ADVERTISEMENT

ಮಾರಾಟವಾಗದೇ ಉಳಿದ ಮಣ್ಣಿನ ಒಲೆ

ಆರ್ಥಿಕ ನೆರವು ಘೋಷಣೆಗಾಗಿ ಕುಂಬಾರರ ಮನವಿ

ಕಿಶನರಾವ್‌ ಕುಲಕರ್ಣಿ
Published 7 ಜೂನ್ 2020, 13:41 IST
Last Updated 7 ಜೂನ್ 2020, 13:41 IST
ಹನುಮಸಾಗರದ ಕುಂಬಾರರು ತಯಾರಿಸಿದ ಮಣ್ಣಿನ ಒಲೆಗಳು ಮಾರಾಟವಾಗದೆ ಮನೆಯಲ್ಲಿಯೇ ಉಳಿದಿರುವುದು
ಹನುಮಸಾಗರದ ಕುಂಬಾರರು ತಯಾರಿಸಿದ ಮಣ್ಣಿನ ಒಲೆಗಳು ಮಾರಾಟವಾಗದೆ ಮನೆಯಲ್ಲಿಯೇ ಉಳಿದಿರುವುದು   

ಹನುಮಸಾಗರ: 'ಬೇಸಿಗೆಯ ಕಾಲ್ದಾಗ ಕೆರೆಯ ಮಣ್ಣು ತಂದು ಹದ ಮಾಡಿ, ಒಲೆಗಳನ್ನು ತಯಾರಿಸಿ ಒಣಗಿಸಿ ಸಂತೆಯಲ್ಲಿ ಮಾರಾಟ ಮಾಡುವುದು ನಮ್ಮ ಕೆಲಸ. ಆದ್ರ ಈ ಸಾರಿ ಕೊರೊನಾದಿಂದಾಗಿ ಯಾವ ಒಲೆಗಳೂ ಮಾರಾಟವಾಗಿಲ್ಲ. ಜೀವನ ನಡೆಸುವುದೇ ಕಷ್ಟವಾಗಿದೆ‘.

ಇದು ಫಕೀರಪ್ಪ ಕುಂಬಾರವರ ನೋವಿನ ಮಾತು.

ಹನುಮಸಾಗರದಲ್ಲಿ ತಯಾರಾಗುವ ಮಣ್ಣಿ ಒಲೆಗಳು ವಿಶಿಷ್ಟತೆ ಹೊಂದಿರುವ ಕಾರಣವಾಗಿ ಸಾಕಷ್ಟು ಬೇಡಿಕೆ ಇದೆ. ಸಿದ್ಧವಾದ ಒಲೆಗಳನ್ನು ಸುತ್ತಲಿನ ಸಂತೆಗಳಲ್ಲಿ ಮಾರಾಟ ಮಾಡಿ ಅದರಿಂದ ಇಲ್ಲಿನ ಕುಟುಂಬಗಳು ಉಪಜೀವನ ನಡೆಸುತ್ತವೆ. ಆದರೆ ಕೊರೊನಾ ಕಾರಣದಿಂದ ಸಂತೆಗಳು ರದ್ದಾಗಿರುವುದರಿಂದ ಒಲೆಗಳ ಮಾರಾಟವಿಲ್ಲದೆ ಮನೆಯಲ್ಲಿಯೇ ಉಳಿದಿವೆ.

ADVERTISEMENT

ಇಲ್ಲಿನ ಕುಂಬಾರರು ಮಣ್ಣಿನ ವಸ್ತುಗಳ ತಯಾರಿಕೆಯ ಜೊತೆಗೆ ಮಣ್ಣಿನ ಒಲೆಗಳನ್ನೇ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸುತ್ತಿರುವುದು ಕಂಡು ಬರುತ್ತಿದೆ.

ಹೊಲ ಗದ್ದೆಗಳಲ್ಲಿ ರೈತರು ಈಗಲೂ ಇದೇ ಒಲೆಗಳನ್ನು ಬಳಸುತ್ತಿರುವುದು, ಬಯಲು ಪ್ರದೇಶದಲ್ಲಿ ವಾಸವಿರುವವರು, ಗುಡಿ ಗುಂಡಾರಗಳ ಆವರಣದಲ್ಲಿ ನೆಲೆಸಿರುವರಿಗೆ, ಅಲೆಮಾರಿ ಜನಾಂಗದವರಿಗೆ, ಜಾತ್ರಾ ಸಮಯದಲ್ಲಿ ಸಾಮೂಹಿಕವಾಗಿ ಅಡುಗೆ ತಯಾರು ಮಾಡುವವರಿಗೆ ಈ ಮಣ್ಣಿನ ಒಲೆಗಳು ಅವಶ್ಯವಾಗಿ ಬೇಕಾಗುವುದರಿಂದ ಮಣ್ಣಿನ ಒಲೆಗಳಿಗೆ ಬೇಡಿಕೆ ಹಾಗೆ ಉಳಿದಿದೆ.

ಮನೆಯ ಅಂಗಳ, ಕಟ್ಟೆ, ಮರದ ಅಡಿಯಲ್ಲಿ ಒಲೆಗಳನ್ನು ಇಟ್ಟಿರುವುದು ಕಾಣುತ್ತದೆ. ಇವರು ತಯಾರಿಸುತ್ತಿರುವ ಈ ನೂತನ ಒಲೆಯಲ್ಲಿ ಗ್ರಾಮೀಣ ತಂತ್ರಗಾರಿಕೆ ತುಂಬಿರುವುದರಿಂದ ಮನೆಯಲ್ಲಿ ಹೊಗೆ ಆಗುವುದಿಲ್ಲ. ಹೀಗಾಗಿ ಹೆಚ್ಚು ಬೇಡಿಕೆ ಇದೆ. ಆದರೆ, ಸಂತೆ ಇಲ್ಲದ ಕಾರಣ ಮಾರಾಟವಾಗಿಲ್ಲ.

‘ಉದ್ರಿ ಹೇಳಿ ಕೆರೆ ಮಣ್ಣು, ಕಟ್ಟಿಗೆ ತಂದಿವಿ. ಮಣ್ಣಿಗೆ ಸೇರಿಸುವ ಕಟುಗ (ಜಿಗಟು ಮಣ್ಣು), ಕೂಲಿ ಆಳು, ದಿನದ ಖರ್ಚು ಹೀಗೆಲ್ಲ ಮೈಮ್ಯಾಲೆ ಬಂದಾವ್ರಿ, ಸಂತಿ ಚಾಲು ಆದ್ರ ನಮಗ ತೊಂದರೆ ಇಲ್ರಿ. ಮೂರು ತಿಂಗಳದಿಂದ ಕೈಯಾಗ ನಯಾಪೈಸೆ ಇಲ್ಲದೆ ಬದುಕು ನಡೆಸುವ ಕಷ್ಟ ನಮ್ಮದಾಗೈತೆ' ಎಂದು ಫಕೀರಪ್ಪ ಕುಂಬಾರ ಹಾಗೂ ಶಾಂತಮ್ಮ ಅವರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.