ADVERTISEMENT

ಕನಕಗಿರಿ | ರಸ್ತೆಯಲ್ಲಿ ಹರಿವ ಕೆರೆ ನೀರು: ಪಯಣ‌ ದುಸ್ತರ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 5:36 IST
Last Updated 6 ಡಿಸೆಂಬರ್ 2025, 5:36 IST
ಕನಕಗಿರಿ ತಾಲ್ಲೂಕಿನ ಬಸರಿಹಾಳ ಗ್ರಾಮದಿಂದ ಗೌರಿಪುರ ಗ್ರಾಮದ ರಸ್ತೆಯಲ್ಲಿ‌ ನೀರು‌ ಹರಿಯುತ್ತಿರುವುದರಿಂದ ಪ್ರಯಾಣಿಕರು ಹರಸಾಹಸ ಪಡುತ್ತಿರುವುದು
ಕನಕಗಿರಿ ತಾಲ್ಲೂಕಿನ ಬಸರಿಹಾಳ ಗ್ರಾಮದಿಂದ ಗೌರಿಪುರ ಗ್ರಾಮದ ರಸ್ತೆಯಲ್ಲಿ‌ ನೀರು‌ ಹರಿಯುತ್ತಿರುವುದರಿಂದ ಪ್ರಯಾಣಿಕರು ಹರಸಾಹಸ ಪಡುತ್ತಿರುವುದು   

ಕನಕಗಿರಿ: ತಾಲ್ಲೂಕಿನ ಬಸರಿಹಾಳ ಗ್ರಾಮದ ಕೆರೆ ತುಂಬಿ ಹರಿಯುತ್ತಿದ್ದು ರಸ್ತೆ ಸಂಚಾರಕ್ಕೆ ಪ್ರಯಾಣಿಕರು ಹರಸಾಹಸ ಪಡುತ್ತಿದ್ದಾರೆ.

ಕೆರೆಯ ನೀರು ಗೌರಿಪುರ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಹರಿಯುತ್ತಿದ್ದು ಪಾದಚಾರಿಗಳು, ವಾಹನ ಸವಾರರು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದಾರೆ. ರಸ್ತೆಯಲ್ಲಿ ಹಾಕಿದ ಡಾಂಬರ್‌ ಕಿತ್ತು ಹೋಗಿದ್ದು ಬೃಹತ್ ಪ್ರಮಾಣದ ತೆಗ್ಗುಗುಂಡಿಗಳು ನಿರ್ಮಾಣವಾಗಿವೆ.

ಟಾಟಾ ಏಸ್ ವಾಹನದಲ್ಲಿ ಅಡುಗೆ ಅನಿಲವನ್ನು ಗೌರಿಪುರಕ್ಕೆ ತೆಗೆದುಕೊಂಡು‌ ಹೋಗುತ್ತಿದ್ದಾಗ ವಾಹನ ಒಂದೆಡೆ ವಾಲಿದ್ದು, ಅದೃಷ್ಟಕ್ಕೆ ಅನಾಹುತ ತಪ್ಪಿದೆ. ರಸ್ತೆ ಮೇಲೆ ನೀರು ಹರಿಯುತ್ತಿರುವುದು ಹಾಗೂ ರಸ್ತೆ ಹದಗೆಟ್ಟಿರುವುದರಿಂದ ಯಲಬುರ್ಗಾ, ಕನಕಗಿರಿಗೆ ಹೋಗುವ ಬಸ್‌ಗಳ ಓಡಾಟ ಸ್ಥಗಿತಗೊಂಡಿದೆ.

ADVERTISEMENT

‘ಬಸರಿಹಾಳದಿಂದ ಗೌರಿಪುರದ ರಸ್ತೆ ಮೂಲಕ ಹೋಗುವ ಬದಲಾಗಿ ಬೈಲಕ್ಕುಂಪುರ ಗ್ರಾಮದ ಮೂಲಕ ಕನಕಗಿರಿ,‌ ಯಲಬುರ್ಗಾಕ್ಕೆ ಹೋಗಲಾಗುತ್ತಿದೆ. ಇದರಿಂದ ಬಸರಿಹಾಳ ಗ್ರಾಮದ ಜನರಿಗೆ ತೊಂದರೆಯಾಗುತ್ತಿದೆ’ ಎಂದು ಉಪನ್ಯಾಸಕ ಬಾಲಪ್ಪ ತಿಳಿಸಿದರು.

ಕೆರೆಯ ನೀರು ಕೆರೆ ಸುತ್ತಮುತ್ತಲ್ಲಿನ ಹೊಲಗಳಲ್ಲಿಯೂ ಹರಿದು ಬೆಳೆಗಳಿಗೂ ಹಾನಿ ಮಾಡಿದೆ. ರೈತರು ಬೆಳೆ ಕಟಾವ್ ಮಾಡುವ ಸಮಯದಲ್ಲಿ ನೀರು ಹೊಲದಲ್ಲಿ ನಿಂತಿರುವುದರಿಂದ ಸಮಸ್ಯೆಯಾಗಿದೆ ಎಂದು‌ ರೈತ ಕನಕಪ್ಪ ಕುಟಗಮರಿ ತಿಳಿಸಿದರು.

ರಸ್ತೆಯಲ್ಲಿ ಬ್ರಿಡ್ಜ್ ಕಂ ಬ್ಯಾರೆಜ್ ನಿರ್ಮಾಣ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.