ಕುಷ್ಟಗಿ: ಪಟ್ಟಣದ ಮನೆಯೊಂದರ ಬೀಗ ಮುರಿದು 2 ಕೆ.ಜಿ. ಬೆಳ್ಳಿ, ₹35 ಸಾವಿರ ಹಣ ಕದ್ದು ಪರಾರಿಯಾಗಿರುವ ಪ್ರಕರಣ ಸೋಮವಾರ ನಡೆದಿದೆ.
ಪಟ್ಟಣದ 4ನೇ ವಾರ್ಡ್ ವ್ಯಾಪ್ತಿಯ ವಿಷ್ಣು ತೀರ್ಥ ನಗರದ ಶ್ರೀಕಾಂತ ಕುಲಕರ್ಣಿ ದಂಪತಿ ಇತ್ತೀಚೆಗೆ ಕನ್ಯಾಕುಮಾರಿಗೆ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಮನೆಯ ಬೀಗ ಹಾಕಿರುವುದು ಗಮನಿಸಿ, ಹೊಂಚು ಹಾಕಿದ ಕಳ್ಳರು ಮನೆಯ ಚಿಲಕದ ಕೊಂಡಿ ಕತ್ತರಿಸಿ ಒಳಗೆ ಪ್ರವೇಶಿಸಿದ್ದು ಮನೆಯಲ್ಲಿನ ಅಲ್ಮಾರ ಒಡೆದು ಅದರೊಳಗಿದ್ದ ಸಾಮಗ್ರಿ ಚಲ್ಲಾಪಿಲ್ಲಿ ಮಾಡಲಾಗಿದೆ. ₹1.35ಲಕ್ಷ ಮೌಲ್ಯದ 2 ಕೆ.ಜಿ. ಬೆಳ್ಳಿ ಸಾಮಗ್ರಿ ಮತ್ತು ನಗದು ಕಳ್ಳತನ ಮಾಡಲಾಗಿದೆ.
ಪಕ್ಕದ ಮನೆಯ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳ್ಳನೋರ್ವ ಮನೆಯ ಕಾಂಪೌಂಡ್ ಹಾರಿ, ಕಬ್ಬಿಣದ ಹಾರೆಯಿಂದ ಚಿಲಕ ಮುರಿದು ಕಳ್ಳತನ ಮಾಡಿಕೊಂಡು ಹೊರ ಹೋಗುವ 12 ನಿಮಿಷಗಳ ವಿಡಿಯೊ ಸೆರೆಯಾಗಿದೆ. ಬೆರಳಚ್ಚಿನ ಗುರುತು ಸಿಗದಂತೆ ಕೈ ಗವುಸು ಧರಿಸಿದ್ದ.
ಸಿಪಿಐ ಯಶವಂತ ಬಿಸನಳ್ಳಿ, ಪಿಎಸ್‌ಐ ಹನಮಂತಪ್ಪ ತಳವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನಂತರ ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದರು. ಈ ಪ್ರದೇಶದಲ್ಲಿ 13 ವರ್ಷಗಳಲ್ಲಿ ಕಳ್ಳತನ ಪ್ರಕರಣಗಳು ನಡೆದ ಉದಾಹರಣೆಗಳು ಇಲ್ಲ. ಇಷ್ಟು ವರ್ಷಗಳಲ್ಲಿ ಈ ಮನೆಯ ಕಳವು ಪ್ರಕರಣ ನಿವಾಸಿಗಳನ್ನು ಬೆಚ್ಚಿಬೀಳಿಸಿದೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.