
ಕುಷ್ಟಗಿ: ವಿಶಾಲ ಹಿಂದೂ ಜನ ಜಾಗೃತಿ, ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಪರಿಕಲ್ಪನೆಯ ಧ್ಯೇಯವಾಕ್ಯದೊಂದಿಗೆ ಫೆ.11 ರಂದು ಹಿಂದೂ ಸಂಘಟನೆಗಳು ನಡೆಸಲಿರುವ ‘ಹಿಂದೂ ಸಮ್ಮೇಳನ’ಕ್ಕೆ ಪಟ್ಟಣ ಸಜ್ಜುಗೊಂಡಿದ್ದು ಇಡೀ ಪಟ್ಟಣ ಕೇಸರಿಮಯವಾಗಿದೆ.
ಪ್ರಮುಖ ವೃತ್ತಗಳು, ಕಿಲೋಮೀಟರ್‌ಗಟ್ಟಲೇ ರಸ್ತೆಗಳಲ್ಲಿ ಕೇಸರಿ ಬಂಟಿಂಗ್ಸ್‌ಗಳನ್ನು ಅಳವಡಿಸಲಾಗಿದೆ. ದಾರಿಯುದ್ದಕ್ಕೂ ಗಮನಸೆಳೆಯುವ ರೀತಿಯಲ್ಲಿ ಸಾಧು ಸತ್ಪುರುಷರು, ಸಂತರು, ಸಮಾಜ ಸುಧಾರಕರು, ಶರಣರು, ಐತಿಹಾಸಿಕ, ಸಾಮಾಜಿಕ, ಧಾರ್ಮಿಕ ವ್ಯಕ್ತಿಗಳು, ದೇಶದ ಸ್ವಾತಂತ್ರ್ಯ ಹೋರಾಟಗಾರರು, ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಅನೇಕ ಮಹನೀಯರ ಭಾವಚಿತ್ರಗಳಿರುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ.
ಮದ್ದಾನೇಶ್ವರ ಮಠದಿಂದ ಶಾಖಾಪುರ ರಸ್ತೆಯ ವಾಸವಿ ದೇವಸ್ಥಾನದ ಆವರಣದವರೆಗೆ ಮಧ್ಯಾಹ್ನದ ನಂತರ ಶೋಭಾಯಾತ್ರೆ ಆಯೋಜಿಸಲಾಗಿದೆ. ವಿವಿಧ ಭಜನಾ ಮಂಡಳಿಗಳು, ಡೊಳ್ಳು, ಚಂಡೆಮದ್ದಲೆ ವಾದ್ಯಮೇಳ, ಛದ್ಮವೇಷಧಾರಿ ಮಕ್ಕಳು ಭಾಗವಹಿಸಲಿದ್ದಾರೆ. ಸಂಜೆ 6ಕ್ಕೆ ವಾಸವಿ ದೇವಸ್ಥಾನದ ಬಳಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಉಪಸ್ಥಿತರಿರಲಿದ್ದಾರೆ. ಆರ್‌ಎಸ್‌ಎಸ್ ಉತ್ತರ ಪ್ರಾಂತ್ಯ ಪ್ರಚಾರಕ ನರೇಂದ್ರ ಅವರಿಂದ ದಿಕ್ಸೂಚಿ ಭಾಷಣ ಇರುತ್ತದೆ ಎಂದು ಸಮ್ಮೇಳನದ ಪ್ರಮುಖರಲ್ಲಿ ಒಬ್ಬರಾದ ವೀರೇಶ ಬಂಗಾರಶೆಟ್ಟರ ವಿವರಿಸಿದರು.
ಹೆಸರಿಗೆ ಪಕ್ಷಾತೀತ ಬಿಜೆಪಿಗೆ ಸೀಮಿತ: ಹಿಂದೂಗಳನ್ನು ಒಗ್ಗೂಡಿಸಲು ಪಕ್ಷಾತೀತವಾಗಿ ಸಮ್ಮೇಳನ ನಡೆಯಲಿದೆ, ಎಲ್ಲ ರಾಜಕೀಯ ಪಕ್ಷಗಳ ಪ್ರಮುಖರಿಗೂ ಆಹ್ವಾನ ನೀಡಲಾಗಿದೆ ಎಂಬ ಸಂಘಟಕರ ಪ್ರತಿಕ್ರಿಯೆಯ ನಡುವೆಯೂ ಪಕ್ಷ ರಾಜಕಾರಣದ ಸುಳಿದಿರುವುದು ಕಂಡುಬಂದಿದ್ದು ಸಮ್ಮೇಳನ ಹಿಂದೂಗಳದ್ದೊ ಅಥವಾ ಬಿಜೆಪಿಯದ್ದೊ ಎಂಬ ಜಿಜ್ಞಾಸೆಯೂ ಹರಿದಾಡುತ್ತಿದೆ.
ರಸ್ತೆಯುದ್ದಕ್ಕೂ ಕಟ್ಟಲಾಗಿರುವ ಫ್ಲೆಕ್ಸ್‌ಗಳಲ್ಲಿ ಶಾಸಕ ದೊಡ್ಡನಗೌಡ ಪಾಟೀಲರ ಭಾವಚಿತ್ರ ಮಾತ್ರ ಇದೆ. ಕೆಲ ವೃತ್ತಗಳಲ್ಲಿ ಬೆರಳೆಣಿಕೆ ಬಿಜೆಪಿ ಪ್ರಮುಖರ ವೈಯಕ್ತಿಕ ಚಿತ್ರಗಳಿರುವ ಫ್ಲೆಕ್ಸ್‌ಗಳು ಇವೆ. ಬಿಜೆಪಿ ಪ್ರಯೋಜಿತ ಹಿಂದೂ ಸಂಘಟನೆ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿ ಮುಂಚೂಣಿಯಲ್ಲಿರುತ್ತಿದ್ದ ಕೆಲ ಮುಖಂಡರ ಒಂದೂ ಫ್ಲೆಕ್ಸ್‌ಗಳೂ ಇಲ್ಲದಿರುವುದು ಬಿಜೆಪಿಯಲ್ಲಿಯೂ ಒಗ್ಗಟ್ಟಿನ ಕೊರತೆ ಇರುವುದನ್ನು ಎತ್ತಿತೋರಿಸುತ್ತಿದೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಹಿಂದೂ ಸಂಘಟನೆ ಕೆಲ ಪ್ರಮುಖರ ಹೇಳಿದರು.
ಅಷ್ಟೇ ಅಲ್ಲದೆ ಇಡೀ ಸಮ್ಮೇಳನವನ್ನು ಸಂಘಟಿಸಿದವರು, ಓಡಾಡುತ್ತಿರುವವರೆಲ್ಲ ಬಿಜೆಪಿಗೆ ಸೇರಿದವರು ಎಂಬುದು ಪಕ್ಷಾತೀತ ಅಲ್ಲ ಎಂಬುದಕ್ಕೆ ಪುಷ್ಠಿ ನೀಡುವಂತಿದೆ. ಇದಕ್ಕೆ ಪ್ರತಿಕ್ರಿಯಿಸಿದ ವೀರೇಶ ಬಂಗಾರಶೆಟ್ಟರ, ‘ಶಾಸಕರು, ಇತರರು ಫ್ಲೆಕ್ಸ್‌ಗಳನ್ನು ಅಭಿಮಾನಕ್ಕೆ ಹಾಕಿಕೊಂಡಿರಬಹುದು ಆದರೆ ಅದು ಸಮ್ಮೇಳನದ ಸಮಿತಿಗೆ ಸಂಬಂಧಿಸಿದ್ದಲ್ಲ. ಹಿಂದೂಗಳನ್ನು ಒಂದುಗೂಡಿಸಬೇಕೆಂಬುದಷ್ಟೇ ಉದ್ದೇಶ. ಹಾಗಾಗಿ ಇತರೆ ಪಕ್ಷಗಳ ಮುಖಂಡರಿಗೂ ಪಾಲ್ಗೊಳ್ಳಲು ಹೇಳಿದ್ದೇವೆ’ ಎಂದರು.
ಸಮ್ಮೇಳನ ಹಿಂದೂ ಸಮುದಾಯಗಳನ್ನೆಲ್ಲ ಒಳಗೊಂಡಿದೆ ಯಾವುದೇ ಪಕ್ಷಕ್ಕೂ ಸೀಮಿತವಾಗಿಲ್ಲ. ಪಕ್ಷ ಯಾವುದಾದರೂ ಸರಿ ಹಿಂದೂಗಳು ಸಮ್ಮೇಳನದಲ್ಲಿ ಭಾಗವಹಿಸಬೇಕುವೀರೇಶ ಬಂಗಾರಶೆಟ್ಟರ. ಸಮ್ಮೇಳನದ ಪ್ರಮುಖ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.