ಕುಷ್ಟಗಿ: ತಾಲ್ಲೂಕಿನ ಮುದೇನೂರು ಗ್ರಾಮ ಪಂಚಾಯಿತಿಯಲ್ಲಿ ಅಂಗವಿಕಲರ ಕುಂದುಕೊರತೆಗೆ ಸಂಬಂಧಿಸಿದಂತೆ ಸಮನ್ವಯ ಸಮಿತಿ ಸಭೆ ನಡೆಸದೆ ಸರ್ಕಾರಕ್ಕೆ ಸುಳ್ಳು ವರದಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿ ತನಿಖೆ ನಡೆಸಿದ್ದಾರೆ.
ಈ ವಿಷಯ ಕುರಿತ ‘ಪ್ರಜಾವಾಣಿ’ ವಿಶೇಷ ವರದಿ ಗಮನಿಸಿದ ರಾಜ್ಯ ಅಂಗವಿಕಲ ಕಲ್ಯಾಣ ಇಲಾಖೆ ಕೇಂದ್ರ ಕಚೇರಿಯ ಅಧಿಕಾರಿಗಳು ಪರಿಶೀಲನೆ ನಡೆಸಿ ನಿಯಮಗಳ ಅನುಸಾರ ಕ್ರಮ ಜರುಗಿಸುವಂತೆ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿಗೆ ಸೂಚಿಸಿದ್ದಾರೆ ಎಂಬುದು ಗೊತ್ತಾಗಿದೆ.
ಶನಿವಾರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ವೆಂಕಟೇಶ ದೇಶಪಾಂಡೆ ಹಾಗೂ ತಾಲ್ಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಚಂದ್ರಶೇಖರ ಹಿರೇಮನಿ ವಾಸ್ತವ ಅಂಶಗಳನ್ನು ಪರಿಶೀಲಿಸಿದರು. ಅಭಿವೃದ್ಧಿ ಅಧಿಕಾರಿ ಹನುಮಂತರಾಯ ಕಾಟಿಗಲ್ ಅವರಿಂದ ಮಾಹಿತಿ ಪಡೆಯಲಾಯಿತು.
ಗ್ರಾಮೀಣ ಅಂಗವಿಕಲ ಪುನರ್ವಸತಿ ಕಾರ್ಯಕರ್ತ ನೀಡಿದ ವರದಿಯಲ್ಲಿರುವ ಸಹಿ ತಮ್ಮದಲ್ಲ ತಮ್ಮ ಸಹಿಯನ್ನು ಯಾರೋ ನಕಲು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಗೆ ಅಭಿವೃದ್ಧಿ ಅಧಿಕಾರಿ ವರದಿ ನೀಡಿದ್ದು ಅಂಗವಿಕಲರ ಸಮನ್ವಯ ಸಭೆ ನಡೆದೇ ಇಲ್ಲ, ಸುಳ್ಳು ವರದಿ ಸಲ್ಲಿಸಲಾಗಿದೆ ಎಂಬುದನ್ನು ವರದಿಯಲ್ಲಿ ವಿವರಿಸಿದ್ದಾರೆ. ಅದೇ ರೀತಿ ‘ಪ್ರಜಾವಾಣಿ’ ವರದಿ ಅನ್ವಯ ಪರಿಶೀಲನೆ ನಡೆಸಲಾಗಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ನೀಡಿರುವ ವರದಿ ಸುಳ್ಳಿನಿಂದ ಕೂಡಿದೆ ಎಂದು ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆ ಅಧಿಕಾರಿಗೆ ನೀಡಿರುವ ವರದಿಯಲ್ಲಿ ತಾಲ್ಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಚಂದ್ರಶೇಖರ ಹಿರೇಮನಿ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ವೆಂಕಟೇಶ ದೇಶಪಾಂಡೆ, ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ, ತಾಲ್ಲೂಕು ನೇಮಕಾತಿ ಸಮಿತಿ ಅಧ್ಯಕ್ಷರೂ ಆಗಿರುವ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರು ನೀಡಬೇಕಿರುವ ವರದಿ ಬಂದ ನಂತರ ಇಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಕಚೇರಿಗೆ ವಾಸ್ತವ ವರದಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು. ಅಲ್ಲದೆ ಅಭಿವೃದ್ಧಿ ಅಧಿಕಾರಿ ಸಹಿ ನಕಲಿಯಾಗಿದ್ದರೆ ಅದರ ಬಗ್ಗೆ ಪ್ರತ್ಯೇಕ ತನಿಖೆ ನಡೆಸಬೇಕಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.