ಕನಕಗಿರಿ: ಗ್ರಾಮ ಪಂಚಾಯಿತಿ ಅಸ್ತಿತ್ವ ಇದ್ದಾಗಿನಿಂದಲೂ ಪಟ್ಟಣದ ವ್ಯಾಪ್ತಿಯಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಕೃಷಿ ಭೂಮಿಯನ್ನು ನಿವೇಶನಗಳನ್ನಾಗಿ ಪರಿವರ್ತಿಸಿರುವುದು ಪಟ್ಟಣದಲ್ಲಿ ಕಂಡು ಬಂದಿದೆ. ಆದರೆ ಅಲ್ಲಿ ಜನರಿಗೆ ಮೂಲ ಸೌಲಭ್ಯಗಳೇ ಇಲ್ಲದಂತಾಗಿದೆ.
ಪಟ್ಟಣದಲ್ಲಿ 100ಕ್ಕೂ ಹೆಚ್ಚು ಲೇಔಟ್‌ಗಳಿದ್ದು ಬಹುತೇಕ ವಿನ್ಯಾಸಗಳ ಮಾಲೀಕರು ಮೂಲ ಸೌಲಭ್ಯ ಕಲ್ಪಿಸದೇ ತಮ್ಮ ನಿವೇಶನಗಳನ್ನು ಮಾರಾಟ ಮಾಡುತ್ತಿದ್ದು, ಇದು ಸಾರ್ವಜನಿಕರಿಗೆ ಹೊರೆಯಾಗುತ್ತಿದೆ. ಕೃಷಿ ಭೂಮಿಯನ್ನು ಎನ್‌ಎ ಮಾಡುವಾಗ ಉಪ ವಿಭಾಗಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಾನಿಕ ಪರಿಶೀಲನೆ ಮಾಡಿ ಅನುಮೋದನೆ ನೀಡಬೇಕು. ಆದರೆ ಪರಿಣಾಮಕಾರಿಯಾಗಿ ಆಗುತ್ತಿಲ್ಲ ಎನ್ನುವುದು ಜನರ ದೂರು.
ನಿವೇಶನ ಮಾರಾಟ ಮಾಡುವಾಗ ವಿನ್ಯಾಸಗಳಲ್ಲಿ (ಲೇಔಟ್) ಕುಡಿಯುವ ನೀರು, ಚರಂಡಿ, ರಸ್ತೆ, ವಿದ್ಯುತ್ ಕಂಬ ಹಾಗೂ ವಿದ್ಯುತ್ ದೀಪ, ವಿದ್ಯುತ್ ಪರಿವರ್ತಕ, ಉದ್ಯಾನ ಹಾಗೂ ನಾಗರಿಕ ಸೌಲಭ್ಯಕ್ಕೆ ಜಾಗ ಕಾಯ್ದಿರಿಸುವುದು, ರಸ್ತೆ ಡಾಂಬರೀಕಣ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಬೇಕು ಎಂಬ ನಿಯಮವಿದೆ. ಆದರೆ ಪಟ್ಟಣದಲ್ಲಿರುವ ಬಹುತೇಕರು ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ಪಟ್ಟಣದ 1, 3, 4, 5, 14, 16 ಹಾಗೂ 17ನೇ ವಾರ್ಡ್‌ಗಳ ವ್ಯಾಪ್ತಿಯಲ್ಲಿರುವ ನಿವೇಶನಗಳು ಹಲವು ಸೌಲಭ್ಯಗಳಿಂದ ವಂಚಿತಗೊಂಡಿವೆ. ಈ ವಿನ್ಯಾಸಗಳಲ್ಲಿರುವ ರಸ್ತೆಗಳನ್ನು ಮರ್ಂ ಮೂಲಕ ನಿರ್ಮಾಣ ಮಾಡಿದ್ದು ಡಾಂಬರೀಕರಣದ ಭಾಗ್ಯ ಸಿಕ್ಕಿಲ್ಲ. ಚರಂಡಿ, ಕುಡಿಯುವ ನೀರು ದೂರದ ಮಾತು.
ಸಣ್ಣ ಮಳೆ ಬಂದರೆ ಸಾಕು, ತೆಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುತ್ತಿದ್ದು ಸಂಚಾರಕ್ಕೆ ಅಡಚಣೆಯಾಗುತ್ತಿದೆ.
5ನೇ ವಾರ್ಡ್ ವ್ಯಾಪ್ತಿಯಲ್ಲಿರುವ ಹತ್ತಾರು ನಿವೇಶನಗಳ ಪೈಕಿ ಕೆಲವು ಪ್ರದೇಶದಲ್ಲಿ ವಿದ್ಯುತ್ ಕಂಬ ಇದ್ದರೆ ದೀಪ ಇಲ್ಲ, ಕೆಲವು ಕಡೆ ಕಂಬ, ದೀಪ, ರಸ್ತೆ, ಚರಂಡಿ ಇತರೆ ಸೌಲಭ್ಯಗಳು ಕಾಣದಾಗಿದೆ ಎನ್ನುತ್ತಾರೆ ಸ್ಥಳೀಯರು.
ದುಬಾರಿ ಬೆಲೆಗೆ ಮಾರಾಟ: ತಾಲ್ಲೂಕು ಕೇಂದ್ರ ಹಾಗೂ ಐತಿಹಾಸಿಕ ಪಟ್ಟಣ ಎಂಬ ಖ್ಯಾತಿಗೆ ಹೆಸರಾಗಿರುವ ಪಟ್ಟಣದಲ್ಲಿ ಬಡವರು ಸೂರಿಗಾಗಿ ನಿವೇಶನ ಖರೀದಿಸುವುದು ಕಷ್ಟದಾಯಕವಾಗಿದೆ. ಸೌಲಭ್ಯ ಇಲ್ಲದ ನಿವೇಶನಗಳಿಗೂ ದೊಡ್ಡ ಮೊತ್ತ ನಿಗದಿ ಮಾಡಲಾಗುತ್ತಿದೆ ಎಂದು ಸ್ಥಳೀಯರಾದ ದುರಗಪ್ಪ ಹೇಳುತ್ತಾರೆ.
ಮೂಲ ಸೌಲಭ್ಯ ಕಲ್ಪಿಸದ ನಿವೇಶನಗಳನ್ನು ಸರ್ಕಾರ ಅನಧಿಕೃತ ನಿವೇಶನಗಳು ಎಂದು ಘೋಷಣೆ ಮಾಡಿದ್ದು ಈ ನಿವೇಶನಗಳಿಗೆ ಇಲ್ಲಿವರೆಗೆ ಫಾರ್ಮ್ -3 ಪ್ರಮಾಣ ಪತ್ರ ನೀಡುತ್ತಿರಲಿಲ್ಲ, ಮಾರಾಟಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಈಚೆಗೆ ಅನಧಿಕೃತ ನಿವೇಶನ ಎಂದು ಪ್ರಮಾಣಪತ್ರ ನೀಡಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಕಚೇರಿ ಮೂಲಗಳು ತಿಳಿಸಿವೆ.
ಸೌಲಭ್ಯ ವಂಚಿತ ಬಡಾವಣೆಗಳಿಗೆ ಸರ್ಕಾರದ ಅನುದಾನ ಪಡೆದು ಹಂತಹಂತವಾಗಿ ಅಭಿವೃದ್ಧಿ ಮಾಡಲಾಗುತ್ತದೆ. ಮುಂದೆ ಹೊಸ ಲೇಔಟ್‌ಗಳಲ್ಲಿ ಮೂಲ ಸೌಲಭ್ಯ ಖಚಿತ ಪಡಿಸಿಕೊಂಡೇ ಅನುಮತಿ ನೀಡಲಾಗುತ್ತದೆ.ಮೆಹಬೂಬಹುಸೇನ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಕನಕಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.