ ನಾಗಪ್ಪ ಕುದುರಿಮೋತಿ ಎಂಬುವರನ್ನು ಬಂಧಿಸಿ ₹25,200 ಮೌಲ್ಯದ 630 ಗ್ರಾಂ ಗಾಂಜಾ ಮತ್ತು 15 ಗಾಂಜಾ ಸಸಿ ಜಪ್ತಿ ಮಾಡಲಾಗಿದೆ.
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯ ಸಂಗಾಪುರ– ಮಲ್ಲಾಪುರ ರಸ್ತೆಯ ಟವರ್ ಹತ್ತಿರ ಗಾಂಜಾ ಸೇದುತ್ತಿದ್ದ ಆನೆಗೊಂದಿಯ ಮಂಜುನಾಥ ಮಲ್ಲಿನಕೇರಿ ಹಾಗೂ ಸಂಗಾಪುರದ ದುರುಗೇಶ್ ಎಂಬುವರನ್ನು ಬಂಧಿಸಲಾಗಿದೆ. ಇದೇ ಠಾಣೆ ವ್ಯಾಪ್ತಿಯ ಲಿಂಗರಾಜ ಕ್ಯಾಂಪ್‌ನಲ್ಲಿ ಸೋಹೇಬ್ ಹಾಗೂ ದಾವಲಸಾಬ್ ಎಂಬುವರನ್ನು ವಶಕ್ಕೆ ಪಡೆದು ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿದ್ದು ದೃಢಪಟ್ಟಿದೆ.
ವೀಲಿಂಗ್ ಮಾಡಿದ್ದಕ್ಕೆ ಪ್ರಕರಣ
ಗಂಗಾವತಿಯ ನೀಲಕಂಠೇಶ್ವರ ದೇವಾಲಯ ರಸ್ತೆಯಲ್ಲಿ ಆ. 20ರಂದು ಮೊಹಮ್ಮದ್ ರಿಹಾನ್ ಎಂಬಾತ್ ಬೈಕ್ ವೀಲಿಂಗ್ ಮಾಡಿದ್ದು ಆತನ ವಿರುದ್ಧವೂ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.