ADVERTISEMENT

ಕುಂಟೋಜಿ ದಾಸರ ಜಯಂತಿ

ಪಟ್ಟಣದಲ್ಲಿ ಭಾವಚಿತ್ರ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 4:46 IST
Last Updated 3 ಜನವರಿ 2022, 4:46 IST
ಕನಕಗಿರಿಯಲ್ಲಿ ಭಾನುವಾರ ಶ್ರೀ ಕುಂಟೋಜಿ ದಾಸರ 176 ನೇ ಆರಾಧನೆ ನಿಮಿತ್ತ ಭಾವಚಿತ್ರದ ಮೆರವಣಿಗೆ ನಡೆಯಿತು
ಕನಕಗಿರಿಯಲ್ಲಿ ಭಾನುವಾರ ಶ್ರೀ ಕುಂಟೋಜಿ ದಾಸರ 176 ನೇ ಆರಾಧನೆ ನಿಮಿತ್ತ ಭಾವಚಿತ್ರದ ಮೆರವಣಿಗೆ ನಡೆಯಿತು   

ಕನಕಗಿರಿ: ಪಟ್ಟಣದ ಶ್ರೀಗುರು ಶ್ರೀಶ ವಿಠಲ ಪ್ರತಿಷ್ಠಾನದ ವತಿಯಿಂದ ಕುಂಟೋಜಿ ದಾಸರ 176 ನೇ ಆರಾಧನೆ ಶ್ರದ್ಧಾ, ಭಕ್ತಿಯಿಂದ ನಡೆಯಿತು.

ಆರಾಧನೆ ಅಂಗವಾಗಿ ದಾಸರ ಭಾವಚಿತ್ರಕ್ಕೆ ವಿವಿಧ ಪ್ರಕಾರದ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ರಾಜಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.

ಸಿಂಧನೂರಿನ ಶ್ರೀರಾಮಚಂದ್ರ ಭಜನಾ ಮಂಡಳಿ ಹಾಗೂ ಗಂಗಾವತಿಯ ವಿಜಯದಾಸ ಭಕ್ತಮಂಡಳಿ ಅವರು ಭಾಗವಹಿಸಿ ದಾಸರ ಕೀರ್ತನೆ, ಸುಳಾದಿಗಳನ್ನು ಹಾಡಿದರು.

ADVERTISEMENT

ಬಳ್ಳಾರಿಯ ಜಿ.ಎಂ.ಸುಗುಣ ಅನಂತಾಚಾರ್ಯ ಅವರು ಶ್ರೀಗುರು ಶ್ರೀಶ ವಿಠಲ ಕುರಿತು ರಚಿಸಿದ ಕಿರು ಹೊತ್ತಿಗೆಯನ್ನು ರಾಮಾಚಾರ್ಯ ಹಾಗೂ ವೆಂಕಟ ನರಸಿಂಹಾಚಾಚಾರ್ಯ ಗುಡೆ ಬಲ್ಲೂರು ಅವರು ಬಿಡುಗಡೆ ಮಾಡಿದರು. ಪಂಡಿತರಾದ ವಾಗೀಶ ಆಚಾರ್ಯ ಗಂಗಾವತಿ, ವಂಶಿ ಕೃಷ್ಣಾಚಾರ್ಯ ಅವರು ದಾಸರ ಕೃತಿ ಹಾಗೂ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶ್ರೀಗುರು ಶ್ರೀಶ ವಿಠಲ ಪ್ರತಿಷ್ಠಾನ ವತಿಯಿಂದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವೈಭವ ನಡೆಯಿತು.

ಎಂ. ಭೀಮರಾವ್ ಕುಲಕರ್ಣಿ ಮಾತನಾಡಿ,‘ಕುಂಟೋಜಿಯ ದಾಸರು ವಿಜಯದಾಸರು, ಗೋಪಾಲ ದಾಸರು ಹಾಗೂ ಜಗನ್ನಾಥ ದಾಸರ ಸಮಕಾಲೀನವರಾಗಿದ್ದು, ಸುಳಾದಿ, ಉಗಾಭೋಗಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವ ಹಾಗೆ ರಚಿಸಿದ್ದಾರೆ’ ಎಂದು ತಿಳಿಸಿದರು. ಕುಂಟೋಜಿ ದಾಸರ ವಂಶಸ್ಥರಾದ ಕೆ.ಚ್ ಕುಲಕರ್ಣಿ, ಕನಕಾಚಲ ಚಾರಣಿ, ಪ್ರತಿಷ್ಠಾನ ಪದಾಧಿಕಾರಿಗಳಾದ ವೆಂಕಟೇಶ ಕುಲಕರ್ಣಿ, ಭೀಮಸೇನ ಜೋಶಿ, ‌ ಭೀಮಸೇನ ಹಾಗೂ ಗೋಪಾಲ ಕೃಷ್ಣ ಕುಲಕರ್ಣಿ ಅವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.