
ಕುಷ್ಟಗಿ: ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಹಾಗೂ ಅನುದಾನಿತ ಶಾಲೆಗಳಿಗೆ ಆಹಾರ ಸಾಮಗ್ರಿಗಳು ಸರಬರಾಜು ಆಗದ ಕಾರಣ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಅಕ್ಷರದಾಸೋಹ ಯೋಜನೆ ಅಸ್ತವ್ಯಸ್ತಗೊಂಡಿರುವುದು ಬೆಳಕಿಗೆ ಬಂದಿದೆ.
ಕಳೆದ ಮೂರು ವಾರಗಳಿಂದಲೂ ನೂರಾರು ಶಾಲೆಗಳ ಸಹಸ್ರ ಸಂಖ್ಯೆ ಮಕ್ಕಳಿಗೆ ಬಿಸಿಯೂಟ ಪೂರೈಕೆಯಲ್ಲಿ ಅಡಚಣೆಯಾಗಿದ್ದರೂ ಜಿಲ್ಲಾ ಪಂಚಾಯಿತಿ ಮತ್ತು ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಹಾಗೂ ಅಕ್ಷರದಾಸೋಹ ಯೋಜನೆಗೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮಕ್ಕೆ ಮುಂದಾಗದಿರುವುದು ಅಚ್ಚರಿಗೆ ಕಾರಣವಾಗಿದೆ.
ಬಹುತೇಕ ಶಾಲೆಗಳಲ್ಲಿ ಅಕ್ಕಿ, ಬೇಳೆ, ಖಾದ್ಯತೈಲ ಸೇರಿದಂತೆ ಅಗತ್ಯವಸ್ತುಗಳು ಖಾಲಿಯಾಗಿದ್ದರೂ ಟೆಂಡರ್ ಪಡೆದವರಿಂದ ಸರಬರಾಜು ಆಗಿಲ್ಲ, ಹಾಗಾಗಿ ಶಿಕ್ಷಕರು ಪಾಠ ಮಾಡುವುದನ್ನು ಬಿಟ್ಟು ಅಕ್ಕಪಕ್ಕದ ಅಷ್ಟೇ ಏಕೆ ಹತ್ತಿಪ್ಪತ್ತು ಕಿಲೋಮೀಟರ್ ದೂರದ ಶಾಲೆಗಳಿಗೆ ಅಲೆದಾಡಿ ಕಾಡಿ ಬೇಡಿ ಸಾಮಗ್ರಿಯನ್ನು ಕಡಕ್ಕೆ ತೆಗೆದುಕೊಂಡು ಬಂದು ಮಕ್ಕಳಿಗೆ ಬೇಯಿಸಿ ಹಾಕುವ ಅನಿವಾರ್ಯತೆ ಎದುರಾಗಿದೆ. ಆದರೆ ಸರಬರಾಜು ಆಗುವುದು ಇನ್ನೂ ತಡವಾಗಲಿದೆ ಎಂಬ ಅನುಮಾನದಿಂದ ತಮ್ಮ ಶಾಲೆಗಳಲ್ಲಿ ಸಾಮಗ್ರಿ ಇದ್ದರೂ ಅವುಗಳನ್ನು ಬೇರೆ ಶಾಲೆಗಳಿಗೆ ಕೊಡುವುದಕ್ಕೆ ಅಲ್ಲಿಯ ಮುಖ್ಯಶಿಕ್ಷಕರು ನಿರಾಕರಿಸುತ್ತಿದ್ದಾರೆ.
ಆಹಾರವಸ್ತುಗಳ ಕೊರತೆಯಿಂದಾಗಿ ಅನೇಕ ಶಾಲೆಗಳಲ್ಲಿ ಮಕ್ಕಳಿಗೆ ಅರೆಬರೆ ಊಟ ನೀಡಲಾಗುತ್ತಿದೆ. ಎಣ್ಣೆ ಇದ್ದರೆ ಬೇಳೆ ಇಲ್ಲ, ಬೇಳೆ ಇದ್ದರೆ ಅಕ್ಕಿ ಇಲ್ಲ ಎನ್ನುವಂತಾಗಿದೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಶಿಕ್ಷಕರು 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು.
ಆಗಿದ್ದೇನು: ಪ್ರತಿ ತಿಂಗಳು ಆಯಾ ಶಾಲೆಗಳಿಂದ ಮಕ್ಕಳ ಹಾಜರಾತಿ, ದಾಖಲಾತಿಗೆ ಅನುಗುಣವಾಗಿ ಶಾಲೆಯ ಮುಖ್ಯಶಿಕ್ಷಕರು ಅಕ್ಷರದಾಸೋಹ ಯೋಜನೆಯನ್ನು ನಿರ್ವಹಿಸುವ ಸಹಾಯಕ ನಿರ್ದೇಶಕರಿಗೆ ಬೇಡಿಕೆಪತ್ರ ಸಲ್ಲಿಸುತ್ತಾರೆ. ಅದರ ಆಧಾರದ ಮೇಲೆ ಸಹಾಯಕ ನಿರ್ದೇಶಕರು ತಾಲ್ಲೂಕಿನ ಒಟ್ಟು ಬೇಡಿಕೆಪತ್ರ (ಇಂಡೆಂಟ್)ಅನ್ನು ಸರಬರಾಜು ಟೆಂಡರ್ ಪಡೆದಿರುವವರಿಗೆ ಸಲ್ಲಿಸಬೇಕಾಗುತ್ತದೆ. ಆದರೆ ಕಳೆದ ಒಂದು ತಿಂಗಳಿನಿಂದಲೂ ಈ ತಾಲ್ಲೂಕಿನ ಸಹಾಯಕ ನಿರ್ದೇಶಕರೇ ಇಲ್ಲ. ಕಚೇರಿಯಲ್ಲ ಒಬ್ಬ ನೌಕರ ಮಾತ್ರ ಇದ್ದಾರೆ. ಈ ಹಿಂದೆ ಸಹಾಯಕ ನಿರ್ದೇಶಕರಾಗಿದ್ದವರನ್ನು ಇಲಾಖೆ ಅಮಾನತುಗೊಳಿಸಿದೆ.
ಅಷ್ಟೇ ಅಲ್ಲ ಜಿಲ್ಲಾ ಅಕ್ಷರದಾಸೋಹ ಯೋಜನೆ ಅಧಿಕಾರಿಯೂ ಅಮಾನತಾಗಿದ್ದರಿಂದ ಯೋಜನೆ ನಿರ್ವಹಣೆಯಲ್ಲಿ ಅಡಚಣೆ ಉಂಟಾಗಿದೆ. ಈ ಕಾರಣಕ್ಕೆ ಇಡಿ ತಾಲ್ಲೂಕಿನ ಬಿಸಿಯೂಟ ಯೋಜನೆಗೆ ಬಿಸಿ ತಟ್ಟುವಂತಾಗಿದೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. ಅಲ್ಲದೆ ಬೇರೊಬ್ಬರಿಗೆ ಸಹಾಯಕ ನಿರ್ದೇಶಕರ ಹುದ್ದೆ ಪ್ರಭಾರ ವಹಿಸಿಕೊಳ್ಳಲು ಆದೇಶ ಹೊರಬಿದ್ದರೂ ಸಂಬಂಧಿಸಿದವರು ಅಧಿಕಾರ ವಹಿಸಿಕೊಂಡಿಲ್ಲ. ಈ ಜವಾಬ್ದಾರಿ ಹೊರುವುದಕ್ಕೆ ಬಹುತೇಕ ಶಿಕ್ಷಕರಲ್ಲಿ ನಿರಾಸಕ್ತಿ ಕಂಡುಬಂದಿದೆ ಎಂಬುದು ಗೊತ್ತಾಗಿದೆ.
ಭೇಟಿ: ಈ ಮಧ್ಯೆ ಮಂಗಳವಾರ ಇಲ್ಲಿಯ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಭೇಟಿ ಮಾಡಿದ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರ ಸಂಘದ ಪ್ರತಿನಿಧಿಗಳು ಬಿಸಿಯೂಟ ಯೋಜನೆಯಲ್ಲಿ ಆಗಿರುವ ಅವ್ಯವಸ್ಥೆ, ಸಮಸ್ಯೆಯನ್ನು ಗಮನಕ್ಕೆ ತಂದಿದ್ದಾರೆ. ಬಹುತೇಕ ಶಾಲೆಗಳಲ್ಲಿ ಆಹಾರ ವಸ್ತುಗಳು ಖಾಲಿಯಾಗಿದ್ದು ಸರಬರಾಜಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.