ಕುಷ್ಟಗಿ: ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕಾರ್ಯ ತ್ವರಿತಗತಿಯಲ್ಲಿ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಬುಧವಾರ ಇಲ್ಲಿ ಹೇಳಿದರು.
ಸಮೀಕ್ಷೆ ಕೆಲಸ ತಾಲ್ಲೂಕಿನಲ್ಲಿ ವಿಳಂಬಗೊಂಡಿರುವುದಕ್ಕೆ ಸಂಬಂಧಿಸಿದಂತೆ ಈ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದ ಅವರು, ಪ್ರಕ್ರಿಯೆ ಆರಂಭಗೊಂಡು ಮೂರು ದಿನಗಳು ಕಳೆದರೂ ಪ್ರಗತಿಯಾಗಿಲ್ಲ. ಅಗತ್ಯ ಸಂಖ್ಯೆಯಲ್ಲಿ ಸಮೀಕ್ಷಕರು, ಮೇಲ್ವಿಚಾರಕರು ಇದ್ದರೂ ಕೆಲಸ ತೃಪ್ತಿಕರವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಈ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಮೀಕ್ಷಕರು, ಮೇಲ್ವಿಚಾರಕರು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ನಿರಂತರ ಸಂರ್ಪಕ ಹೊಂದಿರುವುದು ಅವಶ್ಯ. ಆರಂಭದಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದರೂ ಈಗ ಪರಿಹರಿಸಲಾಗಿದೆ. ಸಮೀಕ್ಷಕರಲ್ಲಿ ಗೊಂದಲ ಉಂಟಾದರೆ ತಾಲ್ಲೂಕು ಹೆಲ್ಪ್‌ಲೈನ್ ಸಂಖ್ಯೆಗೆ ಸಂಪರ್ಕಿಸಲು ತಿಳಿಸಬೇಕು. ಅಲ್ಲದೆ ಎಲ್ಲರ ಮೊಬೈಲ್‌ಗಳಲ್ಲಿಯೂ ತಂತ್ರಾಂಶ ಅಳವಡಿಸಿಕೊಳ್ಳಲು ನೆರವಾಗುವಂತೆ ಸೂಚಿಸಿದರು.
ಬುಧವಾರದವರೆಗೆ ತಾಲ್ಲೂಕಿನಲ್ಲಿ ಒಟ್ಟು 643 ಮನೆಗಳಲ್ಲಿ ಸಮೀಕ್ಷೆ ನಡೆದಿದೆ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು. ತಹಶೀಲ್ದಾರ್ ಅಶೋಕ ಶಿಗ್ಗಾವಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಂಪಾಪತಿ ಹಿರೇಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಜಿಲ್ಲಾ ಅಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರು, ಪುರಸಭೆ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ಇತರರು ಇದ್ದರು.
ಬಹಳಷ್ಟು ಜನ ರೈತರು ತೋಟದ ಮನೆಗಳಲ್ಲಿ ವಾಸವಾಗಿದ್ದು ಅವರ ನಿವಾಸಗಳಿಗೆ ಜಿಯೊ ಟ್ಯಾಗ್ ಮಾಡಿಲ್ಲ ಸಮೀಕ್ಷೆ ಹೇಗೆ ನಡೆಯುತ್ತದೆ.–ಅಮರೇಶ ಕಡಗದ ಮೆಣೆದಾಳ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.