ADVERTISEMENT

ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆಗಟ್ಟಿ: ಕರ್ನಾಟಕ ರೈತ ಸಂಘದ ಅದ್ಯಕ್ಷ

ಕೊಪ್ಪಳ ಚಲೋ ಹೋರಾಟ ಜಾಥಾ ಕರಪತ್ರ ಬಿಡುಗಡೆ; ಹಲ್ಲೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2021, 6:46 IST
Last Updated 13 ಜುಲೈ 2021, 6:46 IST
ಕಾರಟಗಿಯ ಪರಿವೀಕ್ಷಣಾ ಮಂದಿರದಲ್ಲಿ ಮುಖಂಡರು ಕೊಪ್ಪಳ ಚಲೋ ಹೋರಾಟ ಜಾಥಾದ ಕರಪತ್ರ ಪ್ರದರ್ಶಿಸಿದರು
ಕಾರಟಗಿಯ ಪರಿವೀಕ್ಷಣಾ ಮಂದಿರದಲ್ಲಿ ಮುಖಂಡರು ಕೊಪ್ಪಳ ಚಲೋ ಹೋರಾಟ ಜಾಥಾದ ಕರಪತ್ರ ಪ್ರದರ್ಶಿಸಿದರು   

ಕಾರಟಗಿ: ಕನಕಗಿರಿ ಕ್ಷೇತ್ರ ಸಹಿತ ಜಿಲ್ಲೆಯ ವಿವಿಧೆಡೆ ಪರಿಶಿಷ್ಟರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಜಿಲ್ಲೆಯಲ್ಲಿ ಬೃಹತ್ ಹೋರಾಟ ಜಾಥಾ ನಡೆಸಲಾಗುತ್ತದೆ ಎಂದು ಕರ್ನಾಟಕ ರೈತ ಸಂಘದ ಅದ್ಯಕ್ಷ ಡಿ. ಎಚ್.ಪೂಜಾರ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪರಿಶಿಷ್ಟರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಮೀಸಲು ಕ್ಷೇತ್ರವಾಗಿದ್ದರೂ ರಕ್ಷಣೆ ಇಲ್ಲದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ವಿವಿಧೆಡೆ ಪರಿಶಿಷ್ಟರ ಸಮಾಜದವರ ಮೇಲೆ ದೌರ್ಜನ್ಯ ನಡೆದ ಘಟನೆಗಳು ವರದಿಯಾಗುತ್ತಿವೆ. ರಕ್ಷಣೆ ನೀಡಬೇಕಾಗಿದ್ದ ಪೊಲೀಸರು ಮೌನವಾಗಿದ್ದಾರೆ. ಶಾಸಕರು ದಲಿತರ ರಕ್ಷಣೆಗಿಲ್ಲ ಎಂದರು.

ADVERTISEMENT

ಹೋರಾಟ ಜಾಥಾ: ರಾಜ್ಯ ಮಾದಿಗ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ, ದಸಂಸ ರಾಜ್ಯ ಸಂಘಟನಾ ಸಂಚಾಲಕ ಹುಸೇನಪ್ಪ ಹಂಚಿನಾಳ ಮಾತನಾಡಿ, ಜಿಲ್ಲೆಯಲ್ಲಿ ಹೋರಾಟ ಜಾಥಾ ನಡೆಸಲಾಗುವುದು. ಬರಗೂರು ಗ್ರಾಮದಿಂದ ಜಾಥಾ ಆರಂಭಗೊಳ್ಳಲಿದ್ದು, 8 ದಿನಗಳವರೆಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಜನಜಾಗೃತಿ ಮೂಡಿಸಲಾಗುವುದು. 19ರಂದು ದಲಿತ, ದಮನಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಕೊಪ್ಪಳ ಚಲೋ ನಡೆಸಲಾಗುವುದು ಎಂದು ತಿಳಿಸಿದರು.

ಸಿಪಿಐಎಮ್‍ಎಲ್ ಜಿಲ್ಲಾ ಕಾರ್ಯದರ್ಶಿ ಸಣ್ಣ ಹನುಮಂತ, ಆನಂದ ಬಂಡಾರಿ, ಮರಿಸ್ವಾಮಿ ಬರಗೂರು, ಯಮನೂರಪ್ಪ, ಹನುಮಂತ ಮ್ಯಾಗಡೆ, ಕರಿಹನುಮಂತಪ್ಪ ಬರಗೂರು, ಮಹಾದೇವಪ್ಪ ಉಪಸ್ಥಿತರಿದ್ದರು.

‘ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಿ’

ಗಂಗಾವತಿ: ಕಾರಟಗಿ ತಾಲ್ಲೂಕಿನ ಬರಗೂರು ಗ್ರಾಮದ ಪರಿಶಿಷ್ಟ ಯುವಕ ದಾನಪ್ಪನ ಹತ್ಯೆ ಮಾಡಿದ ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸಿಪಿಎಂತಾಲ್ಲೂಕು ಸಮಿತಿ ವತಿಯಿಂದ ನಗರದ ಸಮಾಜ ಕಲ್ಯಾಣ ಇಲಾಖೆ ಮುಂದೆ ಪ್ರತಿಭಟನೆ ನಡೆಸಲಾಯಿತು.

ಕಾರಟಗಿ ತಾಲ್ಲೂಕಿನ ಬರಗೂರು ಗ್ರಾಮದ ಪರಿಶಿಷ್ಟ ಯುವಕ ಕುರುಬರ ಯುವತಿಯನ್ನು ಪ್ರೀತಿ ಮಾಡಿದ ಕಾರಣಕ್ಕೆ ಕೊಲೆ ಮಾಡಲಾಗಿದೆ.ಈ ಘಟನೆ ನಡೆದು ಸುಮಾರು ದಿನ ಕಳೆದರು ಹತ್ಯೆ ಮಾಡಿದವರನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಿಲ್ಲ. ಪ್ರತಿ ದಿನ ಒಂದಲ್ಲ ಒಂದು ರೀತಿಯಿಂದ ಪರಿಶಿಷ್ಟರ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿವೆ. ಇಂತಹ ಹೇಯ ಕೃತ್ಯ ಖಂಡಿನೀಯ ಎಂದು ಪಕ್ಷದ ಮುಖಂಡರು ತಿಳಿಸಿದರು.

ಈಗಲಾದರೂ ಅಧಿಕಾರಿಗಳು ಎಚ್ಚೆತ್ತು ಇಂತಹ ಕೃತ್ಯಗಳು ಮರುಕಳಿಸದಂತೆ ನಿಗಾವಹಿಸಿ, ತಪ್ಪಿಸ್ಥರನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು. ದಾನಪ್ಪ ಕುಟುಂಬಕ್ಕೆ ಸರ್ಕಾರಿ ನೌಕರಿ, ₹20 ಲಕ್ಷ ನಗದು ಪರಿಹಾರ. 2 ಎಕರೆ ಕೃಷಿ ಭೂಮಿ, 6 ತಿಂಗಳ ಉಚಿತ ಪಡಿತರ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ತುಗ್ಲಪ್ಪ ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಬಸವರಾಜ ಮರಕುಂಪಿ, ಬಾಳಪ್ಪ ಹುಲಿಹೈದರ, ಕೃಷ್ಣಪ್ಪ, ಹುಸೇನಪ್ಪ, ಹುಲಗಪ್ಪ, ದುರುಗೇಶ, ಹನುಮಂತ ಮುಕ್ಕುಂಪಿ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.