ಕನಕಗಿರಿ: ‘ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಸಮೀಪದ ರಾಂಪುರ ಗ್ರಾಮದ ಕೆರೆಯನ್ನು ಮೂವರು ರೈತರು ಒತ್ತುವರಿ ಮಾಡಿಕೊಂಡಿದ್ದಾರೆ’ ಎಂದು ಇಲಾಖೆಯ ಎಇಇ ಸೆಲ್ವರಾಜ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹನುಮಂತಪ್ಪ ಹುಳ್ಳಿ, ಯಮನಪ್ಪ ಹುಳ್ಳಿ ಹಾಗೂ ಯಮನಪ್ಪ ಕುರಿ ಎಂಬುವವರು ರಾಂಪುರ ಕೆರೆಗೆ ಹೊಂದಿಕೊಂಡಂತೆ ಭೂಮಿ ಇದ್ದು, ಅವರು ಕೆರೆಯ ಮಣ್ಣನ್ನು ಅಕ್ರಮವಾಗಿ ತೆಗೆದುಕೊಂಡಿದ್ದಾರೆ. ಈ ರೀತಿ ಕಾನೂನಿಗೆ ವಿರುದ್ಧವಾಗಿ ಮಾಡುವುದು ಸರಿಯಲ್ಲ ಎಂದು ತಾವು ತಿಳಿಸಿದರೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾರೆ ಎಂದು ಆಗಸ್ಟ್ 14ರಂದು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕೆರೆ ಮಣ್ಣು ಅಕ್ರಮವಾಗಿ ಸಾಗಿಸಿ ಭೂಮಿ ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಲಾಯದುಣಸಿ ಕೆರೆಗೆ ಭೇಟಿ: ಸಮೀಪದ ಹುಲಿಹೈದರ ಹಾಗೂ ಲಾಯದುಣಸಿ ಗ್ರಾಮಗಳ ಕೆರೆ ಒತ್ತುವರಿ ಮಾಡಿದ ಕುರಿತು ಈಚೆಗೆ ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವಿಷಯಕ್ಕೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯ ಎಇಇ ಸೆಲ್ವರಾಜ ಅವರು ಬುಧವಾರ ಗ್ರಾಮದ ಕೆರೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಸೆಲ್ವರಾಜ ಮಾತನಾಡಿ, ‘ಕೆರೆಗಳ ಸಮೀಕ್ಷೆ ಕೈಗೊಳ್ಳಲಾಗಿದ್ದು ಭೂ ಸಮೀಕ್ಷೆ ತಾಲ್ಲೂಕು ಅಧಿಕಾರಿಗಳು ನೀಡಿದ ವರದಿ ಅನ್ವಯ ತಹಶೀಲ್ದಾರ್ ಅವರ ಮೂಲಕ ಕೆರೆಯ ಪಹಣಿ ಮಾಡಿಸಿ ಕೆರೆಗಳನ್ನು ಸಂರಕ್ಷಣೆ ಮಾಡಲಾಗುವುದು ಎಂದರು.
ತಾಲ್ಲೂಕು ಭೂ ಸಮೀಕ್ಷೆ ಅಧಿಕಾರಿ ರಮೇಶ, ಪಿಡಿಒ ಅಮರೇಶ ರಾಠೋಡ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.