ADVERTISEMENT

ಬೇಡಿಕೆ ಈಡೇರಿಸಿ ಇಲ್ಲವೇ ದಯಾಮರಣ ಕಲ್ಪಿಸಿ: ಧರಣಿ ನಿರತರ ಪಟ್ಟು

ಪಟ್ಟು ಸಡಿಲಿಸದ ಧರಣಿ ನಿರತ ಸಂಘಟನೆಗಳು, ರೈತರು: ಪೇಚಿಗೆ ಸಿಲುಕಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:16 IST
Last Updated 4 ನವೆಂಬರ್ 2025, 7:16 IST
ಕುಷ್ಟಗಿಯಲ್ಲಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಧರಣಿ ಸ್ಥಳಕ್ಕೆ ತಹಶೀಲ್ದಾರ್ ಅಶೋಕ್‌ ಶಿಗ್ಗಾಂವಿ, ಪಿಎಸ್‌ಐ ಹನುಮಂತಪ್ಪ ತಳವಾರ ಭೇಟಿ ನೀಡಿದರು
ಕುಷ್ಟಗಿಯಲ್ಲಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಧರಣಿ ಸ್ಥಳಕ್ಕೆ ತಹಶೀಲ್ದಾರ್ ಅಶೋಕ್‌ ಶಿಗ್ಗಾಂವಿ, ಪಿಎಸ್‌ಐ ಹನುಮಂತಪ್ಪ ತಳವಾರ ಭೇಟಿ ನೀಡಿದರು    

ಕುಷ್ಟಗಿ: ತಾಲ್ಲೂಕಿನ ನಿಲೋಗಲ್ ಮತ್ತು ಅಚನೂರು ಸೀಮಾಂತರದಲ್ಲಿ ಸರ್ಕಾರಿ ಜಮೀನಿನಲ್ಲಿ ದಲಿತರು, ಬಡವರು ಸಾಗುವಳಿಗೆ ಮಾಡಲು ಬಿಡಿ ಮಾಡಿಕೊಡಿ ಅಥವಾ ದಯಾಮರಣಕ್ಕಾದರೂ ಅವಕಾಶ ಕಲ್ಪಿಸಿ ಎಂದು ಧರಣಿ ನಿರತರು ಪಟ್ಟು ಹಿಡಿದಿರುವುದು ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸಿದೆ.

ಈ ವಿಷಯ ಕುರಿತು ಕಳೆದ ಒಂದು ವಾರದಿಂದಲೂ ತಹಶೀಲ್ದಾರ್‌ ಕಚೇರಿ ಬಳಿ ದಲಿತ, ಪ್ರಗತಿಪರ ಸಂಘಟನೆಗಳು ಹಾಗೂ ರೈತರು, ಧರಣಿ ನಡೆಸುತ್ತಿದ್ದು, ರೈತ ಮುಖಂಡ ನೀಲಪ್ಪ ಕಡಿಯವರ ಎಂಬುವವರು ಉಪಾವಸ ಸತ್ಯಾಗ್ರಹ ನಿರತರಾಗಿದ್ದಾರೆ. ಅಧಿಕಾರಿಗಳ ಮನ ಒಲಿಕೆಗೆ ಧರಣಿ ನಿರತರು ಒಪ್ಪಿಲ್ಲ. ಕೆಲವರ ಆರೋಗ್ಯ ಸ್ಥಿತಿಯೂ ಹದಗೆಡುವ ಮಟ್ಟ ತಲುಪಿದೆ ಎನ್ನಲಾಗಿದೆ. ಅಲ್ಲದೆ ಪ್ರತಿದಿನ ಆರೋಗ್ಯ ಇಲಾಖೆ ಸಿಬ್ಬಂದಿ ಧರಣಿ ನಿರತರ ಸಾಮಾನ್ಯ ಆರೋಗ್ಯ ತಪಾಸಣೆ ನಡೆಸುತ್ತಿದ್ದು ಸ್ಥಳದಲ್ಲಿ ಆಂಬುಲೆನ್ಸ್‌ ಇರಿಸಲಾಗಿದೆ.

ನಿಲೋಗಲ್‌, ಅಚನೂರು ಸೀಮಾಂತರದಲ್ಲಿರುವ ಸುಮಾರು 1,300 ಎಕರೆ ಸರ್ಕಾರಿ ಜಮೀನು ಇದ್ದು ಬಹುತೇಕ ಪ್ರದೇಶವನ್ನು ಪ್ರಭಾವಿಗಳು ಕಬಳಿಸಿದ್ದಾರೆ. ಅದೇ ಪ್ರದೇಶದಲ್ಲಿ ಅನೇಕ ದಶಕಗಳಿಂದಲೂ ದಲಿತ, ಉಪ್ಪಾರ ಕುಟುಂಬದ ಬಡವರು ಸಾಗುವಳಿ ಮಾಡುತ್ತ ಬಂದಿದ್ದಾರೆ. ಆದರೆ ಪ್ರಭಾವಿಗಳ ತಂಟೆಗೆ ಹೋಗದ ಅಧಿಕಾರಿಗಳು ಬಡವರು, ದಲಿತರನ್ನು ಮಾತ್ರ ಒಕ್ಕಲೆಬ್ಬಿಸುವ ಮೂಲಕ ಅನ್ಯಾಯ, ಅಕ್ರಮಕ್ಕೆ ಅಧಿಕಾರಿಗಳೇ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸ್ಥಳಕ್ಕೆ ಬಂದ ತಹಶೀಲ್ದಾರ್ ಅಶೋಕ್ ಶಿಗ್ಗಾಂವಿ, ಈಗಾಗಲೇ 60 ಎಕರೆ ಸರ್ಕಾರಿ ಜಮೀನನ್ನು ಸರ್ವೆ ಮಾಡಿಸಲಾಗಿದ್ದು ಸಂಬಂಧಿಸಿದವರಿಗೆ ನೋಟಿಸ್‌ ನೀಡಿ ಜಮೀನು ಕಬ್ಜಾ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಧರಣಿ ಹಿಂಪಡೆಯುವಂತೆ ಹೇಳಿದರು. ಆದರೆ ಅದಕ್ಕೆ ಒಪ್ಪದ ಧರಣಿ ನಿರತರು, ‘ದೊಡ್ಡ ಕುಳಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದೀರಿ, ಬಡವರ ಮೇಲೆ ಕರುಣೆಯಿಲ್ಲ. ಹಾಲಿ ಮಾಜಿ ಶಾಸಕರು, ಸಚಿವರು, ಪ್ರಭಾವಿಗಳು ವಿವಿಧ ರೀತಿಯ ಗಣಿಗಾರಿಕೆ ನಡೆಸುತ್ತಿದ್ದರೂ ನಿಮ್ಮ ಕೈಲಿ ಕ್ರಮ ಕೈಗೊಳ್ಳಲಾಗುತ್ತಿಲ್ಲ. ಆದರೆ ಬದುಕುವುದಕ್ಕೆ ಸಾಗುವಳಿ ಮಾಡುವ ದಲಿತರ ಮೇಲೆ ಮಾತ್ರ ಕಾನೂನು ಕ್ರಮಕ್ಕೆ ಮುಂದಾಗಿದ್ದೀರಿ. ವಾರದಿಂದ ಧರಣಿ ನಡೆಸುತ್ತಿದ್ದರೂ ನಿರ್ಲಕ್ಷಿಸಿದ್ದೀರಿ’ ಎಂದು ಆಕ್ರೋಶ ಹೊರಹಾಕಿದರು. ಅಲ್ಲದೆ ‘ನಮ್ಮ ಬೇಡಿಕೆಯನ್ನು ತಕ್ಷಣ ಈಡೇರಿಸಬೇಕು ಇಲ್ಲದಿದ್ದರೆ ಧರಣಿ ಕೈಬಿಡುವುದಿಲ್ಲ’ ಎಂದು ಹೇಳಿದರು.

ನೀಲಪ್ಪ ಕಡಿಯವರ, ನಾಗರಾಜ ನಂದಾಪುರ, ಯಮನೂರು ಮನ್ನೇರಾಳ, ಛತ್ರಪ್ಪ ಮೇಗೂರು, ನಿರುಪಾದಿ ಕಲಿಕೇರಿ, ದುರಗೇಶ ಮಿಯಾಪುರ, ಹನುಮಂತ ಪೂಜಾರ, ಬಸವರಾಜ ಬೇವಿನಗಿಡದ, ಗುರುರಾಜ ಪೂಜಾರ, ವಕೀಲರಾದ ಮರಿಯಪ್ಪ ಲಿಂಗದಳ್ಳಿ, ಶುಕಮುನಿ ಗುಮಗೇರಿ ಇತರರು ಇದ್ದರು.

ಸೂಕ್ತ ದಾಖಲೆ ನೀಡಿದರೆ ಅಗತ್ಯ ಕ್ರಮ

ನಿಲೋಗಲ್‌ ಸೀಮಾಂತರದಲ್ಲಿನ ಸರ್ಕಾರಿ ಜಮೀನಿನಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಕ.ಕ ಪ್ರದೇಶ ಅಭಿವೃದ್ಧಿ ಮಂಡಳಿ ₹ 75 ಲಕ್ಷ ಬಿಡುಗಡೆ ಮಾಡಿತ್ತು. ಆದರೆ ಈಗ ಅಲ್ಲಿದ್ದ ಕಟ್ಟಡವೂ ಇಲ್ಲ ಕ್ರೀಡಾಂಗಣವೂ ನಾಪತ್ತೆಯಾಗಿದೆ. ಸಾವಿರ ಎಕರೆ ಜಮೀನನ್ನು ರಾಜಕೀಯ ಪ್ರಭಾವಿಗಳು ಉಳ್ಳವರೇ ಕಬಳಿಸಿದ್ದಾರೆ. ಅವರನ್ನೂ ಒಕ್ಕಲೆಬ್ಬಿಸಿ ಎಂದು ಪ್ರತಿಭಟನಕಾರರು ಸವಾಲು ಹಾಕಿದರು.

ಈ ಕುರಿತು ನಂತರ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅಶೋಕ ಶಿಗ್ಗಾಂವಿ ‘ಯಾರೇ ಆಗಲಿ ಸೂಕ್ತ ದಾಖಲೆಗಳನ್ನು ಸಲ್ಲಿಸಿದರೆ ಪರಿಶೀಲಿಸುವುದಾಗಿ ಹೇಳಿದರು. ಆದರೆ 60 ಎಕರೆಗೆ ಸಂಬಂಧಿಸಿದ ಸರ್ಕಾರಿ ಜಮೀನಿನಲ್ಲಿ ಯಾರಿಗೂ ಪಟ್ಟಾ ನೀಡಿಲ್ಲ. ಅಲ್ಲಿ ಸರ್ಕಾರಿ ಕಟ್ಟಡಗಳ ನಿರ್ಮಾಣ ಸ್ಥಗಿತಗೊಳಿಸಲು ನಿಯಮಗಳಲ್ಲಿ ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.