ಕುಷ್ಟಗಿ: ತಾಲ್ಲೂಕಿನಲ್ಲಿ ಬುಧವಾರ ಮಳೆ ಪ್ರಮಾಣ ತೀರಾ ಕಡಿಮೆಯಾದರೂ ಹಳ್ಳಗಳು ಮಾತ್ರ ನದಿ ರೂಪದಲ್ಲಿ ಹರಿಯುತ್ತಿದ್ದುದು ಗುರುವಾರ ಕಂಡುಬಂತು.
ಉತ್ತರ ಭಾಗದಲ್ಲಿರುವ ಯಲಬುರ್ಗಾ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಮೂರ್ನಾಲ್ಕು ತಾಸಿನವರೆಗೂ ಅತ್ಯಧಿಕ ಮಳೆ ಸುರಿದ ಪರಿಣಾಮ ಕುಷ್ಟಗಿ ತಾಲ್ಲೂಕಿನ ಹಳ್ಳಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು.
ಶಾಖಾಪುರ, ಯಲುಬುರ್ತಿ, ಬಂಡಿ, ಬನ್ನಿಗೋಳ ಭಾಗದಿಂದ ಬರುವ ಹಳ್ಳಗಳ ಹೆಚ್ಚಿನ ಪ್ರಮಾಣದ ನೀರು ನಿಡಶೇಸಿ ಕೆರೆಗೆ ಬಂದಿತು. ಸಾರ್ವಜನಿಕರು, ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಕೆಲ ವರ್ಷಗಳ ಹಿಂದೆ ನಿಡಶೇಸಿ ಕೆರೆ ಪುನಶ್ಚೇತನಗೊಂಡಿತ್ತು. ಹಲವು ವರ್ಷಗಳ ನಂತರ ಈ ಬಾರಿ ಮಾತ್ರ ಕೋಡಿ ಮೂಲಕ ನೀರು ಧುಮ್ಮಿಕ್ಕುತ್ತಿರುವುದನ್ನು ನೋಡಲು ಪಟ್ಟಣ ಹಾಗೂ ಸುತ್ತಲಿನ ಜನರು ತಂಡೋಪತಂಡವಾಗಿ ಬಂದಿದ್ದರು.
ಹಳ್ಳದ ಪ್ರವಾಹದಿಂದ ಹನುಮಸಾಗರ, ಬಿಜಕಲ್ ರಾಜ್ಯ ಹೆದ್ದಾರಿಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಮುದೇನೂರು ಹಳ್ಳವೂ ನದಿಯಂತೆ ಗೋಚರಿಸಿತು. ರ್ಯಾವಣಕಿ ಸಮೀಪದವರೆಗೂ ನೀರು ಬಂದು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ವಾಹನಗಳು ಸಂಚರಸಲು ಸಾಧ್ಯವಾಗಲಿಲ್ಲ. ಹಳ್ಳಕ್ಕೆ ಸೇತುವೆಯ ಅಗತ್ಯ ಇರುವುದನ್ನು ಗ್ರಾಮಸ್ಥರು ಪುನರುಚ್ಚರಿಸಿದರು.
ಬೆಳೆಹಾನಿ: ಕುಷ್ಟಗಿ ತಾಲ್ಲೂಕಿನ ಟಕ್ಕಳಕಿ, ಬಿಜಕಲ್, ವಣಗೇರಿ ಸೀಮಾಂತರದಲ್ಲಿ ಹಳ್ಳದ ನೀರು ಪ್ರವಾಹ ರೂಪದಲ್ಲಿ ಹರಿದು ದಾಳಿಂಬೆ, ಮಕ್ಕೆಜೋಳ, ತೊಗರಿ, ಸಜ್ಜೆ, ತರಕಾರಿ ಮೊದಲಾದ ಬೆಳೆಗಳ ಹೊಲ ಗದ್ದೆಗಳು, ತೋಟಗಳು ಜಲಾವೃತಗೊಂಡಿದ್ದವು.
ಸಾಕಷ್ಟು ಸಂಖ್ಯೆಯಲ್ಲಿ ರೈತರು ಹತ್ತಿ ಬೀಜೋತ್ಪಾದನೆಯಲ್ಲಿ ತೊಡಗಿದ್ದು ಬಹಳಷ್ಟು ತಾಕುಗಳಲ್ಲಿ ನೀರು ಭರ್ತಿಯಾಗಿ ಬೆಳೆಗಳು ಹಾಣಿಗೊಳಾಗಿದ್ದು ಕಂಡುಬಂದಿತು. ವಣಗೇರಿ ಸೀಮಾಂತರದಲ್ಲಿನ ಹಳ್ಳಕ್ಕೆ ಅವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದ ಸರಣಿ ಚೆಕ್‌ಡ್ಯಾಂ ಮೂಲಕ ನೀರು ಹರಿಯಲು ಸಾಧ್ಯವಾಗದೆ ಹೊಲಗಳಿಗೆ ನುಗ್ಗಿ ಮೇಲ್ಮಣ್ಣು ಸಹ ಕೊಚ್ಚಿ ಅವಾಂತರ ಸೃಷ್ಟಿಸಿದೆ ಎಂದು ರೈತ ಶಿವನಗೌಡ ಟಕ್ಕಳಕಿ, ಬಸವರಾಜ ಇತರರು ಹೇಳಿದರು.
ವಣಗೇರಿ ಸೀಮಾಂತರದಲ್ಲಿ ಪಾಂಡುರಂಗ ಚವ್ಹಾಣ ಎಂಬುವವರ ತೋಟದಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ಎಂಟು ಹಸುಗಳನ್ನು ಕುಷ್ಟಗಿಯ ಅಗ್ನಿಶಾಮಕ ಠಾಣೆ ಸಿಬ್ಬಂದಿ ರಕ್ಷಿಸಿದರು. ನಂತರ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ದೊಡ್ಡನಗೌಡ ಪಾಟೀಲ ಹಾನಿಗೊಳಗಾದ ಹೊಲಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ರೈತರು ತಮ್ಮ ಸಮಸ್ಯೆಯನ್ನು ಶಾಸಕರಿಗೆ ವಿವರಿಸಿದರು.
ನೀರು ಕಡಿಮೆಯಾದ ನಂತರ ಮತ್ತೊಮ್ಮೆ ಭೇಟಿ ನೀಡಿ ಪರಿಶೀಲಿಸಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಹಾನಿ ಸಮೀಕ್ಷೆಗೆ ಸೂಚಿಸುವುದಾಗಿ ಶಾಸಕ ರೈತರಿಗೆ ಹೇಳಿದರು. ತಹಶೀಲ್ದಾರ್ ಅಶೋಕ ಶಿಗ್ಗಾಂವಿ, ತಾಪಂ ಇಒ ಪಂಪಾಪತಿ ಹಿರೇಮಠ ಇತರರು ಇದ್ದರು.
ಪ್ರವಾಹ ಇಳಿಮುಖವಾದ ನಂತರ ಮತ್ತೆ ಭೇಟಿ ನೀಡುತ್ತೇನೆ. ಬೆಳೆ ಹಾನಿಯ ಅಂದಾಜಿಗೆ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆದೊಡ್ಡನಗೌಡ ಪಾಟೀಲ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.