ADVERTISEMENT

ಬಯಲು ಬಹಿರ್ದೆಸೆ ಇನ್ನೂ ಅಬಾಧಿತ: ಕಿತ್ತು ಹೋದ ರಸ್ತೆ ಮಧ್ಯೆ ಸವಾರರ ಸರ್ಕಸ್

ಕಾಯಕಲ್ಪದ ನಿರೀಕ್ಷೆಯಲ್ಲಿ ‘ಪುರ'

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 12:46 IST
Last Updated 26 ಏಪ್ರಿಲ್ 2021, 12:46 IST
ತಾವರಗೇರಾ ಸಮೀಪದ ಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ
ತಾವರಗೇರಾ ಸಮೀಪದ ಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ   

ತಾವರಗೇರಾ: ತಾಲ್ಲೂಕು ಕೇಂದ್ರದಿಂದ 36 ಕಿ.ಮೀ ದೂರದಲ್ಲಿರುವ ಪುರ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ.

ಸುಮಾರು 1500 ಜನಸಂಖ್ಯೆ ಹೊಂದಿದ ಈ ಗ್ರಾಮ ಸಂಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ.

ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. 8-10 ವರ್ಷಗಳಿಂದ ದುರಸ್ತಿಯಾಗಿಲ್ಲ. ಗುಂಡಿಗಳು ನಿರ್ಮಾಣವಾಗಿರುವುದರಿಂದ ವಾಹನ ಸವಾರರು ಪರದಾಡಬೇಕಿದೆ.

ADVERTISEMENT

ಗ್ರಾಮಕ್ಕೆ ಸಾರಿಗೆ ಸೌಲಭ್ಯವೂ ಇಲ್ಲ. ಗ್ರಾಮಸ್ಥರ ಒತ್ತಡದ ಮೇರೆಗೆ ಇಲ್ಲಿ ಕೆಲ ದಿನಗಳ ಹಿಂದೆ ಸಾರಿಗೆ ಇಲಾಖೆ ಬಸ್ ಸೌಲಭ್ಯ ಕಲ್ಪಿಸಿತ್ತು. ಆದರೆ, ಕೆಲವೇ ದಿನಗಳಲ್ಲಿ ಅದನ್ನು ಸ್ಥಗಿತಗೊಳಿಸಲಾಯಿತು.

ಈ ಗ್ರಾಮದಿಂದ ಪ್ರತಿನಿತ್ಯ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ–ಕಾಲೇಜುಗಳಿಗೆ ಹೋಗುತ್ತಾರೆ. ಇಲ್ಲಿ ಸೋಮನಾಥ ದೇವಸ್ಥಾನ ಇರುವುದರಿಂದ ಪ್ರತಿದಿನ ನೂರಾರು ಭಕ್ತರು ಮತ್ತು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಅವರೆಲ್ಲ ಪ್ರಯಾಣಕ್ಕಾಗಿ ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾದ ಸ್ಥಿತಿ ಇದೆ.

500 ಕ್ಕೂ ಹೆಚ್ಚು ಮಹಿಳೆಯರನ್ನು ಹೊಂದಿರುವ ಈ ಗ್ರಾಮದಲ್ಲಿ ಕೇವಲ ಒಂದು ಶೌಚಾಲಯವಿದೆ. ಅದೂ ಕೂಡ ಉಪಯೋಗಕ್ಕೆ ಬಾರದ ಸ್ಥಿತಿ ತಲುಪಿದೆ.

ಇಲ್ಲಿಯ ಗ್ರಾಮ ಪಂಚಾಯಿತಿ ವತಿಯಿಂದ ಮಹಿಳಾ ಶೌಚಾಲಯ ನಿರ್ಮಿಸಲಾಗಿದೆ. ಶೌಚಾಲಯದ ಸುತ್ತಲೂ ಮುಳ್ಳು–ಕಂಟಿ ಬೆಳೆದು ನಿಂತಿದೆ. ದಾರಿಯೂ ಮುಚ್ಚಿ ಹೋಗಿದೆ. ಮಹಿಳೆಯರಿಗೆ ಬಯಲು ಬಹಿರ್ದೆಸೆ ಅನಿವಾರ್ಯವಾಗಿದೆ.

ಪುರ ದೇವಸ್ಥಾನ ಹಾಗೂ ದೇವಸ್ಥಾನದ ಆವರಣ ಸೇರಿದಂತೆ ದೇವಸ್ಥಾನದ ಸುತ್ತಮುತ್ತ ಸ್ವಚ್ಛತೆ ಮಾಯವಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಭಕ್ತರು ಒತ್ತಾಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.