ADVERTISEMENT

ಗುದ್ನೆಪ್ಪನಮಠದ ಆಸ್ತಿ | ಸರ್ಕಾರಿ ಕಚೇರಿಗಳು ನಿರ್ಮಾಣವಾಗಲಿ: ಸಂಗಮೇಶ್ ಗುತ್ತಿ

ತಾಲ್ಲೂಕು ಹೋರಾಟ ಸಮಿತಿಯಿಂದ ಕುಕನೂರು ಬಂದ್, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:15 IST
Last Updated 4 ನವೆಂಬರ್ 2025, 7:15 IST
ಕುಕನೂರು ಬಂದನಿಂದಾಗಿ ಅಂಗಡಿ ಮುಗ್ಗಟ್ಟುಗಳು ಮುಚ್ಚಲಾಗಿತ್ತು
ಕುಕನೂರು ಬಂದನಿಂದಾಗಿ ಅಂಗಡಿ ಮುಗ್ಗಟ್ಟುಗಳು ಮುಚ್ಚಲಾಗಿತ್ತು   

ಕುಕನೂರು: ‘ಪಟ್ಟಣದ ಗುದ್ನೆಪ್ಪನಮಠದ ಆಸ್ತಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಸಂಬಂಧಿಸಿದ ಆಸ್ತಿಯಾಗಿದೆ. ಅಲ್ಲಿ ಸಾರ್ವಜನಿಕ ಹಿತಕ್ಕಾಗಿ ಸರ್ಕಾರಿ ಕಚೇರಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಏಕೆ ತಡೆ ನೀಡಲಾಗುತ್ತಿದೆ’ ಎಂದು ತಾಲ್ಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸಂಗಮೇಶ್ ಗುತ್ತಿ ಪ್ರಶ್ನಿಸಿದರು.

ಪಟ್ಟಣದ ಶಿರೂರು ವೀರಭದ್ರಪ್ಪ ವೃತ್ತದಲ್ಲಿ ಕುಕನೂರು ತಾಲ್ಲೂಕು ಹೋರಾಟ ಸಮಿತಿ ಹಮ್ಮಿಕೊಂಡ ಕುಕನೂರು ಬಂದ್, ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು.

‘ಅಧಿಕಾರಿಗಳು, ಸರ್ಕಾರ ಕೂಡಲೇ ಸೂಕ್ತ ಕ್ರಮ ತೆಗೆದುಕೊಂಡು ತಾಲ್ಲೂಕಿಗೆ ಅವಶ್ಯವಿರುವ ಮಿನಿ ವಿಧಾನಸೌಧ, ನ್ಯಾಯಾಲಯ, ಸೇರಿದಂತೆ ಕಚೇರಿ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು’ ಎಂದರು.

ADVERTISEMENT

‘ತಾಲ್ಲೂಕಿನ ಅಭಿವೃದ್ಧಿಗೆ ಗುದ್ನೆಪ್ಪನಮಠದ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಜಾಗದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ ಸರ್ಕಾರಿ ಕಟ್ಟಡಗಳು ನಿರ್ಮಾಣ ಮಾಡಲು ಹೋದರೆ ಕೋರ್ಟ್‌ ಮೊರೆ ಹೋಗಿದ್ದಾರೆ. ಕೂಡಲೇ ಅಧಿಕಾರಿಗಳು ಅಲ್ಲಿ ಸರ್ಕಾರಿ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಗುದ್ನೆಪ್ಪನಮಠದಲ್ಲಿ ಶ್ರೀರುದ್ರಮುನಿಶ್ವರ ದೇವಸ್ಥಾನ ಹೊರತುಪಡಿಸಿ ಅಕ್ರಮವಾಗಿ ನಿರ್ಮಾಣವಾಗಿರುವ ಎಲ್ಲಾ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಬೇಕು’ ಎಂದು ಆಗ್ರಹಿಸಿದರು.

ಹಿರಿಯ ಮುಖಂಡ ಸತ್ಯ ನಾರಾಯಣಪ್ಪ ಹರಪನಳ್ಳಿ ಮಾತನಾಡಿ, ‘ಗುದ್ನೆಪ್ಪನಮಠದ ಆಸ್ತಿ 18 ಜನ ಸೇವಾದಾರರಿಗೆ ಅಷ್ಟೇ ಸೀಮಿತವಾಗಿಲ್ಲ. ತಾಲ್ಲೂಕಿನ ಅಭಿವೃದ್ಧಿಗೆ ಅಡ್ಡಿಪಡಿಸಿ ಜಾತಿ ಜಾತಿಗಳ ಮಧ್ಯೆ ವೈಮನಸ್ಸು ಮೂಡಿಸುವ ಕೆಲಸ ಮಾಡಬಾರದು. ನಿಮಗೆ ಸೂಕ್ತವಾದ ಭೂಮಿಯನ್ನು ಗುದ್ನೆಪ್ಪನಮಠದಲ್ಲಿ ಬೇರೆ ಕಡೆ ನೀಡುತ್ತೇವೆ ಎಂದು ಈಗಾಗಲೇ ಶಾಸಕ ಬಸವರಾಜ ರಾಯರಡ್ಡಿ ಅವರು ಭರವಸೆ ನೀಡಿದ್ದಾರೆ. ಆಡಳಿತ ಕಚೇರಿಗಳ ನಿರ್ಮಾಣಕ್ಕೆ ಅಡ್ಡಿಪಡಿಸುವುದು ಸರಿಯಲ್ಲ’ ಎಂದರು.

ಯುವ ಮುಖಂಡ ರಾಘವೇಂದ್ರ ಕಾತರಕಿ ಮಾತನಾಡಿ, ‘ತಾಲ್ಲೂಕು ಕೇಂದ್ರವಾಗಿ ಇಷ್ಟು ವರ್ಷ ಆದರೂ ಸರ್ಕಾರಿ ಕಟ್ಟಡಗಳು ಆಗಲಿಲ್ಲ. ಸರ್ಕಾರಿ ಕಟ್ಟಡಗಳು ಆಗಬೇಕು ಎಂದು ಕುಕನೂರ ಬಂದ್ ಮಾಡಿ ಹೋರಾಟ ಮಾಡುತ್ತಿರುವುದು ನಮ್ಮ ದುರಂತ’ ಎಂದು ಹೇಳಿದರು.

ಶರಣಪ್ಪ ಗಾಂಜಿ, ಕಾಸೀಂಸಾಬ್ ತಳಕಲ್, ರೆಹಮಾನ್ ಸಾಬ್ ಮಕ್ಕಪ್ಪನವರ್, ರಾಮಣ್ಣ ಬಂಕದಮನಿ, ಗಗನ್ ನೋಟಗಾರ್, ಉದಯ ರಾಯರಡ್ಡಿ, ಈರಣ್ಣ ಯಲಬುರ್ಗಾ, ತಿಮ್ಮಣ್ಣ ಚೌಡಿ, ಶ್ರೀನಿವಾಸ್ ದೇಸಾಯಿ, ಮಲಿಯಪ್ಪ ಅಣ್ಣಿಗೇರಿ, ಸಿದ್ಧಯ್ಯ ಕಳ್ಳಿಮಠ, ಮಹೇಶ್ ಗಾವರಾಳ, ಈಶಪ್ಪ ಸಬರದ ಹಾಗೂ ರೈತ ಪರ ಸಂಘಟನೆಗಳು, ಕನ್ನಡ ಪರಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಸೇರಿದಂತೆ ಇತರರು ಭಾಗವಹಿಸಿದ್ದರು.

ಕುಕನೂರಿನ ವೀರಭದ್ರಪ್ಪ ವೃತ್ತದಲ್ಲಿ ಪ್ರತಿಭಟನೆ ಮಾಡಿದ ವಿವಿಧ ಸಂಘಟನೆಗಳು
ಕುಕನೂರಿನ ಅಂಬೇಡ್ಕರ್ ವೃತ್ತದಲ್ಲಿ ಟೈರ್ ಸುಟ್ಟ ಪತಿಭಟನಕಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.