ADVERTISEMENT

ಕೊಪ್ಪಳ: ಬೆಲೆ ಏರಿಕೆ; ಗುಣಮಟ್ಟವೂ ಕೊರತೆ

ಬೇರೆ ಜಿಲ್ಲೆಗಳಲ್ಲಿ ನಿರಂತರ ಮಳೆಗೆ ಹಾಳಾದ ಬೆಳೆ, ಚುಕ್ಕಿರೋಗದ ಬಾಧೆ

ಪ್ರಮೋದ ಕುಲಕರ್ಣಿ
Published 22 ಆಗಸ್ಟ್ 2025, 5:39 IST
Last Updated 22 ಆಗಸ್ಟ್ 2025, 5:39 IST
ಕೊಪ್ಪಳದ ಜವಾಹರ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬರು ಗ್ರಾಹಕರನ್ನು ಎದುರು ನೋಡುತ್ತಿದ್ದ ಸಂದರ್ಭ –ಪ್ರಜಾವಾಣಿ ಚಿತ್ರ/ಭರತ್ ಕಂದಕೂರ
ಕೊಪ್ಪಳದ ಜವಾಹರ ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಮಹಿಳೆಯೊಬ್ಬರು ಗ್ರಾಹಕರನ್ನು ಎದುರು ನೋಡುತ್ತಿದ್ದ ಸಂದರ್ಭ –ಪ್ರಜಾವಾಣಿ ಚಿತ್ರ/ಭರತ್ ಕಂದಕೂರ   

ಕೊಪ್ಪಳ: ಜಿಲ್ಲೆಗೆ ಪ್ರಮುಖವಾಗಿ ತರಕಾರಿ ಬರುವ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಅವುಗಳ ಬೆಲೆ ಏರಿಕೆಯಾಗಿದ್ದು, ಗುಣಮಟ್ಟ ಸಂಪೂರ್ಣವಾಗಿ ಕುಸಿದು ಹೋಗಿದೆ.

ಜಿಲ್ಲೆಯ ಕೆಲವು ಭಾಗದಲ್ಲಿ ಮಾತ್ರ ಉತ್ತಮ ಮಳೆಯಾಗಿದ್ದು, ಇಲ್ಲಿ ಬೆಳೆದ ತರಕಾರಿ ಮತ್ತು ಕಾಯಿಪಲ್ಲೆಗೆ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ. ನಿರಂತರ ಮಳೆ ಮತ್ತು ಸದಾ ತಂಪನೆಯ ವಾತಾವರಣದ ಪರಿಣಾಮ ತರಕಾರಿಗಳ ಮೇಲೂ ಆಗಿದ್ದು ಟೊಮೆಟೊಗಳ ಮೇಲೆ ಚುಕ್ಕಿಗಳು ಕಾಣಿಸಿಕೊಂಡು ಮಾರಾಟ ಕಡಿಮೆಯಾಗಿದೆ. ಮಹಾರಾಷ್ಟ್ರ ಭಾಗದಿಂದ ಬೆಳಗಾವಿ, ಹುಬ್ಬಳ್ಳಿ ಮಾರುಕಟ್ಟೆಗೆ ಉಳ್ಳಾಗಡ್ಡಿ ಬರುತ್ತಿದ್ದು, ಅಲ್ಲಿಂದ ಇಲ್ಲಿನ ಸಗಟು ಮಾರುಕಟ್ಟೆಗೆ ತರಲಾಗುತ್ತಿದೆ. ಮಹಾರಾಷ್ಟ್ರದಲ್ಲಿಯೂ ಉತ್ತಮ ಮಳೆಯಿರುವ ಕಾರಣ ಅಲ್ಲಿನ ಹಸಿ ಉಳ್ಳಾಗಡ್ಡಿಯೇ ಇಲ್ಲಿನ ಜನರಿಗೆ ಆಧಾರವಾಗುತ್ತಿದೆ.

ಸಗಟು ಮಾರುಕಟ್ಟೆಯಲ್ಲಿ ನಾಲ್ಕೈದು ದಿನಗಳ ಹಿಂದೆ 50 ಕೆ.ಜಿ. ಉಳ್ಳಾಗಡ್ಡಿಗೆ ₹800 ಇದ್ದ ಬೆಲೆ ಈಗ ₹1100ರಿಂದ ₹1200ಕ್ಕೆ ಏರಿಕೆಯಾಗಿದೆ. ಇದರಲ್ಲಿ ಅಲ್ಲಲ್ಲಿ ಮಾತ್ರ ಇರುವ ಒಣಗಡ್ಡಿಗಳಿಗೆ ಹೆಚ್ಚು ಬೆಲೆಯಿದ್ದರೆ ಹಸಿಗಡ್ಡೆಗಳನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ₹30ರಿಂದ ₹40ಕ್ಕೆ ಮಾರಾಟ ಮಾಡಲಾಗುತ್ತಿದೆ.

ADVERTISEMENT

ತಂಪಾದ ವಾತಾವರಣದ ಪರಿಣಾಮ ಬೀಟ್‌ರೂಟ್‌ ಹಾಗೂ ಬೀನ್ಸ್‌ ಮಾರುಕಟ್ಟೆಗೆ ಬರುವ ಮೊದಲೇ ಹಾಳಾಗುತ್ತಿವೆ. ಆಲೂಗಡ್ಡಿ ಪ್ರತಿ ಕೆ.ಜಿ.ಗೆ ₹40, ಡೊಣ್ಣ ಮೆಣಸಿನಕಾಯಿ ಪ್ರತಿ ಕೆ.ಜಿ.ಗೆ ₹100ಕ್ಕೆ ಮಾರಾಟವಿದೆ. ಮಳೆಯಿರುವ ಪ್ರದೇಶದಿಂದ ತರಕಾರಿಗಳನ್ನು ತರುತ್ತಿರುವುದಿಂದ ಇಲ್ಲಿ ಜನರ ಕೈಗೆ ಸೇರುವಷ್ಟರಲ್ಲಿ ಗುಣಮಟ್ಟ ಸಂಪೂರ್ಣವಾಗಿ ಹಾಳಾಗುತ್ತಿದೆ.

ಈ ಕುರಿತು ಪ್ರತಿಕ್ರಿಯಿಸಿದ ಚಿಲ್ಲರೆ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಕ ಮಾಡುವವರು ’ಟೊಮೆಟೊ, ಬೀನ್ಸ್‌ ಸಾಕಷ್ಟು ಕೆಟ್ಟುಹೋಗಿ ಮಾರುಕಟ್ಟೆಗೆ ಬರುತ್ತಿದ್ದು, ಉಳ್ಳಾಗಡ್ಡಿ ಹಸಿಯಾಗಿರುತ್ತವೆ. ಸಗಟು ಮಾರುಕಟ್ಟೆಯಿಂದ ತಂದು ಜನರ ಕೈಗೆ ಹೋಗುವಷ್ಟರಲ್ಲಿ ಕಡಿಮೆ ಕೆಟ್ಟಿದ್ದರೆ ಮಾತ್ರ ನಮಗೆ ಅನುಕೂಲವಾಗುತ್ತದೆ. ಒಂದು ದಿನ ವ್ಯಾಪಾರ ನೀರಸವಾದರೆ ಅವುಗಳನ್ನು ಬೀದಿಗೆ ಚೆಲ್ಲಬೇಕು ಅಥವಾ ಜಾನುವಾರುಗಳಿಗೆ ಹಾಕಬೇಕಾದ ಪರಿಸ್ಥಿತಿಯಿದೆ. ಬೆಳಗಿನ ಜಾವವೇ ಎದ್ದು ತರಕಾರಿ ತಂದು ದಿನಪೂರ್ತಿ ಮಾರಾಟ ಮಾಡಿದರೂ ಲಾಭ ಕಡಿಮೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಮಳೆ; ತರಕಾರಿ ಮೇಲೆ ಪರಿಣಾಮ | ಟೊಮೆಟೊಗೆ ಚುಕ್ಕೆ ರೋಗದ ಸಮಸ್ಯೆ | ಜನರ ಕೈ ಸೇರುವ ಮೊದಲೇ ಕೆಡುತ್ತಿರುವ ಬೀನ್ಸ್‌
ತರಕಾರಿ ಬರುತ್ತಿದ್ದರೂ ಗುಣಮಟ್ಟದಿಂದ ಸಿಗುತ್ತಿಲ್ಲ. ಟೊಮೆಟೊ ಮೇಲೆ ಚುಕ್ಕಿಗಳು ಇರುವುದರಿಂದ ಗ್ರಾಹಕರು ಮೊದಲಿನ ಹಾಗೆ ಖರೀದಿ ಮಾಡುತ್ತಿಲ್ಲ.
ಅಭಿಷೇಕ ತರಕಾರಿ ವ್ಯಾಪಾರಿ ಲೇಬರ್‌ ವೃತ್ತ ಕೊಪ್ಪಳ
ಮಳೆಯಿಂದಾಗಿ ತರಕಾರಿಗಳು ಗುಣಮಟ್ಟದಿಂದ ಸಿಗುತ್ತಿಲ್ಲ. ಆದರೂ ಇರುವುದರಲ್ಲಿ ಒಂದಷ್ಟು ಆರಿಸಿಕೊಂಡು ಖರೀದಿ ಮಾಡುವುದು ಅನಿವಾರ್ಯವಾಗಿದೆ.
ವೀಣಾ ಹಿರೇಮಠ ಗೃಹಿಣಿ ಕೊಪ್ಪಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.