ADVERTISEMENT

ಕೊಪ್ಪಳ | ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ದೂರು ದಾಖಲು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 7:22 IST
Last Updated 25 ಫೆಬ್ರುವರಿ 2026, 7:22 IST
   

ಕೊಪ್ಪಳ: ಜಿಲ್ಲೆಯ ವಸತಿ ಶಾಲೆಯೊಂದರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವಾಗಿದ್ದು, ಕೃತ್ಯ ಎಸಗಿದ ಬಾಲಕಿ ಸಂಬಂಧಿಕರ ವಿರುದ್ಧ ಕನಕಗಿರಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ.

ಸಂತ್ರಸ್ತ ಬಾಲಕಿ ದೂರು ನೀಡಿದ್ದು ‘ನನ್ನ ತಾಯಿಯ ಅಣ್ಣನ ಮಗ ಪರಿಚಿತನಾಗಿದ್ದ. ಶಾಲೆಗೆ ರಜೆ ಕೊಟ್ಟಾಗ ಆಗಾಗ ನಮ್ಮ ಮಾವನ ಮನೆಯಿರುವ ಹೊಸ ಮಲಪನಗುಡಿಗೆ ಹೋಗುತ್ತಿದ್ದೆ.‌ ಆತ ಸಲುಗೆಯಿಂದ ಮಾತನಾಡಿ ನಿನ್ನ ಪ್ರೀತಿಸುತ್ತೇನೆ. ನಿನ್ನನ್ನೇ ಮದುವೆ ಮಾಡಿಕೊಳ್ಳುತ್ತೇನೆ ಎಂದು ಪುಸಲಾಯಿಸಿದ್ದಾನೆ. ಕಳೆದ ದೀಪಾವಳಿ ಸಂದರ್ಭದಲ್ಲಿ ಮಲಪನಗುಡಿಗೆ ಹೋಗಿದ್ದೆ. ಮನೆಯಲ್ಲಿ ಯಾರು ಇಲ್ಲದ್ದಾಗ ಮಾವನ ಮಗ ಸಂಭೋಗ ಮಾಡಿದ್ದಾನೆ. ನಂತರ ಈ ವಿಷಯ ಯಾರಿಗೂ ಹೇಳಬೇಡ’ ಎಂದು ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾಳೆ. 

ಇದರಿಂದ ಎರಡು ತಿಂಗಳು ಋತುಸ್ರಾವ ಆಗಿರಲಿಲ್ಲ. ಇದೇ ಫೆ.19ರಂದು ರಾತ್ರಿ ಮುಟ್ಟು ಕಾಣಿಸಿಕೊಂಡು ರಕ್ತಸ್ರಾವ ಆಗಿ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ನೋವು ತಾಳಲಾರದೇ ಹಾಸ್ಟೆಲ್ ವಾರ್ಡನ್‌ಗೆ ಮಾಹಿತಿ ನೀಡಿದ್ದೇನೆ. ವಾರ್ಡನ್‌ ಪೋಷಕರಿಗೆ ಕರೆ ಮಾಡಿ ಅವರೊಂದಿಗೆ ಕಳಿಸಿದ್ದಾರೆ. ಘಟನೆಗೆ ಕಾರಣವಾದ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಹೇಳಿದ್ದಾಳೆ.

ADVERTISEMENT

ಕ್ರಮಕ್ಕೆ ಆಗ್ರಹ (ಗಂಗಾವತಿ ವರದಿ): ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಾಚಾರ್ಯ ಹಾಗೂ ಸಿಬ್ಬಂದಿ ಯತ್ನಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಸ್ಎಫ್ಐನ ಪದಾಧಿಕಾರಿಗಳು ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿದರು.

‘ಕುಕನೂರು ತಾಲ್ಲೂಕಿನ ಪ್ರಕರಣ ಮಾಸುವ ಮುನ್ನವೇ ವಸತಿ ನಿಲಯದಲ್ಲಿ ಮತ್ತೊಂದು ಘಟನೆ ಸಂಭವಿಸಿರುವುದು ಖಂಡನೀಯ. ಇದು ವಿದ್ಯಾರ್ಥಿನಿಯರ ಸುರಕ್ಷತೆ, ಆಡಳಿತಾತ್ಮಕ ಜವಾಬ್ದಾರಿಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಘಟನೆ ನಡೆದ ನಂತರ ಮೂರು ದಿನಗಳ ಕಾಲ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿರುವುದು ಹಾಗೂ ಕೆಲಸದಲ್ಲಿ ಬೇಜವಾಬ್ದಾರಿ ಸ್ಪಷ್ಟವಾಗಿ ಕಾಣುತ್ತಿದೆ’ ಎಂದು ಹೋರಾಟಗಾರರು ಆರೋಪಿಸಿದರು.

ಎಸ್ಎಫ್ಐ ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ, ಜಿಲ್ಲಾ ಕಾರ್ಯದರ್ಶಿ ಬಾಲಾಜಿ ಚಳ್ಳಾರಿ, ಉಪಾಧ್ಯಕ್ಷ ನಾಗರಾಜ.ಯು, ಷರೀಫ್, ಬಸಯ್ಯ ಹಿರೇಮಠ, ಟಿಪ್ಪು, ಗಿರಿ ಸೇರಿ ಎಸ್ಎಫ್ಐ ಸದಸ್ಯರು ಉಪಸ್ಥಿತರಿದ್ದರು.

ಅಮಾನತಿಗೆ ಆಗ್ರಹ ಕನಕಗಿರಿ: ಈ ಘಟನೆಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ತೋರಿದ ಪ್ರಾಂಶುಪಾಲ ಹಾಗೂ ವಾರ್ಡನ್ ಅವರನ್ನು ಅಮಾನತು ಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸದಸ್ಯ ಪಾಮಣ್ಣ ಅರಳಿಗನೂರು ಒತ್ತಾಯಿಸಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಸೋಮವಾರ ಮನವಿ‌ ಮಾಡಿದ್ದು ‘ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಾಳಜಿ‌ಯಿಲ್ಲ. ವಿದ್ಯಾರ್ಥಿಗಳನ್ನು ಪ್ರತಿ ತಿಂಗಳು ಆಸ್ಪತ್ರೆಗೆ ಕರೆದುಕೊಂಡು‌ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಲ್ಲ’ ಎಂದಿದ್ದಾರೆ.   ‘ಅಧಿಕಾರಿಗಳು ಜಿಲ್ಲೆಯ ವಿವಿಧ ವಸತಿ ಶಾಲೆ ಮತ್ತು ಕಾಲೇಜುಗಳಿಗೆ ಕಾಲಕಾಲಕ್ಕೆ ಭೇಟಿ ನೀಡದೇ ನಿರ್ಲಕ್ಷ್ಯ ತೋರಿದ ಪರಿಣಾಮ‌ ವಸತಿ ಶಾಲೆಗಳಲ್ಲಿ ಪದೇ ಪದೇ ಇಂಥ ಘಟನೆಗಳು ನಡೆಯುತ್ತಿವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.