
ಕೊಪ್ಪಳ: ಜಿಲ್ಲಾ ಕೇಂದ್ರದ ಸಮೀಪದಲ್ಲಿ ಅಪಾಯಕಾರಿ ಕಪ್ಪು ಕಣಗಳ ದೂಳಿನಿಂದ ಪರಿಸರ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ಮಂಗಳವಾರ ನಡೆದ ಕೊಪ್ಪಳ ಬಂದ್ ವೇಳೆ ಸಾರ್ವಜನಿಕರು ಶಾಸಕ, ಸಂಸದರನ್ನು ತರಾಟೆಗೆ ತೆಗೆದುಕೊಂಡರು.
ಗವಿಮಠ ಬಳಿಯಿಂದ ಅಶೋಕ ವೃತ್ತದ ತನಕ ಮೆರವಣಿಗೆ ನಡೆಯಿತು. ಈ ವೇಳೆ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ ಅವರನ್ನು ಜನ ಸುತ್ತುವರಿದು ವಾಗ್ದಾಳಿ ನಡೆಸಿದರು.
‘ಮಾಲಿನ್ಯದಿಂದ ಜನ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಸದನದಲ್ಲಿ ಈ ಕುರಿತು ಚಕಾರ ಎತ್ತಿಲ್ಲ’ ಎಂದು ಶಾಸಕ ಹಿಟ್ನಾಳ ಅವರೊಂದಿಗೆ ವಾಗ್ವಾದ ನಡೆಸಿದರು. ಮಧ್ಯ ಪ್ರವೇಶಿಸಿದ ಪೊಲೀಸರು ಹೋರಾಟ ನಿರತರನ್ನು ಸಮಾಧಾನ ಪಡಿಸಿದರು.
ಶಾಸಕ, ಸಂಸದ, ಮಾಜಿ ಸಂಸದರು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಲು ವಿರೋಧ ವ್ಯಕ್ತವಾಯಿತು.
‘ಜನಪ್ರತಿನಿಧಿಗಳಿಂದಲೇ ಸಮಸ್ಯೆಯಾಗಿದ್ದು, ಅವರು ಮಾತನಾಡುವುದು ಬೇಡ’ ಎಂದು ಆಕ್ರೋಶ ಹೊರಹಾಕಿದರು. ‘ಸದನದಲ್ಲಿ ಒಮ್ಮೆಯೂ ಮಾತನಾಡದ ಶಾಸಕ ಹಿಟ್ನಾಳ ಕಾರ್ಖಾನೆಗಳ ಪರವಾಗಿ ಇದ್ದಾರೆಯೇ’ ಎಂದು ಪ್ರಶ್ನಿಸಿದರು. ಕೊರಳಲ್ಲಿ ಧರಿಸಿರುವ ಹಸಿರು ಟವೆಲ್ ತೆಗೆಯುವಂತೆ ಒತ್ತಾಯಿಸಿದರು.
‘ಜನಪ್ರತಿನಿಧಿಗಳನ್ನು ನಾವೇ ಕರೆದಿದ್ದೇವೆ. ಅಗೌರವ ತೋರಬೇಡಿ’ ಎಂದು ಬಂದ್ ಪ್ರತಿಭಟನೆ ನೇತೃತ್ವ ವಹಿಸಿದ್ದ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮತ್ತು ಪರಿಸರ ಹಿರತಕ್ಷಣಾ ಜಂಟಿ ಕ್ರಿಯಾ ವೇದಿಕೆಯ ಪ್ರಮುಖರು ಬಾಧಿತ ಗ್ರಾಮಗಳ ಜನರನ್ನು ಸಮಾಧಾನಪಡಿಸಿದರೂ ಜನರು ಸುಮ್ಮನಾಗಲಿಲ್ಲ.
ರಾಜ್ಯದ ವಿವಿಧ ಮಠಗಳ ಮಠಾಧೀಶರು ಹಾಗೂ ರೈತ ನಾಯಕರು ಪಾಲ್ಗೊಂಡಿದ್ದರು. ದಿನಪೂರ್ತಿ ವ್ಯಾಪಾರ ವಹಿವಾಟು ಬಂದ್ ಆಗಿತ್ತು. ಬಸ್ ನಿಲ್ದಾಣ ಬಿಕೊ ಎನ್ನುತ್ತಿತ್ತು.
ಶಾಸಕರು ಸಂಸದರು ಪರಿಸರ ಮಾಲಿನ್ಯದ ವಿಚಾರವನ್ನು ಸರ್ಕಾರದ ಗಮನಕ್ಕೆ ತರಬೇಕು. ಇಲ್ಲವಾದರೆ ನಿಮಗೆ ಮತ ಹಾಕುವುದಿಲ್ಲ ಎಂದು ಜನ ಹೇಳುತ್ತಾರೆ
– ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾಣೇಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.