ADVERTISEMENT

ಸಮಸ್ಯೆಗಳ ಗೂಡಲ್ಲಿ ‘ಗುಡಗೇರಿ’

ಜುನಸಾಬ ವಡ್ಡಟ್ಟಿ
Published 14 ಜೂನ್ 2022, 4:07 IST
Last Updated 14 ಜೂನ್ 2022, 4:07 IST
ಅಂಗನವಾಡಿ ಕೇಂದ್ರದ ಬಳಿ ಕೊಳಚೆ ನೀರು ನಿಂತಿರುವುದು
ಅಂಗನವಾಡಿ ಕೇಂದ್ರದ ಬಳಿ ಕೊಳಚೆ ನೀರು ನಿಂತಿರುವುದು   

ಅಳವಂಡಿ: ರಸ್ತೆ ಮೇಲೆ ಹರಿಯುವ ಕೊಳಚೆ ನೀರು, ಜಲ್ಲಿಕಲ್ಲುಗಳು, ತಗ್ಗು ಗುಂಡಿಗಳ ರಸ್ತೆ, ದುರಸ್ತಿ ಭಾಗ್ಯ ಕಾಣದ ಶುದ್ಧ ಕುಡಿಯುವ ನೀರಿನ ಘಟಕ, ಗ್ರಾಮದ ಎಲ್ಲೆಡೆ ಕಣ್ಣಿಗೆ ಬೀಳುವ ಕಸದ ರಾಶಿ.

ಇದು ಕೊಪ್ಪಳ ತಾಲ್ಲೂಕಿನ ಕವಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಗುಡಗೇರಿ ಗ್ರಾಮದ ದುಃಸ್ಥಿತಿ. ಗ್ರಾಮದಲ್ಲಿ ಸುಮಾರು 800 ಜನಸಂಖ್ಯೆ ಇದ್ದು, ಗ್ರಾಮ ನಿವಾಸಿಗಳೆಲ್ಲ ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಇಬ್ಬರು ಗ್ರಾ.ಪಂ ಸದಸ್ಯ ರನ್ನು ಹೊಂದಿದೆ. 7ನೇ ತರಗತಿ ಯವರೆಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೆ. ಆರೋಗ್ಯ ಚಿಕಿತ್ಸೆ, ವಾಣಿಜ್ಯ ಚಟುವಟಿಕೆಗಳಿಗೆ ಕವಲೂರು ಮತ್ತು ಮುಂಡರಗಿ ಮೇಲೆ ಅವಲಂಬಿತರಾಗಿದ್ದಾರೆ. ಕಂದಾಯ ಇಲಾಖೆ ಕೆಲಸಗಳಿಗೆ 10 ಕಿ.ಮೀ. ದೂರದ ಅಳವಂಡಿಗೆ ತೆರಳ ಬೇಕು. ಸರಿಯಾದ ರಸ್ತೆ, ಬಸ್ ವ್ಯವಸ್ಥೆ ಇಲ್ಲದ ಕಾರಣ ಪರದಾಟ ತಪ್ಪಿದ್ದಲ್ಲ.

ADVERTISEMENT

ಶುದ್ದ ಕುಡಿಯುವ ನೀರಿನ ಘಟಕಗಳ ಇದ್ದರೂ ಅವು ಬಳಕೆ ಆಗುತ್ತಿಲ್ಲ. ಆರಂಭ ವಾದ ಒಂದೆರಡು ತಿಂಗಳಲ್ಲಿ ಸ್ಥಗಿತಗೊಂಡಿದ್ದು, ಇದುವರೆಗೂ ದುರಸ್ತಿ ಕಂಡಿಲ್ಲ.

ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಇದ್ದರೂ ಸಮರ್ಪಕವಾಗಿಲ್ಲ ಪೂರೈಕೆ ಆಗುತ್ತಿಲ್ಲ. ಗ್ರಾಮಸ್ಥರು ಕೆರೆಯ ನೀರನ್ನೇ ಬಳಸುತ್ತಾರೆ. ಮಳೆ ಪ್ರಮಾಣ ಕಡಿಮೆ ಆದರೆ ಕೆರೆ ಬತ್ತಿ, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗುತ್ತದೆ.

ಕವಲೂರು, ಬನ್ನಿಕೊಪ್ಪ ಗ್ರಾಮದ ರಸ್ತೆಗಳು ತಗ್ಗು ದಿನ್ನೆ ಮತ್ತುಮುಳ್ಳುಕಂಟಿಗಳಿಂದ ಕೂಡಿವೆ. ರಸ್ತೆ ಹದಗೆಟ್ಟು ಜಲ್ಲಿಕಲ್ಲುಗಳು ಹೊರಬಂದಿವೆ. ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಬನ್ನಿಕೊಪ್ಪ ಮಾರ್ಗದ ಮಿನಿ ಬಸ್ ನಿಲ್ದಾಣ ಶಿಥಿಲಗೊಂಡಿದೆ. ಮೇಲ್ಚಾವಣಿಯ ಸಿಮೆಂಟ್ ಉದುರಿ ಬೀಳುತ್ತಿದ್ದು. ಪ್ರಯಾಣಿಕರು ರಸ್ತೆ ಬದಿ ಯಲ್ಲಿ ನಿಂತು ಬಸ್‍ಗಾಗಿ ಕಾಯ ಬೇಕಿದೆ ಎನ್ನುತ್ತಾರೆ ನಿವಾಸಿ ಶಂಕರ ತೋಟದ.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 121 ಮಕ್ಕಳು, 4 ಜನ ಶಿಕ್ಷಕರು ಇದ್ದಾರೆ. ಶಾಲಾ ಕೊಠಡಿ, ಶೌಚಾಲಯ, ಅಡುಗೆ ಕೊಠಡಿ ಶಿಥಿಲಗೊಂಡಿವೆ. ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಹೆಚ್ಚಿನ ಶಿಕ್ಷಣಕ್ಕಾಗಿ ಮಕ್ಕಳನ್ನು ಪಟ್ಟಣಕ್ಕೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಅಂಗನವಾಡಿ ಕೇಂದ್ರದ ಸುತ್ತ ಚರಂಡಿ ಹಾಗೂ ಕೊಳಚೆ ನೀರು ಆವೃತವಾಗಿದ್ದು ಸೊಳ್ಳೆಗಳ ಆವಾಸ ಸ್ಥಾನವಾಗಿದೆ ಎಂದರು.

ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿ ಮಾಡಿ ನೀರು ಪೂರೈಸಲಾಗುವುದು, ಅಂಗನವಾಡಿ ಸುತ್ತ ಸ್ವಚ್ಛತೆ ಕೈಗೊಳ್ಳುತ್ತೇವೆ
ಸಣ್ಣ ಜಂಬಣ್ಣ, ಪ್ರಭಾರಿ ಪಿಡಿಒ, ಕವಲೂರು

ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಆಗಿಲ್ಲ. ಕುಡಿಯುವ ನೀರಿಗಾಗಿ ಪರದಾಟ ಇದೆ. ಉತ್ತಮ ಮಳೆಯಾಗದ ಕಾರಣ ಕೆರೆಯಲ್ಲಿ ನೀರಿಲ್ಲ
ಮೌಲಾಹುಸೇನ್ ವಾಲಿಕಾರ, ಗ್ರಾಮಸ್ಥ

ಗ್ರಾಮವು ಜಿಲ್ಲೆಯ ಕಡೆ ಹಳ್ಳಿ ಆಗಿರುವದರಿಂದ ಸಮಸ್ಯೆಗಳು ಸಾಕಷ್ಟಿವೆ. ಜನರು ಆಸ್ಪತ್ರೆಗೆ ತೆರಳುವುದಕ್ಕೂ ಹರಸಾಹಸ ಪಡಬೇಕಿದೆ
ಶಂಕರ ತೋಟದ, ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.