ADVERTISEMENT

ನರೇಗಾ ಯೋಜನೆಯಡಿ ಕೆರೆಗಳಿಗೆ ಮರುಜೀವ

ಕೆ.ಶರಣಬಸವ ನವಲಹಳ್ಳಿ
Published 8 ಏಪ್ರಿಲ್ 2022, 4:50 IST
Last Updated 8 ಏಪ್ರಿಲ್ 2022, 4:50 IST
ತಾವರಗೇರಾ ಸಮೀಪದ ಮುದೇನೂರು ಗ್ರಾಮದ ಮುಖ್ಯರಸ್ತೆ ಪಕ್ಕದ ಕೆರೆಯಲ್ಲಿ ಖಾತ್ರಿ ಯೋಜನೆ ಅಡಿಯಲ್ಲಿ ನಡೆದ ಹೂಳೆತ್ತುವ ಕಾಮಗಾರಿಯಿಂದ ಕೆರೆಯಲ್ಲಿ ನೀರು ಸಂಗ್ರಹವಾಗಿದೆ
ತಾವರಗೇರಾ ಸಮೀಪದ ಮುದೇನೂರು ಗ್ರಾಮದ ಮುಖ್ಯರಸ್ತೆ ಪಕ್ಕದ ಕೆರೆಯಲ್ಲಿ ಖಾತ್ರಿ ಯೋಜನೆ ಅಡಿಯಲ್ಲಿ ನಡೆದ ಹೂಳೆತ್ತುವ ಕಾಮಗಾರಿಯಿಂದ ಕೆರೆಯಲ್ಲಿ ನೀರು ಸಂಗ್ರಹವಾಗಿದೆ   

ತಾವರಗೇರಾ: ಸಮೀಪದ ಮುದೇನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಕೆರೆಗಳಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಡೆದ ಹೂಳೆತ್ತುವ ಕಾಮಗಾರಿಗಳಿಂದ ಕಳೆದ ವರ್ಷ ಸುರಿದ ಮಳೆಯಿಂದ ಕೆರೆಗಳಲ್ಲಿ ಹೆಚ್ಚಿನ ನೀರು ಸಂಗ್ರವಾಗಿದೆ.

ಇದರಿಂದ ಅಂತರ್ಜಲ ಹೆಚ್ಚಳಗೊಂಡಿದೆ. ಜನ – ಜಾನುವಾರುಗಳಿಗೆ ಅನುಕೂಲವಾಗಿದೆ. ಬರದ ನಾಡಿನಲ್ಲಿ ಹೂಳು ತುಂಬಿದ್ದ ಕೆರೆಗಳಿಗೆ ಮರುಜೀವ ಬಂದಂತಾಗಿದೆ.

ಈ ಭಾಗದಲ್ಲಿ ಒಣ ಭೂಮಿಯಲ್ಲಿ ಮಳೆಯಾಶ್ರಿತ ಕೃಷಿ ನಡೆಸುವುದು ಸಾಮಾನ್ಯ. ಈ ಕಾಮಗಾರಿಗಳ ಮೂಲಕ ಕಾರ್ಮಿಕರಿಗೆ ಕೂಲಿ ದೊರೆತು ಕುಟುಂಬದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿದೆ. ಅಂತರ್ಜಲ ಹೆಚ್ಚಾಗಿ ನೀರಿನ ಬವಣೆ ದೂರವಾಗಿದೆ. ಜುಮಲಾಪುರ, ಮುದೇನೂರು, ಅಮರಾಪುರ ಕೆರೆಗಳಲ್ಲಿ ನೀರು ತುಂಬಿದೆ. ಬರದ ನಾಡಿನಲ್ಲಿ ಹಸಿರೀಕರಣ ಕಂಗೊಳಿಸಿ ಜೀವ ಸಂಕುಲಕ್ಕೆ ಆಸರೆಯಾಗಿ ಕಣ್ಮನ ಸೆಳೆಯುತ್ತಿವೆ.

ಖಾತರಿ ಯೋಜನೆ ಸಹಕಾರ:ಕಳೆದ 4 ರಿಂದ 5 ವರ್ಷಗಳ ಹಿಂದೆ ಕೆರೆಗಳಲ್ಲಿನ ನೀರಿನ ಪ್ರಮಾಣದ ಸ್ಥಿತಿ ಕುಸಿದಿತ್ತು. ಸಾಕಷ್ಟು ವರ್ಷಗಳಿಂದ ಕೆರೆಯಲ್ಲಿ ಹೂಳು ತುಂಬಿಕೊಂಡು ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗಿತ್ತು. ಕೋವಿಡ್‌ ಮತ್ತು ಲಾಕ್‍ಡೌನ್‌ ದಿನಗಳಲ್ಲಿ ಕೇಂದ್ರ ಸರಕಾರ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ಸೃಷ್ಠಿಸಲು ಉದ್ಯೋಗ ಖಾತ್ರಿ ಯೊಜನೆಗೆ ಒತ್ತು ನೀಡಿದ ಪರಿಣಾಮ , ಗ್ರಾಮೀಣ ಭಾಗದಲ್ಲಿ ಜನರಿಗೆ ಹೆಚ್ಚಿನ ಕೆಲಸ ಸಿಕ್ಕಿದೆ.

ADVERTISEMENT

ಸಮೀಪದ 3 ಗ್ರಾಮ ಪಂಚಾಯಿತಿಗಳಾದ ಜುಮಲಾಪುರ, ಮುದೇನೂರು, ಶಿರಗುಂಪಿ ಪಂಚಾಯಿತಿಗಳ 40ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಜನರಿಗೆ ಸಂಕಷ್ಟ ಕಾಲದಲ್ಲಿ ಈ ಕೆರೆಗಳು ಉದ್ಯೋಗ ನೀಡಿವೆ. ಜನರು ಹೂಳು ಎತ್ತುವ ಕೆಲಸ ನಡೆಸಿದ್ದರಿಂದ ಇಂದು ಕೆರೆಗಳಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಮಟ್ಟ ಮತ್ತು ಅಂತರ್ಜಲ ಹೆಚ್ಚಾಗಿದೆ. ಭರ್ತಿಯಾಗಿರುವ ಕೆರೆ ಕಟ್ಟೆಗಳಿಂದ ಬಾವಿ,ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.

ಜೀವಸಂಕುಲಕ್ಕೆ ಆಸರೆ:’ಪ್ರತಿ ವರ್ಷ ಬೇಸಿಗೆಯಲ್ಲಿ ನೀರು ಇಲ್ಲದೆ ಬಣಗುಡುತ್ತಿದ್ದ ಕೆರೆಗಳಿಂದಾಗಿ ಜಾನುವಾರುಗಳು, ಪ್ರಾಣಿ, ಪಕ್ಷಿಗಳು ನೀರಿಗಾಗಿ ಪರಿತಪಿಸಬೇಕಾಗಿತ್ತು. ಈಗ ಕೆರೆಗಳು ಪುನಶ್ಚೇತನಗೊಂಡು ನೀರಿನ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ರೈತಾಪಿ ವರ್ಗಕ್ಕೆ ಶಕ್ತಿ ಬಂದಿದೆ‘ ಎನ್ನುತ್ತಾರೆ ಸ್ಥಳಿಯ ರೈತ ವಿರೇಶ ಬಳಿಗಾರ. ’ಕೋವಿಡ್‌ ಕಾಲದಲ್ಲಿ ಗ್ರಾ.ಪಂ.ಗಳು ಜನರಿಗೆ ಉದ್ಯೋಗ ನೀಡಿದ್ದರಿಂದ ಗ್ರಾಮೀಣ ಕುಟುಂಬಗಳು ಬದುಕಲು ಆಸರೆಯಾಗಿತ್ತು’ ಎನ್ನುತ್ತಾರೆ ಕೂಲಿ ಕಾರ್ಮಿಕರು. ಮೂರು ಗ್ರಾ.ಪಂ.ಗಳು ಸಾರ್ವಜನಿಕ ಕೆಲಸಗಳಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮಾನವ ದಿನಗಳನ್ನು ಸೃಷ್ಟಿಸಿವೆ.

ನರೇಗಾ ಅನುದಾನ ಬಳಕೆ

ಗ್ರಾಂ.ಪಂ;ವರ್ಷ; ಮಾನವ ದಿನ;ವೆಚ್ಚ (₹ ಗಳಲ್ಲಿ)

ಶಿರಗುಂಪಿ;2020-21;1,38,307;3 ಕೋಟಿ

–;2021-22;84,835;1.71 ಕೋಟಿ

ಜುಮಲಾಪುರ;2019-20;70,218;19.30 ಕೋಟಿ

–;2020-21;79,676;2.19 ಕೋಟಿ

ಮುದೇನೂರು;2020-21;81,447;4.83 ಲಕ್ಷ

–;2021-22;57,653;72.33ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.