ಕುಷ್ಟಗಿ ಬಳಿಯ ಬೀಜೋತ್ಪಾದನೆ ಹತ್ತಿ ಬೆಳೆ ಅತಿಯಾದ ಮಳೆಗೆ ಹಳದಿ ಬಣ್ಣಕ್ಕೆ ತಿರುಗಿರುವುದು
ಕುಷ್ಟಗಿ: ಒಂದು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದಾಗಿ ಸೂರ್ಯರಶ್ಮಿ ನೆಲಕ್ಕೆ ಸೋಕಿಲ್ಲ. ಹೊಲಗಳಲ್ಲಿ ಬೆಳೆಗಳಿಗಿಂತ ಕಳೆ ಮೇಲುಗೈ ಸಾಧಿಸಿದೆ. ತೇವಾಂಶ ಹೆಚ್ಚಾಗಿ ಬೆಳೆಗಳು ಹಾನಿಗೊಳಗಾಗುತ್ತಿದ್ದು, ರೈತರನ್ನು ಆತಂಕಕ್ಕೆ ದೂಡಿದೆ.
ಹಿಂಗಾರು ಹಂಗಾಮಿನ ವಿವಿಧ ಬೆಳಗಳ ಮೇಲೆ ದುಷ್ಪರಿಣಾಮ ಉಂಟು ಮಾಡಿರುವ ಮಳೆ ಇನ್ನೂ ಬಿಡುವ ಲಕ್ಷಣಗಳೇ ಇಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಬೆಳೆಗಳು ಸಂಪೂರ್ಣ ಕೈಕೊಡುವ ಸಾಧ್ಯತೆ ಕಣ್ಮುಂದಿರುವುದರಿಂದ ಹಸಿ ಬರದ ಛಾಯೆ ಆವರಿಸಿದೆ.
ಕೃಷಿ ಬೆಳೆಗಳ ಜೊತೆಗೆ ತರಕಾರಿ, ಹಣ್ಣುಗಳು ಸೇರಿ ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿವೆ. ಹೆಸರು ಕಾಯಿಯಲ್ಲಿನ ಕಾಳುಗಳು ಮೊಳಕೆಯೊಡೆದು ಬಹುತೇಕ ಹಾಳಾಗಿದೆ. ಎಳ್ಳು ಕೊಯಿಲಿಗೆ ಬಂದಿ, ಕೊಯಿಲಾಗಿದ್ದನ್ನು ಗೂಡು ಹಾಕಲಾಗಿದ್ದು ಬಿಸಿಲು ಇಲ್ಲದೆ ಜಿನುಗು ಮಳೆಯಿಂದ ಕೊಳೆಯುವ ಹಂತ ತಲುಪಿವೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂದು ಕುಷ್ಟಗಿಯ ರೈತ ಹನುಮಂತ ಕುರಿ ಅಸಹಾಯಕತೆ ವ್ಯಕ್ತಪಡಿಸಿದರು.
ತಾಲ್ಲೂಕು ಹಾಗೂ ಸುತ್ತಲಿನ ಪ್ರದೇಶದಲ್ಲಿ ಬಹಳಷ್ಟು ಜನರು ದಾಳಿಂಬೆ ಬೆಳೆದಿದ್ದು, ಕಾಯಿಗಳಿಗೆ ರೋಗ ತಗುಲಿದೆ. ಹೊಲಗಳಲ್ಲಿ ನೀರು ಸಂಗ್ರಹವಾಗಿ ಗಿಡಗಳಿಗೂ ಹಾನಿಯಾಗುತ್ತಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದರೂ ನಿರಂತರ ಮಳೆಗೆ ಬೆಳೆ ಹಾಳುಗುತ್ತಿದೆ ಎಂಬ ಕೊರಗು ದಾಳಿಂಬೆ ಬೆಳೆಗಾರರದ್ದು.
ಅತಿಯಾದ ಮಳೆಯಿಂದ ತಾಕಿನಲ್ಲಿ ನೀರು ಸಂಗ್ರವಹಾಗಿ ತೇವಾಂಶ ಹೆಚ್ಚಿದೆ. ಈ ಕಾರಣಕ್ಕೆ ಕಾಯಿಕಟ್ಟುವ ಮೊದಲೇ ಮೊಗ್ಗುಗಳು ಉದುರುತ್ತಿವೆ. ಕಟ್ಟಿದ ಕಾಯಿಗಳೂ ನೆಲಕ್ಕೆ ಬೀಳುತ್ತಿವೆ. ಇನ್ನು ಹತ್ತಿ ಬೆಳೆ ನಸುಗೆಂಪು ಬಣಕ್ಕೆ ತಿರುಗಿದ್ದು ಬೆಳವಣಿಗೆ ಕುಂಠಿತಗೊಂಡಿದೆ ಎಂದು ಮೆಣೆದಾಳದ ರೈತ ದುರುಗಪ್ಪ ಗೊರ್ಲೂಟಿ, ಹನುಮಗೌಡ ಇತರರು ಗೋಳು ತೋಡಿಕೊಂಡರು.
ಸಜ್ಜೆ ತೆನೆಯಲ್ಲೇ ಮೊಳಕೆ: ಮುಂಗಾರು ಹಂಗಾಮಿನಲ್ಲಿ ಬೆಳೆದ ಸಜ್ಜೆ ಬೆಳೆ ಅತ್ಯುತ್ತಮವಾಗಿದೆ. ತೆನೆಗಳು ಕಾಳು ತುಂಬಿಕೊಂಡಿವೆ. ಆದರೆ ನಿರಂತರ ಮಳೆ ಜಿನುಗುತ್ತಿರುವುದರಿಂದ ತೇವಾಂಶ ಹೆಚ್ಚಿ ತೆನೆಯಲ್ಲಿಯೇ ಮೊಳಕೆಯೊಡೆಯುತ್ತಿರುವುದು ರೈತರ ನಿದ್ದೆಗೆಡಿಸಿದೆ.
ಅಳವಂಡಿ ಸಮೀಪದ ಘಟ್ಟಿರೆಡ್ಡಿಹಾಳದಲ್ಲಿ ನೀರಿನಲ್ಲಿ ನಿಂತುಕೊಂಡ ಉಳ್ಳಾಗಡ್ಡಿ ಬೆಳೆ
136 ಹೆಕ್ಟೇರ್ ಪ್ರದೇಶದಲ್ಲಿ ಹಾನಿ
ಕೊಪ್ಪಳ: ನಿರಂತರವಾಗಿ ಜಿಟಿಜಿಟಿ ಮಳೆಗೆ ಜಿಲ್ಲೆಯಲ್ಲಿ ಒಟ್ಟು 136 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳು ಹಾನಿಯಾಗಿವೆ ಎಂದು ಕೃಷಿ ಇಲಾಖೆ ಪ್ರಾಥಮಿಕ ವರದಿಯನ್ನು ತಯಾರಿಸಿದೆ. ಕಪ್ಪುಮಣ್ಣಿನ ಭೂಮಿಯಿರುವ ಕುಷ್ಟಗಿ ಹಾಗೂ ಕುಕನೂರು ಭಾಗದಲ್ಲಿ ಹಾನಿ ಪ್ರಮಾಣ ಹೆಚ್ಚಿದೆ. ಮೆಕ್ಕಜೋಳ 28 ಹೆಕ್ಟೇರ್ ಹತ್ತಿ 21 ಹಾಗೂ ತೊಗರಿ 54 ಹೆಕ್ಟೇರ್ ಪ್ರದೇಶದಲ್ಲಿ ಹಾಳಾಗಿದೆ. ಕುಕನೂರು ಭಾಗದಲ್ಲಿ ಹೆಸರಿಗೆ ಜಾಸ್ತಿ ಸಮಸ್ಯೆಯಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಬೀಜೋತ್ಪಾದನೆ ಹತ್ತಿಗೆ ಕುತ್ತು
ಬೀಜೋತ್ಪಾದನೆ ಹತ್ತಿ ಬೆಳೆ ಹಾನಿಗೊಳಗಾಗುತ್ತಿರುವುದು ಸಾಕಷ್ಟು ಹಣ ಖರ್ಚು ಮಾಡಿರುವ ರೈತರು ಆತಂಕಕ್ಕೀಡಾಗಿದ್ದಾರೆ. 'ಹತ್ತಿಗೆ ಹತ್ತು ಕುತ್ತು' ಎಂಬ ಮಾತು ಈ ಬಾರಿ ಅಕ್ಷರಶಃ ನಿಜವಾಗುವಂತಿದೆ. ಎರಡು ಕ್ವಿಂಟಲ್‌ಗಿಂದ ಹೆಚ್ಚಿನ ಬೀಜ ತೆಗೆದುಕೊಳ್ಳುವುದಿಲ್ಲ ಎಂದೆ ಖಾಸಗಿ ಕಂಪನಿಗಳ ಅಸಹಕಾರಕ್ಕೆ ರೈತರು ಹೋರಾಟ ಮಾಡುವ ಹಂತಕ್ಕೆ ಬಂದಿದ್ದರು. ಈ ವಿಷಯದಲ್ಲಿ ಸ್ವತಃ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಹೆಚ್ಚಿನ ಮುತುವರ್ಜಿ ವಹಿಸಿ ರೈತರ ನೆರವಿಗೆ ಬಂದಿದ್ದಲ್ಲದೆ ಬೀಜೋತ್ಪಾದನೆ ಕಂಪನಿಗಳಿಗೆ ಎಚ್ಚರಿಕೆ ನೀಡಬೇಕಾಯಿತು. ನಂತರ ಬೀಜದ ಕಂಪೆನಿಗಳು ಎಷ್ಟೇ ಬೀಜ ಬೆಳೆದರೂ ಖರಿದುಸುವುದಾಗಿ ಭರವಸೆ ನೀಡಿದ್ದು. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಒಂದು ತಾಕಿಗೆ ಕನಿಷ್ಟ ಒಂದು ಕ್ವಿಂಟಲ್ ಆದರೂ ಹತ್ತಿ ಬೀಜಗಳ ಬರುತ್ತವೆಯೋ ಇಲ್ಲವೊ ಎನ್ನುತ್ತಾರೆ ಮದಲಗಟ್ಟಿಯ ರೈತ ಹನುಮಗೌಡ ಪಾಟೀಲ.
ಕಪ್ಪುಮಣ್ಣಿನ ಭೂಮಿಯಿರುವ ಕಡೆ ಮಳೆಯಿಂದ ಹಾನಿಯಾಗಿದೆ. ಹೆಸರು ಫಸಲು ಪಡೆಯುತ್ತಿದ್ದಾಗಲೇ ರೈತರಿಗೆ ಸಂಕಷ್ಟ ಎದುರಾಗಿದೆ. ಮಳೆ ಸಂಪೂರ್ಣವಾಗಿ ನಿಂತರಷ್ಟೇ ಅನುಕೂಲವಾಗುತ್ತದೆ.ರುದ್ರೇಶಪ್ಪ ಟಿ.ಎಸ್., ಕೃಷಿ ಇಲಾಖೆ ಜಂಟಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.