ಕುಷ್ಟಗಿ: ಪಟ್ಟಣದ 3ನೇ ವಾರ್ಡ್‌ನಲ್ಲಿರುವ ಉದ್ಯಾನದ ಸುತ್ತಲೂ ಅಳವಡಿಸಿದ್ದ ತಂತಿ ಬೇಲಿಯನ್ನು ದುಷ್ಕರ್ಮಿಗಳು ಹಾಳು ಮಾಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲ ಪಟ್ಟಭದ್ರ ಹಿತಾಸಕ್ತಿಗಳು ಉದ್ಯಾನ ಜಾಗ ಕಬಳಿಕೆಗೆ ಯತ್ನಿಸಿದ್ದು ಸಾರ್ವಜನಿಕರ ಮೂಲಕ ಗಮನಕ್ಕೆ ಬಂದ ನಂತರ ಕಳೆದ ತಿಂಗಳು ಪುರಸಭೆ ಅಧಿಕಾರಿಗಳು ಸರ್ವೆ ನಡೆಸಿದ ನಂತರ ಗುರುತಿಸಿದ ಜಾಗದಲ್ಲಿ ಸಾಕಷ್ಟು ಅನುದಾನ ಖರ್ಚು ಮಾಡಿ ಕಂಬ ಹಾಕಿ ತಂತಿ ಬೇಲಿ ಅಳವಡಿಸಿದ್ದರು. ಸ್ವತಃ ಮುಖ್ಯಾಧಿಕಾರಿ, ಎಂಜಿನಿಯರ್ ಮತ್ತು ಸಿಬ್ಬಂದಿ ಹಾಜರಿದ್ದರು. ಆದರೆ ಆ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ತಕರಾರು ತೆಗೆದಿದ್ದರೂ ದಾಖಲೆಗಳನ್ನು ಹಾಜರುಪಡಿಸದ ಕಾರಣ ಅಧಿಕಾರಿಗಳು ಬೇಲಿ ಹಾಕಿ ಉದ್ಯಾನಕ್ಕೆ ರಕ್ಷಣೆ ಒದಗಿಸಿದ್ದರು.
ಆದರೆ ಗುರುವಾರ ವ್ಯಕ್ತಿಯೊಬ್ಬ, ಜೆಸಿಬಿ ಯಂತ್ರ ಬಳಸಿ ತಂತಿಬೇಲಿ, ಕಂಬಗಳನ್ನು ನೆಲಕ್ಕುರುಳಿಸಿದ್ದಾನೆ ಎಂದು ತಿಳಿಸಲಾಗಿದೆ. ಅಲ್ಲದೆ ವಾರ್ಡ್‌ನ ರಹವಾಸಿಗಳ ಸಂಘದವರು ಅರಣ್ಯ ಇಲಾಖೆ ಸಹಯೋಗದೊಂದಿಗೆ ಪರಿಸರ ದಿನಾಚರಣೆಯಂದು ಸಸಿಗಳನ್ನು ನೆಟ್ಟಿದ್ದರು. ಇನ್ನಷ್ಟು ಗಿಡಗಳನ್ನು ನಾಟಿ ಮಾಡುವುದಕ್ಕೆ ಗುಂಡಿಗಳನ್ನು ತೋಡಲಾಗಿತ್ತು. ಆದರೆ ಹಿಂದೆ ನೆಟ್ಟಿದ್ದ ಸಸಿಗಳನ್ನು ಹಾಳು ಮಾಡಿ, ಈಗ ತೆಗೆದಿದ್ದ ಗುಂಡಿಗಳನ್ನೂ ಮುಚ್ಚಿದ್ದಾನೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಮಹೇಶ ಅಂಗಡಿ ಅವರನ್ನು ಭೇಟಿ ಮಾಡಿದ ರಹವಾಸಿಗಳ ಸಂಘದ ಪ್ರತಿನಿಧಿಗಳು, ‘ಬೇಲಿ ಮತ್ತು ಗಿಡಗಳನ್ನು ನಾಶಮಾಡಿದ್ದನ್ನು ಗಮನಕ್ಕೆ ತಂದರು.
ಈ ಕುರಿತು ನಂತರ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಅಂಗಡಿ, ಸ್ಥಳಕ್ಕೆ ಭೇಟಿ ನೀಡಲಾಗಿದ್ದು, ‘ಬೇಲಿ, ಸಸಿಗಳನ್ನು ಹಾಳು ಮಾಡಿರುವ ವ್ಯಕ್ತಿ ಯಾರೆಂಬುದು ಗೊತ್ತಾಗಿದೆ. ಶನಿವಾರದೊಳಗಾಗಿ ಕಂಬಗಳನ್ನು ಹಾಕಿ ತಂತಿ ಬೇಲಿ ಅಳವಡಿಸುವಂತೆ ವ್ಯಕ್ತಿಗೆ ತಾಕೀತು ಮಾಡಲಾಗಿದೆ. ಒಂದೊಮ್ಮೆ ಅದಕ್ಕೆ ಸ್ಪಂದಿಸದಿದ್ದರೆ ಪೊಲೀಸರಿಗೆ ದೂರು ನೀಡಿ ಎಫ್‌ಐಆರ್ ದಾಖಲಿಸುವುದಾಗಿ ಸ್ಪಷ್ಟಪಡಿಸಿದರು. ಆದರೆ ಕಠಿಣ ಕ್ರಮಕ್ಕೆ ಮುಂದಾಗದ ಮುಖ್ಯಾಧಿಕಾರಿ ಕುರಿ ಕೇಳಿ ಮಸಾಲೆ ಅರೆಯುವಂತೆ ನಡೆದುಕೊಂಡು ಬೇಲಿ ಹಾಳು ಮಾಡಿದವರಿಗೆ ಪರೋಕ್ಷವಾಗಿ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಮೂರನೇ ವಾರ್ಡ್‌ನ ನಿವಾಸಿಗಳು ಆಕ್ರೋಶ ಹೊರಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.