ADVERTISEMENT

ಕೊಪ್ಪಳ| ಸ್ವಾತಂತ್ರ್ಯಕ್ಕೆ ವಕೀಲರ ಕೊಡುಗೆ ಅನನ್ಯ: ಗಂಗಾಧರ ಜಿ.ಎಂ. ಅಭಿಮತ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 8:03 IST
Last Updated 7 ಡಿಸೆಂಬರ್ 2025, 8:03 IST
ಕೊಪ್ಪಳದಲ್ಲಿ ಶನಿವಾರ ವಕೀಲರ ದಿನದ ಕಾರ್ಯಕ್ರಮದಲ್ಲಿ ಅತಿಥಿಗಳು ಕಾನೂನು ಕೃತಿ ಬಿಡುಗಡೆ ಮಾಡಿದರು 
ಕೊಪ್ಪಳದಲ್ಲಿ ಶನಿವಾರ ವಕೀಲರ ದಿನದ ಕಾರ್ಯಕ್ರಮದಲ್ಲಿ ಅತಿಥಿಗಳು ಕಾನೂನು ಕೃತಿ ಬಿಡುಗಡೆ ಮಾಡಿದರು    

ಕೊಪ್ಪಳ: ‘ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ವಕೀಲರು ಬಹುದೊಡ್ಡ ಪಾತ್ರ ವಹಿಸಿದ್ದು, ಬ್ರಿಟಿಷರ ದಬ್ಬಾಳಿಕೆ ವಿರುದ್ಧದ ಹೋರಾಟದಲ್ಲಿ ದಾಖಲಾದ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿಯೂ ನಿರ್ಭಿತಿಯಿಂದ ಹೋರಾಟ ಮಾಡಿದ್ದಾರೆ. ಅವರ ಹೋರಾಟದ ಛಲ ಅನನ್ಯ’ ಎಂದು ಹೈಕೋರ್ಟ್‌ ಹೆಚ್ಚುವರಿ ಅಡ್ವೋಕೇಟ್ ಜನರಲ್‌ ಧಾರವಾಡದ ಗಂಗಾಧರ ಜಿ.ಎಂ. ಹೇಳಿದರು.

ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಶನಿವಾರ ಜಿಲ್ಲಾ ವಕೀಲರ ಸಂಘದ ವತಿಯಿಂದ ವಕೀಲರ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಹೋರಾಟದ ಸಮಯದಲ್ಲಿ ವಕೀಲರ ಮೇಲೆ ದಾಖಲಿಸಲಾದ ಪ್ರಕರಣಗಳ ಬಗ್ಗೆ ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಮೋತಿಲಾಲ್ ನೆಹರೂ ಹೋರಾಡಿದ್ದರು. ಸ್ವಾತಂತ್ರ್ಯ ಹೋರಾಟವನ್ನು ತಾರ್ಕಿಕ ಅಂತ್ಯದ ತನಕ ಕೊಂಡ್ಯೊಯ್ದಿದ್ದು ಕೂಡ ವಕೀಲರು’ ಎಂದು ಸ್ಮರಿಸಿಕೊಂಡರು.

‘ಭಾರತದ ಸಂವಿಧಾನ ಜಗತ್ತಿನ ಅತ್ಯಂತ ಅದ್ಭುತವಾದ, ಪರಿಪೂರ್ಣವಾಗಿದೆ. ನಮ್ಮ ಸಂವಿಧಾನದ ಅಂಶಗಳನ್ನು ಬೇರೆ ದೇಶಗಳು ಕೂಡ ಅಳವಡಿಸಿಕೊಂಡಿವೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ಹಲವಾರು ದೇಶಗಳ ಸಂವಿಧಾನಗಳನ್ನು ಓದಿದ್ದರು. ವಕೀಲರಿಗೆ ಅಂಬೇಡ್ಕರ್ ಮಾದರಿಯಾಗಿದ್ದು, ಸಂವಿಧಾನಕ್ಕೆ ಸಂಬಂಧಿಸಿದಂತೆ ದೇಶ ಬಹಳ ಸಂಕಷ್ಟ ಎದುರಿಸುತ್ತಿದೆ. ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗಳು ಸಮಾಜದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡದಿದ್ದರೆ ಅರಾಜಕತೆ ಉಂಟಾಗುತ್ತಿತ್ತು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ನ್ಯಾಯಾಧೀಶರಾದ ಡಿ‌‌.ಕೆ.ಕುಮಾರ ಕಾರ್ಯಕ್ರಮ ಉದ್ಘಾಟಿಸಿದರು. ಧಾರವಾಡ ಹೈಕೋರ್ಟ್‌ನ ಪದಾಂಕಿತ ಹಿರಿಯ ವಕೀಲ ಎಸ್.ಎಸ್.ಯಡ್ರಾಮಿ, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ನ್ಯಾಯಾಧೀಶರಾದ ಸರಸ್ವತಿ ದೇವಿ, ಮಹಾಂತೇಶ ದರಗದ, ಮಲಕಾರಿ ರಾಮಪ್ಪ ಒಡೆಯರ, ಭಾಗ್ಯಲಕ್ಷ್ಮಿ, ತ್ರಿವೇಣಿ ಈರಗಾರ, ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಆಸೀಫ್ ಅಲಿ, ಎಸ್‌.ಎಸ್‌. ಮಿಠ್ಠಲಕೋಡ, ಸರ್ಕಾರಿ ಅಭಿಯೋಜಕಿ ಅಪರ್ಣಾ ಬಂಡಿ, ಪ್ರಮುಖರಾದ  ಸಂಧ್ಯಾ ಮಾದಿನೂರು, ಸಂಘದ ಪದಾಧಿಕಾರಿಗಳಾದ ಬಿ.ವಿ. ಸಜ್ಜನ್‌, ಪಿ.ಎಲ್‌. ಹಾದಿಮನಿ, ಸಂತೋಷ ಕವಲೂರು, ರಾಜಾಸಾಬ್ ಬೆಳಗುರ್ಕಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 

ಸಂಜೆ ನಸಮಾರೋಪ

ಜಿಲ್ಲೆಗೆ ನೂತನ ನ್ಯಾಯಾಲಯಗಳ ಸಂಕೀರ್ಣ ಪ್ರಾರಂಭವಾಗಲು ಸಹಕಾರ ನೀಡಿದ ಜನಪ್ರತಿನಿಧಿಗಳು ಕಂದಾಯ ಲೋಕೋಪಯೋಗಿ ಮತ್ತು ಪೊಲೀಸ್‌ ಇಲಾಖೆ ಮುಖ್ಯಸ್ಥರಿಗೆ ಕಾರ್ಯಕ್ರಮದ ಸಮಾರೋಪದಲ್ಲಿ ಸನ್ಮಾನಿಸಲಾಯಿತು. ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಶಾಸಕ ದೊಡ್ಡನಗೌಡ ಪಾಟೀಲ ಶಾಸಕ ರಾಘವೇಂದ್ರ ಹಿಟ್ನಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.