ADVERTISEMENT

ಕುಕನೂರು | ಗ್ಯಾರಂಟಿಯಿಂದ ಜನರ ಜೀವನಮಟ್ಟ ಸುಧಾರಣೆ: ಸಂಗಮೇಶ ಗುತ್ತಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 7:00 IST
Last Updated 13 ಡಿಸೆಂಬರ್ 2025, 7:00 IST
ಕುಕನೂರು ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ಗೃಹಲಕ್ಷ್ಮಿ ಹಣದಿಂದ ಎಲ್ಐಸಿ ಪಾಲಿಸಿ ಮಾಡಿಸಿದ ಜ್ಯೋತಿ ಕನಕಪ್ಪ ಅವರನ್ನು ಗೌರವಿಸಲಾಯಿತು
ಕುಕನೂರು ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ಗೃಹಲಕ್ಷ್ಮಿ ಹಣದಿಂದ ಎಲ್ಐಸಿ ಪಾಲಿಸಿ ಮಾಡಿಸಿದ ಜ್ಯೋತಿ ಕನಕಪ್ಪ ಅವರನ್ನು ಗೌರವಿಸಲಾಯಿತು   

ಕುಕನೂರು: ‘ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಸಮಾಜದ ಕಟ್ಟ ಕಡೆಯ ಜನತೆಯ ಜೀವನಮಟ್ಟ ಸುಧಾರಿಸುತ್ತಿದೆ’ ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ ಗುತ್ತಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ನಡೆದ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ದೂರದೃಷ್ಟಿ ಇಟ್ಟು ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಇಂದು ಬಡ ಜನರ ಜೀವನ ನಿರ್ವಹಣೆಗೆ ಆಧಾರ ಸ್ತಂಭವಾಗಿವೆ. ಇದೇ ಗ್ರಾಮದ ಗೃಹಿಣಿಯೊಬ್ಬರು ಗೃಹಲಕ್ಷ್ಮಿ ಹಣದಲ್ಲಿ ತನ್ನ ಮೂರು ಜನ ಹೆಣ್ಣು ಮಕ್ಕಳ ಎಲ್ಐಸಿ ಪಾಲಿಸಿ ಮಾಡಿಸಿ ತಾಲ್ಲೂಕಿಗೆ ಮಾದರಿಯಾಗಿದ್ದಾರೆ’ ಎಂದರು.

ADVERTISEMENT

ತಾಪಂ ಇಒ ಸಂತೋಷ ಪಾಟೀಲ ಬಿರಾದಾರ ಮಾತನಾಡಿ, ‘ರಾಜ್ಯದಲ್ಲಿಯೇ ಕುಕನೂರು-ಯಲಬುರ್ಗಾ ತಾಲ್ಲೂಕುಗಳು ಗೃಹಲಕ್ಷ್ಮಿ ಯೋಜನೆಯಲ್ಲಿ ನೂರಕ್ಕೆ ನೂರರಷ್ಟು ಸಾಧನೆ ಮಾಡಿದೆ. ಇಲ್ಲಿನ ಶಾಸಕರ ಇಚ್ಛಾಶಕ್ತಿ ಹಾಗೂ ಅಧಿಕಾರಿಗಳ ಪರಿಶ್ರಮ ಇದಕ್ಕೆ ಮೂಲ ಕಾರಣ ಎಂದರು.

‘ಕೆಎಸ್ಆರ್‌ಟಿಸಿ ಡಿಪೋ ಮ್ಯಾನೇಜರ್, ಅನ್ನಭಾಗ್ಯ ಯೋಜನೆಯ ಅನುಷ್ಠಾನಾಧಿಕಾರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ತಾಲ್ಲೂಕ ಅಧಿಕಾರಿಗಳು ಸಭೆಯಲ್ಲಿ ಗೈರಾಗಿದ್ದಕ್ಕೆ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದರು.

ಸಹಾಯಕ ಕಾರ್ಯನಿರ್ವಹಕ ಎಂಜಿನಿಯರ್‌ ನಾಗರಾಜ್, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಬೇಟದಪ್ಪ ಮಾಳೆಕೊಪ್ಪ, ಪಿಡಿಒ ನೀಲಮ್ಮ ಚಳಗೇರಿ, ಮಹಮ್ಮದ್ ಸಿರಾಜ್ ಕೊಪ್ಪಳ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.