ADVERTISEMENT

ಅಂಜನಾದ್ರಿ ಬೆಟ್ಟ: ಕೋಟಿ ಕೋಟಿ ಆದಾಯ ಬಂದರೂ ಸೌಲಭ್ಯಕ್ಕೆ ಬರ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 7:48 IST
Last Updated 3 ಫೆಬ್ರುವರಿ 2025, 7:48 IST
ಹನುಮ ಜಯಂತಿ ವೇಳೆ ಅಂಜನಾದ್ರಿ ಬೆಟ್ಟ ಏರುವ ಭಕ್ತರು
ಹನುಮ ಜಯಂತಿ ವೇಳೆ ಅಂಜನಾದ್ರಿ ಬೆಟ್ಟ ಏರುವ ಭಕ್ತರು   

ಗಂಗಾವತಿ: ‘ಪ್ರತಿ ವರ್ಷ ಕೋಟ್ಯಂತರ ಜನ ಭೇಟಿ ನೀಡುವ, ಕೋಟ್ಯಂತರ ರೂಪಾಯಿ ಭಕ್ತರಿಂದಲೇ ಆದಾಯ ಗಳಿಸುವ ಅಂಜನಾದ್ರಿ ಬೆಟ್ಟ ಏರುವ ಮಾರ್ಗದಲ್ಲಿ ಅಲ್ಲಲ್ಲಿ ಕುಡಿಯುವ ನೀರಿನ ಕೇಂದ್ರಗಳು ಇದ್ದಿದ್ದರೆ, ಪ್ರಾಥಮಿಕ ಚಿಕಿತ್ಸೆಗೆ ಅವಕಾಶವಿದ್ದರೆ ನನ್ನ ಮಗ ಬದುಕಿರುತ್ತಿದ್ದ. ಇಷ್ಟೂ ಕನಿಷ್ಠ ಸೌಲಭ್ಯಗಳು ಇಲ್ಲವೆಂದರೆ ಇನ್ನೆಷ್ಟು ಜೀವಗಳು ಬೆಟ್ಟದಲ್ಲಿ ಬಲಿಯಾಗಬೇಕು?’

ಇದು ಇಲ್ಲಿನ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಲ್ಲಿ ವಾಲಿಬಾಲ್‌ ಕೋಚ್‌ ಆಗಿರುವ ಸುರೇಶ್‌ ಯಾದವ್ ಅವರ ಪ್ರಶ್ನೆ. ಸುರೇಶ್ ಅವರ 17 ವರ್ಷದ ಪುತ್ರ ಜಯೇಶ ಯಾದವ್ ಇತ್ತೀಚೆಗೆ ಬೆಟ್ಟ ಏರುವಾಗ ಹೃದಯ ಸ್ಥಂಭನವಾಗಿ ಮೃತಪಟ್ಟಿದ್ದರು.

ಮಗನನ್ನು ನೆನಪಿಸಿಕೊಂಡು ಕಣ್ಣೀರಿಟ್ಟ ಅವರು ‘ನನ್ನ ಮಗನಿಗೆ ಆದ ಅನ್ಯಾಯ ಯಾರಿಗೂ ಆಗಬಾರದು. ಬೆಟ್ಟ ಏರುವ ಮಾರ್ಗದಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕು. ಬೆಟ್ಟದ ಕೆಳ ಭಾಗದಲ್ಲಿಯೇ ಅಂಬುಲೆನ್ಸ್‌, ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಬೇಕು. ಮುಂಬರುವ ದಿನಗಳಲ್ಲಿ ಬಿಸಿಲು ಇನ್ನಷ್ಟು ಹೆಚ್ಚಾಗಲಿದ್ದು, ದುರ್ಘಟನೆಗಳು ನಡೆದ ಮೇಲೆ ಎಚ್ಚೆತ್ತುಕೊಳ್ಳುವ ಬದಲು ಈಗಲೇ ಜಾಗೃತರಾಗಬೇಕು’ ಎಂದು ಮನವಿ ಮಾಡಿದರು.

ADVERTISEMENT

ಇದೊಂದು ಉದಾಹರಣೆಯಷ್ಟೇ. ಬೆಟ್ಟ ಏರುವಾಗ ಹೃದಯಾಘಾತ, ಹೃದಯಸ್ಥಂಬನ ಹೀಗೆ ಒಂದಿಲ್ಲೊಂದು ಆರೋಗ್ಯ ಸಂಬಂಧಿತ ಸಮಸ್ಯೆಯಿಂದ ಉಸಿರು ಚೆಲ್ಲಿದವರು ಸಾಕಷ್ಟು ಜನರಿದ್ದಾರೆ. 2023ರಲ್ಲಿ ಕಲಘಟಗಿ ತಾಲ್ಲೂಕಿನ ಕೊಟ್ರೇಶ, ಲಕ್ಕುಂಡಿ ಗ್ರಾಮದ ಕಾರ್ತಿಕಗೌಡ ಶೇಖರಗೌಡ, 2024ರಲ್ಲಿ ರಾಜಸ್ಥಾನದ ಬಾಗಚಾಂದ್ ಟಾಕ್‌ ಹೀಗೆ ಅನೇಕರ ಸಾವಿನ ಪಟ್ಟಿಯೇ ಇದೆ. ಕೆಲವು ದಿನಗಳ ಹಿಂದೆಯಷ್ಟೇ ಬೆಟ್ಟದ ಮೇಲಿಂದ ಮಹಿಳೆ ಕಂದಕಕ್ಕೆ ಬಿದ್ದಿದ್ದಳು.    

ಆಂಜನಾದ್ರಿ ಈಗ ಸ್ಥಳೀಯ ಧಾರ್ಮಿಕ ತಾಣವಷ್ಟೇ ಅಲ್ಲ. ದೇಶ ಹಾಗೂ ವಿದೇಶಗಳಿಂದ ಕೋಟ್ಯಂತರ ಜನ ಬರುತ್ತಾರೆ. ಪ್ರತಿ ಶನಿವಾರ, ಭಾನುವಾರ, ಹಬ್ಬ, ಅಮವಾಸ್ಯೆ, ಹುಣ್ಣಿಮೆ, ಹನುಮ ಜಯಂತಿ, ಹನುಮಮಾಲಾ ವಿಸರ್ಜನೆ  ಹೀಗೆ ವಿಶೇಷ ದಿನಗಳಿಂದು ಜನಸಂದಣಿ ಇರುತ್ತದೆ. ಭಕ್ತರು ಬೆಟ್ಟದ ಮೆಟ್ಟಿಲುಗಳ ಮೇಲೆ ಒಂದೊಂದು ಹೆಜ್ಜೆ ಕಿತ್ತಿಡಲೂ ಪರದಾಡುವ ಸ್ಥಿತಿ ಇರುತ್ತದೆ.

ಜನಸಂದಣಿ ವೇಳೆ ದುರ್ಘಟನೆ ಸಂಭವಿಸಿದರೆ ಪ್ರಾಥಮಿಕ ಚಿಕಿತ್ಸೆಗೆ ಅಂಜನಾದ್ರಿ ಸಮೀಪದಲ್ಲಿಯೇ ಚಿಕಿತ್ಸಾ ಕೇಂದ್ರಗಳಿಲ್ಲ. ಹೃದಯಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಗಳಲ್ಲಿ ಒಂದು ಗಂಟೆಯ ’ಗೋಲ್ಡನ್‌ ಅವರ್‌’ನಲ್ಲಿ ಚಿಕಿತ್ಸೆ ಪಡೆದರೆ ಜೀವ ಉಳಿಸಿಕೊಳ್ಳಲು ಅವಕಾಶವಿರುತ್ತದೆ. ಅಂಥ ಸೌಲಭ್ಯಗಳು ಇಲ್ಲದಿರುವುದು ಭಕ್ತರನ್ನು ಆತಂಕಕ್ಕೆ ದೂಡಿದೆ.

ಅಂಜನಾದ್ರಿ ಪ್ರಖ್ಯಾತಿ ಪಡೆದ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಹುಂಡಿ, ವಿಶೇಷ ಪೂಜೆ, ಪಾರ್ಕಿಂಗ್ ಹೀಗೆ ಅನೇಕ ಮೂಲಗಳಿಂದ ವಾರ್ಷಿಕವಾಗಿ ಕೋಟ್ಯಂತರ ಹಣ ಬರುತ್ತದೆ. ಜಿಲ್ಲಾಡಳಿತ ಹನುಮ ಜಯಂತಿ, ಹನುಮಮಾಲಾ ವಿಸರ್ಜನೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಆದರೆ ಅಂಜನಾದ್ರಿ ಬಳಿ ಅಗತ್ಯ ಸೌಕರ್ಯ, ಸಂಚಾರ ದಟ್ಟಣೆ ತಡೆ, ಪ್ರಾಥಮಿಕ ತುರ್ತು ಚಿಕಿತ್ಸೆ ಕೇಂದ್ರ, ತಾತ್ಕಾಲಿಕ ಪೊಲೀಸ್ ಠಾಣೆ, ಮಾಹಿತಿ ಕೇಂದ್ರ ರಚನೆಗೆ ಮಾತ್ರ ಇಚ್ಛಾಶಕ್ತಿ ತೋರಿಸುತ್ತಿಲ್ಲ.

ಇಕ್ಕಟ್ಟು:

ಬೆಟ್ಟದ ತುತ್ತ ತುದಿಯಲ್ಲಿನ ಹನುಮನ ದರ್ಶನ ಪಡೆಯಲು ಭಕ್ತರು 575 ಮೆಟ್ಟಿಲುಗಳನ್ನು ಏರಬೇಕು. ಆರಂಭದಲ್ಲಿ ವಿಶಾಲವಾಗಿರುವ ಮೆಟ್ಟಿಲುಗಳು ಮೇಲಕ್ಕೆ ಹೋದಂತೆಲ್ಲ ಇಕ್ಕಟ್ಟಾಗುತ್ತ ಹೋಗುತ್ತವೆ. ಅಂತ್ಯದಲ್ಲಿ ಮೆಟ್ಟಿಲು ತುಂಬ ಇಕ್ಕಟ್ಟಿನ ಜತೆಗೆ ಎತ್ತರದಲ್ಲಿಯೂ ಮೆಟ್ಟಿಲು ಇವೆ. ವೃದ್ದರು, ಮಹಿಳೆಯರು, ತೂಕವುಳ್ಳವರು ಬೆಟ್ಟ ಏರುವಾಗ ಆಯಾಸಕ್ಕೆ ಒಳಗಾಗಿ, ಅಸ್ವಸ್ಥರಾಗುತ್ತಿದ್ದಾರೆ. ಕೆಲವರು ತಾವೇ ತಂದ ನೀರು ಕುಡಿದು, ವಿಶ್ರಾಂತಿ ಪಡೆದರೆ ಇನ್ನೂ ಕೆಲವರು ಹೃದಯ ಸಂಬಂಧಿ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ.

ಬೆಟ್ಟ ಏರುವಾಗಲೇ ಕಳೆದ ಏಳೆಂಟು ವರ್ಷಗಳಲ್ಲಿ ಸಾಕಷ್ಟು ಜನ ಮೃತಪಟ್ಟಿದ್ದಾರೆ. ಹೃದಯ ಸಂಬಂಧಿ ನೋವು ಕಾಣಿಸಿಕೊಂಡಾಗ ದೇವಸ್ಥಾನದ ಸಿಬ್ಬಂದಿಯೇ ಅವರನ್ನು ಕೆಳಭಾಗಕ್ಕೆ ಹೊತ್ತು ತರುತ್ತಿದ್ದಾದರೂ, ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಪ್ರಾಥಮಿಕ ಚಿಕಿತ್ಸೆಗೂ ಮೂರ್ನಾಲ್ಕು ಕಿ.ಮೀ. ದೂರದ ಆನೆಗೊಂದಿಗೆ ಹೋಗಬೇಕಾಗಿದೆ.

ಅಂಜನಾದ್ರಿಯಿಂದ ಮೂರ್ನಾಲ್ಕು ಕಿ.ಮೀ. ದೂರದಲ್ಲಿರುವ ಆನೆಗೊಂದಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ
ಅಂಜನಾದ್ರಿ ಬೆಟ್ಟ ಏರುವಾಗ ಜನರಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಕ್ಷೇತ್ರದ ಶಾಸಕ ಜನಾರ್ದನ ರೆಡ್ಡಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಂಡಿಲ್ಲ. ಈಗಲಾದರೂ ತುರ್ತು ಚಿಕಿತ್ಸಾ ಘಟಕ ಆರಂಭಿಸಲಿ.
ಶರೀಫ್ ಪಟ್ವಾರಿ ಸಾಣಾಪುರ ಗ್ರಾಮದ ನಿವಾಸಿ
ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ನೆಪಕ್ಕೆ ಮಾತ್ರ ಇದೆ. ಇಲ್ಲಿ ಯಾವ ಚಿಕಿತ್ಸೆ ಸಿಗುವುದಿಲ್ಲ. ತುರ್ತು ಚಿಕಿತ್ಸೆಗೆ ಯಾವ ಸೌಲಭ್ಯಗಳಿಲ್ಲ. ನುರಿತ ಸಿಬ್ಬಂದಿ ಕೂಡ ಇಲ್ಲ.
ರಾಜ ಅಚ್ಚೊಳಿ ಆನೆಗೊಂದಿ ಗ್ರಾಮದ ನಿವಾಸಿ
ಅಂಜನಾದ್ರಿಯಲ್ಲಿ ತುರ್ತು ಚಿಕಿತ್ಸೆ ಸೌಲಭ್ಯವಿಲ್ಲದೆ ಹೆಚ್ಚಿನ ಸಂಖ್ಯೆಯ ಭಕ್ತರು ಮೃತಪಡುತ್ತಿದ್ದು ಜಿಲ್ಲಾಡಳಿತ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ಅಂಜನಾದ್ರಿ ಬಳಿಯೇ ರಸ್ತೆ ತಡೆದು ಪ್ರತಿಭಟಿಸುವೆ.
ಹುಲಿಗೆಮ್ಮ ಹೊನ್ನಪ್ಪ ನಾಯಕ ಅಧ್ಯಕ್ಷೆ ಆನೆಗೊಂದಿ ಗ್ರಾ.ಪಂ
ಬೆಟ್ಟ ಏರಿಳಿಯುವಾಗ ಸಾವಿನ ಘಟನೆಗಳು ನಡೆಯುತ್ತಿವೆ. ಈ ಕುರಿತು ಜಿಲ್ಲಾಧಿಕಾರಿಗೆ ಮಾಹಿತಿ ನೀಡುವೆ. ಆದಷ್ಟು ಬೇಗನೆ ಬೆಟ್ಟದ ಕೆಳಭಾಗದಲ್ಲಿ ತುರ್ತು ಚಿಕಿತ್ಸಾ ಘಟಕ ನುರಿತ ವೈದ್ಯರನ್ನು ನೇಮಿಸಲು ಕ್ರಮ ವಹಿಸುವೆ.
ಎಂ.ಎಚ್. ಪ್ರಕಾಶರಾವ್ ಕಾರ್ಯನಿರ್ವಾಹಕ ಅಧಿಕಾರಿ ಅಂಜನಾದ್ರಿ ದೇವಸ್ಥಾನ

ಆರೋಗ್ಯ ಕೇಂದ್ರಕ್ಕಿಲ್ಲ ಆದ್ಯತೆ

ಹಿಂದಿನ ಬಿಜೆಪಿ ಹಾಗೂ ಈಗಿನ ಕಾಂಗ್ರೆಸ್‌ ಸರ್ಕಾರ ಅಂಜನಾದ್ರಿ ಅಭಿವೃದ್ಧಿಗೆ ₹100 ಕೋಟಿ ಮೀಸಲಿಡಲಾಗಿದೆ ಎಂದು ಬಜೆಟ್‌ನಲ್ಲಿ ಘೋಷಿಸಿದ್ದವು. 2023ರ ಚುನಾವಣಾ ಘೋಷಣೆಯ ಹೊಸ್ತಿಲಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ₹22 ಕೋಟಿಯ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದರು. ₹20ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ಶಾಪಿಂಗ್ ಸಂಕೀರ್ಣ ಶೌಚಾಲಯ ₹14 ಕೋಟಿ ವೆಚ್ಚದಲ್ಲಿ ಪ್ರದಕ್ಷಣಾ ಪಥ ನಿರ್ಮಿಸಲಾಗುತ್ತಿದೆ. ಆದರೆ ಜನರ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಆರಂಭಿಸುವ ಮಾತು ಕಾರ್ಯರೂಪಕ್ಕೆ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.