
ಕುಷ್ಟಗಿ: ಇಲ್ಲಿಯ ಎಪಿಎಂಸಿ ಪ್ರಾಂಗಣದಲ್ಲಿ ತೋಗರಿ ಮಾರಾಟ ಜೋರಾಗಿದ್ದು, ತೂಕದಲ್ಲಿ ರೈತರಿಗೆ ವ್ಯಾಪಾರಿಗಳು ಅನ್ಯಾಯ ಮಾಡುತ್ತಿದ್ದಾರೆ’ ಎಂದು ರೈತ ಬಸವರಾಜ ನಾಯಕ ಸೇರಿದಂತೆ ಇತರರು ದೂರಿದ್ದಾರೆ.
ತೊಗರಿಯನ್ನು ಗೋಣಿ ಚೀಲದ ಬದಲು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಳ್ಳಲಾಗುತ್ತಿದೆ. ಈ ಚೀಲ ಸುಮಾರು ನೂರು ಗ್ರಾಂ ತೂಕ ಇದ್ದರೂ ಪ್ರತಿ ಚೀಲಕ್ಕೆ ಅರ್ಧ ಕೆಜಿಯಷ್ಟು ತೊಗರಿಯನ್ನು ಕಡಿಮೆ ಮಾಡಲಾಗುತ್ತಿದೆ. ಕೇಳಿದರೆ ಅದು ಚೀಲದ ತೂಕಕ್ಕೆ ಸೇರಿದ್ದು ಎನ್ನಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರತಿ ಚೀಲಕ್ಕೆ ಅರ್ಧ ಕೆಜಿ ಕಡಿತ ಮಾಡುತ್ತಿರುವುದರಿಂದ ರೈತರಿಗೆ ಹಾನಿಯಾಗುತ್ತಿದೆ. ಈ ವಿಷಯ ಎಪಿಎಂಸಿ ಸಿಬ್ಬಂದಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಕುರಿತು ಮೇಲಾಧಿಕಾರಿಗಳು ತಕ್ಷಣ ಕ್ರಮಕ್ಕೆ ಮುಂದಾಗಿ ರೈತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
ಎಪಿಎಂಸಿ ಕಾರ್ಯದರ್ಶಿ ಅಶೋಕ ತಂಗನೂರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ಬೈಲಾ ನಿಯಮಗಳ ಪ್ರಕಾರ ಚೀಲದ ತೂಕಕ್ಕೆ ಸಮನವಾಗಿ ಯಾವುದೇ ಹುಟ್ಟುವಳಿಯನ್ನು ಕಡಿತಮಾಡಬೇಕು. ಈ ಬಗ್ಗೆ ಕಳೆದ ವರ್ಷವೇ ವರ್ತಕರಿಗೆ ನೋಟಿಸ್ ನೀಡಲಾಗಿತ್ತು. ಈಗ ಮತ್ತೊಮ್ಮೆ ನೋಟಿಸ್ ನೀಡಿ ತಾಕೀತು ಮಾಡುತ್ತೇನೆ. ನಿಯಮ ಅನುಸರಿಸದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.