ADVERTISEMENT

ಮರಳಿನ ದಿಬ್ಬ ಕುಸಿದು ಮಕ್ಕಳ ಸಾವಿನ ಪ್ರಕರಣ: ಮೂವರ ಬಂಧನ

ಕಂದಾಯ, ಗಣಿ, ಪೊಲೀಸ್‌ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ: ಡಿ.ಸಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 18:54 IST
Last Updated 29 ಆಗಸ್ಟ್ 2019, 18:54 IST

ಕೊಪ್ಪಳ: ಕನಕಗಿರಿ ತಾಲ್ಲೂಕಿನ ನವಲಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದಮರಳಿನ ದಿಬ್ಬ ಕುಸಿದು ಮೂವರು ಮಕ್ಕಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಮೂವರನ್ನು ಬಂಧಿಸಿದ್ದಾರೆ. ಕಾರ್ಮಿಕರನ್ನು ಕೆಲಸಕ್ಕೆ ಕರೆದುಕೊಂಡು ಬಂದಿದ್ದ ಮಹಾರಾಷ್ಟ್ರದ ಮೇಸ್ತ್ರಿ ಅವಿನಾಶ ರಾಠೋಡ ವಿರುದ್ಧವೂ ಪ್ರಕರಣ ದಾಖಲಾಗಿದೆ.

‘ಅಕ್ರಮ ಮರಳು ಗಣಿಗಾರಿಕೆ ನಡೆದರೂ ತಡೆಯದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿಂದಿನ ಹಿರಿಯ ಭೂವಿಜ್ಞಾನಿ, ಕನಕಗಿರಿಯ ತಹಶೀಲ್ದಾರ್, ನವಲಿ ಗ್ರಾಮದ ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿ, ಕನಕಗಿರಿಯಲ್ಲಿ ಹಿಂದೆ ಸೇವೆ ಸಲ್ಲಿಸಿರುವ ಸಿಪಿಐ ವೀರಾರೆಡ್ಡಿ ಅವರು ಕರ್ತವ್ಯ ಲೋಪವೆಸಗಿದ್ದಾರೆ.

ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿಪಿ.ಸುನೀಲಕುಮಾರ್ ತಿಳಿಸಿದ್ದಾರೆ.

ADVERTISEMENT

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆಯದೆ ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆಗೆ ಅವಕಾಶ ನೀಡಿದ ಜಮೀನಿನ ಮಾಲೀಕ ಗುರುಶಾಂತಯ್ಯ ಸಂಗನ ಬಸಯ್ಯ ಪೂಜಾರಿ (45), ಗಣಿಗಾರಿಕೆ ಮಾಡುತ್ತಿದ್ದ ಅಮರೇಶ ಹನಮಂತಪ್ಪ ಕರಡಿ (45), ಶಿವಪ್ಪ ಭೈರಾಪುರ (26) ಬಂಧಿತರು.

ತಾಯಮ್ಮ ನಾರಿನಾಳ (60) ಎಂಬ ಇನ್ನೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೂವರು ಮಕ್ಕಳ ಶವಗಳನ್ನು ಬುಧವಾರ ರಾತ್ರಿಯೇ ಪಾಲಕರಿಗೆ ಹಸ್ತಾಂತರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.