ಕೊಪ್ಪಳ: ಎರಡು ತಿಂಗಳು ಬಿರುಬಿಸಿಲಿಗೆ ಬೇಸತ್ತು ಹೋಗಿದ್ದ ಜಿಲ್ಲೆಯ ಜನರಿಗೆ ಈಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಾತಾವರಣ ತಂಪೆನಿಸುತ್ತಿದೆ. ಒಂದೆಡೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆ ಚುರುಕು ಪಡೆದುಕೊಂಡಿದ್ದರೆ, ಇನ್ನೊಂದಡೆ ಜನರಿಗೆ ಅನೈರ್ಮಲ್ಯ ವಾತಾವರಣದಿಂದ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ.
ಪ್ರತಿ ಮಳೆಗಾಲ ಸಮೀಪಿಸಿದಾಗ ನಗರದ ಬಡಾವಣೆಗಳಲ್ಲಿರುವ ಚರಂಡಿಗಳನ್ನು ಸ್ವಚ್ಛಗೊಳಿಸುವುದು, ಒಂದೇ ಕಡೆ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಚರಂಡಿಯಲ್ಲಿ ತ್ಯಾಜ್ಯದ ರಾಶಿ ಬಿದ್ದಿದ್ದರೆ ತೆರವು ಮಾಡುವುದು ಹಾಗೂ ಜನರ ಆರೋಗ್ಯಕ್ಕೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ನಗರಸಭೆ ಮತ್ತು ಆರೋಗ್ಯ ಇಲಾಖೆಯ ಕರ್ತವ್ಯ.
ಆದರೆ ‘ಪ್ರಜಾವಾಣಿ’ ತಂಡ ಮಳೆಗಾಲದ ಸಿದ್ಧತೆಗೆ ಸ್ಥಳೀಯ ಆಡಳಿತ ಹೇಗೆ ಸಿದ್ಧತೆ ಮಾಡಿಕೊಂಡಿದೆ ಎಂದು ಪರಿಶೀಲಿಸಲು ನಗರದ ವಿವಿಧ ವಾರ್ಡ್‌ಗಳಿಗೆ ತೆರಳಿದಾಗ ಕಂಡಿದ್ದು ಕೆಟ್ಟ ವಾಸನೆ. ಮತ್ತೆ ಮಳೆ ಬಂದರೆ ರೋಗ ಬರುವ ಮುನ್ಸೂಚನೆ. ಅದರಲ್ಲಿಯೂ ವಿಶೇಷವಾಗಿ ಗಣೇಶ ತೆಗ್ಗು ಎಂದೇ ಹೆಸರಾದ ಗಣೇಶ ನಗರ ಬಡಾವಣೆ ಅನೈರ್ಮಲ್ಯದ ಕೂಪವಾಗಿದೆ. ಈ ಬಡಾವಣೆಯ ಕೆಲವು ಓಣಿಗಳಲ್ಲಿ ಒಂದು ಬದಿಯಲ್ಲಿ ಗಟಾರದ ಮೇಲೆ ನಗರಸಭೆ ಕಲ್ಲುಗಳನ್ನು ಹಾಕಿದ್ದರೆ, ಇನ್ನೊಂದು ಬದಿಯಲ್ಲಿ ಜನವಸತಿ ಇರುವ ಪ್ರದೇಶದಲ್ಲಿ ಕೆಟ್ಟ ವಾಸನೆ ರಾಚುತ್ತದೆ.
ಪ್ರತಿ ವರ್ಷ ಸ್ವಲ್ಪ ಜೋರಾಗಿ ಮಳೆ ಬಂದರೂ ಕೊಪ್ಪಳ ಹಾಗೂ ಭಾಗ್ಯನಗರವನ್ನು ವಿಭಜಿಸುವ ಬೃಹತ್ ನೀರು ಹರಿಯುವ ಗಟಾರದ ನೀರು ಗಣೇಶ ನಗರದ ಮನೆಗಳಿಗೆ ನುಗ್ಗುತ್ತದೆ. ಈ ಚರಂಡಿ ಹೆಸರಿಗಷ್ಟೇ ಬೃಹತ್ ಇದ್ದರೂ ವಾಸ್ತವದಲ್ಲಿ ಪ್ರತಿವರ್ಷವೂ ಒಂದಷ್ಟು ಕಡಿಮೆಯಾಗುತ್ತಲೇ ಸಾಗಿದೆ. ಒತ್ತುವರಿ ತೆರವು ಮಾಡುತ್ತೇವೆ ಎಂದು ಹೇಳುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಘಟನೆ ಒಂದಷ್ಟು ದಿನಗಳ ಬಳಿಕ ಸಮಸ್ಯೆಯತ್ತ ತಿರುಗಿಯೂ ನೋಡುವುದಿಲ್ಲ ಎಂದು ಗಣೇಶ ನಗರದ ನಿವಾಸಿಗಳು ಬೇಸರ ವ್ಯಕ್ತಪಡಿಸುತ್ತಾರೆ.
ಕೊಪ್ಪಳದ ಮೂಲಕ ಭಾಗ್ಯನಗರ ಭಾಗದಲ್ಲಿ ಹರಿಯುವ ಚರಂಡಿ ಮುಂದೆಯೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಶಂಕ್ರಮ್ಮ ಹಡಪದ ಎನ್ನುವ ಗೃಹಿಣಿ ‘ಮಳೆ ನೀರಿನ ಜೊತೆಗೆ ಚರಂಡಿ ನೀರು, ತ್ಯಾಜ್ಯದ ರಾಶಿ, ಪ್ಲಾಸ್ಟಿಕ್ ಎಲ್ಲವೂ ಹರಿದು ಬರುತ್ತವೆ. ಸ್ವಲ್ಪ ಮಳೆ ಜೋರಾದರೂ ಮನೆಯ ಮೆಟ್ಟಿಲತನಕ ನೀರು ಬರುತ್ತದೆ. ಮೊದಲು ಬೇರೊಂದು ಮನೆಯಲ್ಲಿ ವಾಸವಿದ್ದಾಗ ಚರಂಡಿ ನೀರಿನದ್ದೇ ಸಮಸ್ಯೆಯಿತ್ತು. ಇಲ್ಲಿಯೂ ಅದೇ ಸಮಸ್ಯೆ ಕಾಡುತ್ತಿದೆ. ಸಂಜೆಯಾಗುತ್ತಿದ್ದಂತೆಯೇ ಮನೆಯ ಎಲ್ಲ ಕಿಟಕಿ ಹಾಗೂ ಬಾಗಿಲುಗಳನ್ನು ಹಾಕಲೇಬೇಕು. ಇಲ್ಲವಾದರೆ ಸೊಳ್ಳೆಗಳ ಕಾಟ ತಡೆಯಲು ಅಗುವುದಿಲ್ಲ’ ಎಂದು ಸಮಸ್ಯೆ ತೋಡಿಕೊಂಡರು.
ಸಮಸ್ಯೆಗಳ ಮೂಟೆಗಳನ್ನು ಹೊತ್ತ ಗಣೇಶ ನಗರದಲ್ಲಿ ಎರಡು ದಶಕಗಳಿಂದ ವಾಸವಿರುವ ಗೃಹಿಣಿ ವಿಜಯಲಕ್ಷ್ಮಿ ‘ಮನೆಯ ಮುಂದೆಯೇ ಖಾಲಿ ನಿವೇಶನವಿದೆ. ಬೇಡವೆಂದರೂ ಜನ ಅಲ್ಲಿ ಕಸ ಚೆಲ್ಲುವುದರಿಂದ ಸಾಮಾನ್ಯ ದಿನಗಳಲ್ಲಿಯೇ ಕೆಟ್ಟ ವಾಸನೆ ತಡೆಯಲು ಆಗುವುದಿಲ್ಲ. ಮಳೆಗಾಲ ಬಂದರಂತೂ ಚರಂಡಿ ತುಂಬಿ ರಸ್ತೆಗೆಲ್ಲ ಕೊಳಚೆ ನೀರು ಹರಿಯುತ್ತದೆ. ಕಳೆದ ವರ್ಷ ಮಳೆಯಿಂದಾಗಿ ಬಡಾವಣೆ ಜನರಿಗೆ ಸಮಸ್ಯೆಯಾದಾಗ ಬಂದಿದ್ದ ಜನಪ್ರತಿನಿಧಿಗಳು ಮತ್ತೆ ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ’ ಎಂದು ಹೇಳಿದರು. ಅದೇ ಬಡಾವಣೆಯ ಯುವಕ ಶ್ರೀಕಾಂತ್ ಇದಕ್ಕೆ ಧ್ವನಿಗೂಡಿಸಿದರು.
ಜಿಲ್ಲಾ ಕೇಂದ್ರದ ಪ್ರಮುಖ ನಗರಗಳಲ್ಲಿ ಒಂದಾದ ಕಲ್ಯಾಣ ನಗರದಲ್ಲಿಯೂ ಇದೇ ಸಮಸ್ಯೆ. ಪದಕಿ ಲೇಔಟ್, ಶಿವಗಂಗಾ ನಗರ ಹೀಗೆ ಅನೇಕ ಬಡಾವಣೆಗಳಲ್ಲಿ ಚರಂಡಿಯಲ್ಲಿ ಸರಾಗವಾಗಿ ನೀರು ಹರಿಯುವುದೇ ದೊಡ್ಡ ಸಮಸ್ಯೆಯಾಗಿದೆ. ಕಲ್ಯಾಣ ನಗರದಲ್ಲಿ ಕೆಲವು ಮನೆಗಳ ಹಿಂದೆ ಕೊಳಕು ಜಲರಾಶಿಯೇ ಇದ್ದು, ಅಲ್ಲಿ ವಾಸವಿರುವ ಜನ ಸದಾ ಹಿತ್ತಿಲ ಬಾಗಿಲು ಮುಚ್ಚಿಕೊಂಡೇ ಇರಬೇಕಾದ ಅನಿವಾರ್ಯತೆಯಿದೆ. ಗಣೇಶ ನಗರದಲ್ಲಿ ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿಯೇ ಕೊಳಚೆ ನೀರು ಮೂಗಿಗೆ ಅಡರುತ್ತದೆ.
ಮಳೆಗಾಲಕ್ಕೂ ಮೊದಲೇ ನಗರಸಭೆ ಆಡಳಿತ ಹಾಗೂ 31 ವಾರ್ಡ್‌ಗಳ ಸದಸ್ಯರು ತಮ್ಮ ವ್ಯಾಪ್ತಿಯ ಬಡಾವಣೆಗಳ ಕುಂದುಕೊರತೆಗಳನ್ನು ಆಲಿಸಬೇಕು, ಈಗ ಕೋವಿಡ್ ಪ್ರಕರಣಗಳ ಸಂಖ್ಯೆಯೂ ನಿಧಾನವಾಗಿ ಹೆಚ್ಚಾಗುತ್ತಿರುವುದು ಹಾಗೂ ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗದ ಭೀತಿಯಿರುವ ಕಾರಣ ಚರಂಡಿ ನೀರಿನ ಮೇಲೆ ರಾಸಾಯನಿಕ ಸಿಂಪಡಿಸುವ ಕೆಲಸವಾದರೂ ಆಗಬೇಕು ಎಂದು ಜನ ಹೇಳುತ್ತಾರೆ.
ಮಳೆ ನೀರಿನ ಜೊತೆಗೆ ಅದರಲ್ಲಿನ ಹಾವುಗಳು ಚೇಳುಗಳು ಕೂಡ ಮನೆಯ ಮೆಟ್ಟಿಲು ತನಕ ಬರುತ್ತವೆ. ಕೆಟ್ಟ ವಾಸನೆಯಂತೂ ನಿರಂತರ. ಈ ಸಮಸ್ಯೆಗೆ ಕಾಯಂ ಪರಿಹಾರ ಒದಗಿಸಬೇಕು. ಸಂಜೆಯಾದರೆ ಸಾಕು ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ಮುಚ್ಚಬೇಕಾದ ದುಸ್ಥಿತಿಯಿದೆಕಮಲಮ್ಮ ಹಡಪದ ಗಣೇಶ ನಗರ
ಆರು ವರ್ಷಗಳಿಂದ ವಾಸವಾಗಿದ್ದೇನೆ. ಮಳೆ ಸ್ವಲ್ಪ ಜೋರಾಗಿ ಬಂದರೂ ಮನೆಯ ಮುಂದೆ ಚರಂಡಿ ನೀರು ಬರುವುದು ನಿಶ್ಚಿತ. ನಗರಸಭೆಯಿಂದ ಕಸ ಸಂಗ್ರಹ ವಾಹನ ಬಂದರೂ ಜನ ಕಸವನ್ನು ಚರಂಡಿಯಲ್ಲಿ ಚೆಲ್ಲುತ್ತಾರೆಬಸಣ್ಣ ಮಂಗಳೂರು ಗಣೇಶ ನಗರ
ಖಾಲಿ ನಿವೇಶನಗಳಲ್ಲಿ ಕಸ ಹಾಕುವುದು ಮತ್ತು ಮನೆಯ ಮುಂದಿನ ಅವ್ಯವಸ್ಥೆಯ ಚರಂಡಿ ಇರುವುದು ನಮಗೆ ಶಾಪಗ್ರಸ್ತದಂತೆ ಆಗಿದೆ. ಬಡಾವಣೆಯ ಜನ ಕೂಡ ತಮ್ಮ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳಲು ಆದ್ಯತೆ ಕೊಡಬೇಕು. ನಗರಸಭೆ ಆಡಳಿತ ಮಳೆಗಾಲದ ಸಮಯದಲ್ಲಾದರೂ ಜನರ ಆರೋಗ್ಯ ರಕ್ಷಣೆಗೆ ಒತ್ತು ಕೊಡಬೇಕುರೇಣುಕಪ್ಪ ಹುರಿಗೆಜ್ಜಿ ಗಣೇಶ ನಗರದ ನಿವಾಸಿ
ದುಃಸ್ವಪ್ನವಾಗಿ ಕಾಡುವ ದೇವಮ್ಮನ ಮನೆ
ಕಳೆದ ವರ್ಷದ ಜೂನ್‌ನಲ್ಲಿ ಸುರಿದ ಭಾರಿ ಮಳೆಗೆ ಕೊಪ್ಪಳದ ಗಣೇಶ ನಗರದಲ್ಲಿದ್ದ ದೇವಮ್ಮ ರಾಮಣ್ಣ ಕಿನ್ನಾಳ ಅವರ ಕಿರಿದಾದ ಮನೆ ಮಳೆ ನೀರಿನಿಂದಾಗಿ ಚರಂಡಿಯಂತಾಗಿತ್ತು. ಆ ಮನೆಯಲ್ಲಿ ಮಳೆ ನೀರಿನಿಂದಾಗಿ ಚೆಲ್ಲಾಪಿಲ್ಲಿಯಾಗಿ ದಿನಬಳಕೆ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಬಟ್ಟೆಗಳು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಪುಸ್ತಕಗಳು ನೀರು ಪಾಲಾಗಿದ್ದವು. ಕಳೆದ ವರ್ಷದ ರೀತಿಯಲ್ಲಿಯೂ ಈಗಲೂ ಅದೇ ರೀತಿಯ ಪರಿಸ್ಥಿತಿ ಆ ಮನೆಯ ಮುಂದಿದೆ.
ಚರಂಡಿಗೆ ಸ್ವಚ್ಛತೆಗೆ ತುರ್ತು ಸಭೆ: ಪಟೇಲ್
ಕೊಪ್ಪಳ: ಮಳೆಗಾಲ ಈಗಷ್ಟೇ ಆರಂಭವಾಗುತ್ತಿದ್ದು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಅದಕ್ಕಾಗಿ ಸದಸ್ಯರ ಮತ್ತು ಅಧಿಕಾರಿಗಳ ತುರ್ತು ಸಭೆ ಕರೆಯಲಾಗುವುದು ಎಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕೊಪ್ಪಳದ ಗಣೇಶ ನಗರದ ಸಮಸ್ಯೆಯ ಗಂಭೀರತೆಯ ಬಗ್ಗೆ ಅರಿವು ಇದೆ. ಇತ್ತೀಚೆಗಷ್ಟೇ ಅಲ್ಲಿಗೆ ಭೇಟಿ ನೀಡಿದ್ದೇನೆ. ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಆ ಬಡಾವಣೆಯ ಅಭಿವೃದ್ಧಿಗೆ ₹ 1.49 ಕೋಟಿಯ ವಿಶೇಷ ಯೋಜನೆ ರೂಪಿಸಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.