ವಂಚನೆ
ಕೊಪ್ಪಳ: ಆಧಾರ್ ಕಾರ್ಡ್ ದುರ್ಬಳಕೆಯಾಗಿರಬಹುದು ಎಂದು ನಗರದ ವ್ಯಕ್ತಿಯೊಬ್ಬರನ್ನು ನಂಬಿಸಿ ತನಿಖೆ ಹೆಸರಿನಲ್ಲಿ ₹2.77 ಲಕ್ಷ ಆನ್‌ಲೈನ್ ಮೂಲಕ ವಂಚಿಸಲಾಗಿದೆ.
ಇಲ್ಲಿನ ದೇವರಾಜ್ ಅರಸ್ ಕಾಲೊನಿಯ ಹನಮಪ್ಪ ಕಲ್ಮಂಗಿ ವಂಚನೆಗೆ ಒಳಗಾದವರು. ಅಪರಿಚಿತ ವ್ಯಕ್ತಿಯೊಬ್ಬ ಮುಂಬೈನ ಪೆಡೆಕ್ಸ್ ಕೋರಿಯರ್ ಕಂಪನಿಯಿಂದ ಕರೆ ಮಾಡುತ್ತಿರುವುದಾಗಿ ನಂಬಿಸಿ ನಿಮ್ಮ ಹೆಸರಿನಲ್ಲಿ ಪಾರ್ಸಲ್ ಬಂದಿದೆ. ನಿಮ್ಮ ಆಧಾರ್ ಕಾರ್ಡ್ ದುರ್ಬಳಕೆಯಾಗಿರಬಹುದು; ಆದ್ದರಿಂದ ಮುಂಬೈನ ಕ್ರೈಂ ಬ್ರಾಂಚ್‌ನಲ್ಲಿ ದೂರು ದಾಖಲಿಸಿ ಎಂದು ಸಂಖ್ಯೆಯೊಂದನ್ನು ನೀಡಿದ್ದಾನೆ.
ಇದನ್ನು ನಿಜವೆಂದು ನಂಬಿದ ಹನಮಪ್ಪ 9207327419 ಸಂಖ್ಯೆಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಆಗ ದೂರು ದಾಖಲಿಸಿಕೊಂಡವರು ವ್ಯಾಟ್ಸ್ ಆ್ಯಪ್ ಮೂಲಕ ವಿಡಿಯೊ ಕರೆ ಮಾಡಿ ಆನ್‌ಲೈನ್ ಮೂಲಕ ತನಿಖೆ ಮಾಡುತ್ತೇವೆ. 72 ಗಂಟೆಗಳ ತನಕ ವಿಡಿಯೊ ಕಾಲಿಂಗ್ ಪರಿಶೀಲನೆಯಲ್ಲಿರಬೇಕು ಎಂದು ವಂಚಕರು ನಂಬಿಸಿದ್ದಾರೆ.
ವಿಚಾರಣೆಯ ನೆಪದಲ್ಲಿ ವಿಡಿಯೊ ಕಾಲ್ ಮೂಲಕವೇ ನಿಮ್ಮ ಹಣಕಾಸಿನ ವ್ಯವಹಾರವನ್ನು ಪರಿಶೀಲಿಸಬೇಕಾಗುತ್ತದೆ ಎಂದು ನಂಬಿಸಿ ಹಂತಹಂತವಾಗಿ ಹಣವನ್ನು ತಮ್ಮ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಈ ಕುರಿತು ಇಲ್ಲಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣವಾಗಿದೆ.
ಸೈಬರ್ ಅಪರಾಧಗಳ ಕುರಿತು ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ‘ಇತ್ತೀಚೆಗಿನ ದಿನಗಳಲ್ಲಿ ಆನ್‌ಲೈನ್ ವಂಚನೆ ಹೆಚ್ಚಾಗುತ್ತಿದೆ. ಶೇರು ಮಾರುಕಟ್ಟೆಯಲ್ಲಿ ಸಾಲ ಕೊಡುತ್ತೇವೆ, ಪೊಲೀಸ್ ಇಲಾಖೆಯಿಂದ ನಾವು ಕರೆ ಮಾಡುತ್ತಿದ್ದು ನಿಮಗೆ ಬಂದಿರುವ ಕೊರಿಯರ್‌ನಲ್ಲಿ ಡ್ರಗ್ಸ್ ಕಂಡುಬಂದಿದೆ ಎಂದು ಪೊಲೀಸ್ ಹೆಸರಿನಲ್ಲಿ ವಂಚನೆ ಮಾಡಲಾಗುತ್ತಿದೆ. ವಿಡಿಯೊ ಕಾಲ್ ಮಾಡಿ ಯಾರೂ ನಿಮ್ಮನ್ನು ಬಂಧಿಸುವುದಿಲ್ಲ. ಸೈಬರ್ ಅಪರಾಧಿಗಳು ವಂಚನೆ ಮಾಡಲು ಹೀಗೆ ಕುತಂತ್ರ ಮಾಡುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.