ADVERTISEMENT

ಕುಷ್ಟಗಿ | ವಾಣಿಜ್ಯ ಮಳಿಗೆ ನಿಯಮ ಉಲ್ಲಂಘನೆ: ತಿಂಗಳಾದರೂ ಕಾಣದ ತಾರ್ಕಿಕ ಅಂತ್ಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 6:33 IST
Last Updated 3 ಸೆಪ್ಟೆಂಬರ್ 2025, 6:33 IST
ಕುಷ್ಟಗಿ ಪುರಸಭೆ ಕಚೇರಿ
ಕುಷ್ಟಗಿ ಪುರಸಭೆ ಕಚೇರಿ   

ಕುಷ್ಟಗಿ: ಇಲ್ಲಿಯ ಸಂತೆ ಮೈದಾನದಲ್ಲಿರುವ ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳ ವಿಷಯದಲ್ಲಿ ನಿಯಮಗಳನ್ನು ಉಲ್ಲಂಘಿಸಿದ ಹಿಂದಿನ ಮುಖ್ಯಾಧಿಕಾರಿ, ಜಿಲ್ಲಾಧಿಕಾರಿ ಗಮನಕ್ಕೆ ತಾರದೆ ತಮ್ಮ ಹಂತದಲ್ಲೇ ವ್ಯಾಪಾರಿಗಳಿಗೆ 12 ವರ್ಷಗಳವರೆಗೆ ಅತೀ ಕಡಿಮೆ ಬಾಡಿಗೆಗೆ ವಹಿಸಿ ಕರ್ತವ್ಯ ಲೋಪ ಎಸಗಲಾಗಿದೆ ಎಂಬುದಕ್ಕೆ ಸಂಬಂಧಿಸಿದ ಪ್ರಕರಣ ತಿಂಗಳಾದರೂ ತಾರ್ಕಿಕ ಅಂತ್ಯ ಕಂಡಿಲ್ಲ.

ಈ ವಿಷಯಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳ ಸೂಚನೆಯಂತೆ ಹಿಂದೆ ಇಲ್ಲಿ ಮುಖ್ಯಾಧಿಕಾರಿಯಾಗಿದ್ದ ಉಮೇಶ ಹಿರೇಮಠ (ಸದ್ಯ ಹೂವಿನಹಡಗಲಿ ಪುರಸಭೆ ಸಮುದಾಯ ಸಂಘಟನಾಧಿಕಾರಿ) ಅವರಿಗೆ ಪುರಸಭೆಯ ಹಾಲಿ ಮುಖ್ಯಾಧಿಕಾರಿ ಕಾರಣ ಕೇಳಿ ಮೂರು ಬಾರಿ ನೋಟಿಸ್‌ ನೀಡಿದ್ದಾರೆ. ಆದರೆ ಕೇವಲ ಪತ್ರವ್ಯವಹಾರ ಮುಂದುವರೆದಿದ್ದು ಪ್ರಕರಣವನ್ನು ನೇಪಥ್ಯಕ್ಕೆ ಸರಿಸುವ ನಿಟ್ಟಿನಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ, ಕೆಲ ಸದಸ್ಯರು ಮತ್ತು ಸಿಬ್ಬಂದಿ ವ್ಯವಸ್ಥಿತ ತಂತ್ರ ಅನುಸರಿಸಿದ್ದಾರೆ ಎಂಬ ದೂರು ಕೇಳಿಬಂದಿದೆ.

ಪ್ರಕರಣ ಕೈಬಿಡಲು ಕೋರಿಕೆ: ಈ ವಿಷಯಕ್ಕೆ ಸಂಬಂಧಿಸಿದಂತೆ ಉಮೇಶ ಹಿರೇಮಠ ಅವರಿಗೆ 3ನೇ ಬಾರಿ (ಆ.25ಕ್ಕೆ) ನೀಡಿರುವ ನೋಟಿಸ್‌ದಲ್ಲಿ ನಿಯಮ ಉಲ್ಲಂಘಿಸಿರುವುದನ್ನು ಮುಖ್ಯಾಧಿಕಾರಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. 2ನೇ ನೋಟಿಸ್‌ಗೆ ಉಮೇಶ ಹಿರೇಮಠ (ಆ.14) ನೀಡಿದ್ದ ಉತ್ತರದಲ್ಲಿ ‘ತಾವು ಯಾವುದೇ ನಿಯಮ ಉಲ್ಲಂಘಿಸಿಲ್ಲ, ಪುರಸಭೆಗೆ ಆದಾಯ ನಿರೀಕ್ಷಿಸಿ ತುರ್ತಾಗಿ ಒಡಂಬಡಿಕೆ ಮಾಡಿಕೊಂಡು ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿದೆ. ಈ ಬಗ್ಗೆ 2021ರ ಜುಲೈ 9ರ ಸಾಮಾನ್ಯ ಸಭೆಯಲ್ಲಿ ಠರಾವು ಅಂಗೀಕರಿಸಲಾಗಿತ್ತು. ಹಾಗಾಗಿ ಈ ವಿಷಯವನ್ನು ಇದೇ ಹಂತದಲ್ಲಿ ಕೈಬಿಡುವಂತೆ, ಕೊನೆಗೊಳಿಸಬೇಕು’ ಎಂದು ತಿಳಿಸಿದ್ದರು.

ADVERTISEMENT

ಆದರೆ ಉತ್ತರ ಸಮರ್ಪಕವಾಗಿರದ ಕಾರಣ ಮುಖ್ಯಾಧಿಕಾರಿ ವೆಂಕಪ್ಪ ಬೀಳಗಿ ಮತ್ತೊಮ್ಮೆ ನೋಟಿಸ್‌ ನೀಡಿದ್ದು ಅದರಲ್ಲಿ ‘ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಿ ವ್ಯಾಪಾರಿಗಳಿಂದ ಒಡಂಬಡಿಕೆ ಮೂಲಕ ಠೇವಣಿ ನಿಗದಿಪಡಿಸಿ ಬಾಡಿಗೆಗೆ ನೀಡಲಾಗಿದೆ ಎಂದು ಉತ್ತರಿಸಿರುತ್ತೀರಿ, ಆದರೆ ಸಾಮಾನ್ಯ ಸಭೆಯ ಸಭಾ ನಡವಳಿಯಲ್ಲಿ ಸಂತೆ ಮೈದಾನದಲ್ಲಿರುವ ಮಳಿಗೆಗಳ ವಿಷಯವೇ ಇಲ್ಲ. ಅಲ್ಲದೆ ಒಂದೊಮ್ಮೆ ಸಾಮಾನ್ಯ ಸಭೆ ಠರಾವು ಮಾಡಿದ್ದರೆ ಅದಕ್ಕೆ ಜಿಲ್ಲಾಧಿಕಾರಿಯ ಅನುಮೋದನೆಯನ್ನೂ ಪಡೆದಿರುವುದಿಲ್ಲ, ಠೇವಣಿ ಮೊತ್ತವೂ ಜಮೆಯಾಗಿಲ್ಲ, ಠೇವಣಿ ಹಣ ಜಮೆ ಮಾಡಿಸಿಕೊಳ್ಳಲು ತಮಗೆ ಯಾವುದೇ ತಿಳಿಸಿಯೇ ಇಲ್ಲ ಎಂದು ಕಂದಾಯ ಅಧಿಕಾರಿ ಖಾಜಾಹುಸೇನ್‌, ಕಂದಾಯ ನಿರೀಕ್ಷಕ ರಾಘವೇಂದ್ರ ಸ್ಪಷ್ಟಪಡಿಸಿದ್ದಾರೆ. ಜಿಲ್ಲಾಧಿಕಾರಿ ಮಂಜೂರಾತಿ ಪಡೆಯದೇ ನಿಮ್ಮ ಹಂತದಲ್ಲಿಯೇ ಬಾಡಿಗೆ ದರ ಮತ್ತು ಠೇವಣಿ ನಿಗದಿಪಡಿಸುವ ನಿರ್ಧಾರ ತೆಗೆದುಕೊಳ್ಳುವ ಮೂಲಕ ಸರ್ಕಾರದ ಸುತ್ತೋಲೆ ನಿಯಮ ಉಲ್ಲಂಘನೆಯಾಗಿದೆ. ಅಲ್ಲದೆ ಪುರಸಭೆಯ ಆರ್ಥಿಕ ನಷ್ಟಕ್ಕೆ ನೀವೇ ಹೊಣೆಗಾರರಾಗಿದ್ದು ಏಕೆ ನಿಮ್ಮ ಮೇಲೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬಾರದು?’ ಎಂದು ನೋಟಿಸ್‌ನಲ್ಲಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.