ADVERTISEMENT

‘ಸವದಿ ಒಂದು ಸಾರಿ ಸೋತಿದ್ದಕ್ಕೆ ಡಿಸಿಎಂ, ಇನ್ನೊಂದು ಸಾರಿ ಸೋತರೆ ಸಿಎಂ ಆಗ್ತಾರೆ‘

ಮಾಜಿ ಸಚಿವ ಶಿವರಾಜ್‌ ತಂಗಡಗಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 9:52 IST
Last Updated 29 ಅಕ್ಟೋಬರ್ 2019, 9:52 IST
ಶಿವರಾಜ ತಂಗಡಗಿ ಹಾಗೂ ಲಕ್ಷ್ಮಣ ಸವದಿ
ಶಿವರಾಜ ತಂಗಡಗಿ ಹಾಗೂ ಲಕ್ಷ್ಮಣ ಸವದಿ   

ಕಾರಟಗಿ: 'ಉಪಮುಖ್ಯಮಂತ್ರಿ, ಸ್ಟಾರ್‌ ಪ್ರಚಾರಕ ಲಕ್ಷ್ಮಣ ಸವದಿ ಒಂದು ಸಾರಿ ಸೋತಿದ್ದಕ್ಕೆ ಉಪಮುಖ್ಯಮಂತ್ರಿ ಆಗಿದ್ದಾರೆ. ಇನ್ನೊಂದು ಸಾರಿ ಸೋತರೆ ಮುಖ್ಯಮಂತ್ರಿ ಆಗುತ್ತಾರೆ' ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಲೇವಡಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿ ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದಾಗ 'ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ತಂಗಡಗಿ ಸ್ಥಿಮಿತ ಕಳೆದುಕೊಂಡಿದ್ದಾರೆ' ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮೋದಿಯನ್ನು ಪ್ರಚಾರಕ್ಕಾಗಿ ಬೈದಿಲ್ಲ. ನನಗೆ ಸುಳ್ಳು ಪ್ರಚಾರದ ಅವಶ್ಯಕತೆ ಇಲ್ಲ. ಅವರನ್ನು ಬೈಯುವ ಆಸೆಯಿಲ್ಲ. ಮೊದಲು ನೆರೆಸಂತ್ರಸ್ತರಿಗೆ ಪರಿಹಾರ ತಂದು ಕೊಡಿ. ಕೇಂದ್ರದಿಂದ ಪರಿಹಾರ ಹಣ ತಂದು ಕೊಟ್ಟರೆ ಬ್ಯಾನರ್ ಹಾಕಿ ಗೌರವಿಸುತ್ತೇನೆ. ಮೋದಿ ಪ್ರಶ್ನಾತೀತ ವ್ಯಕ್ತಿಯೇನಲ್ಲ. ಸಂವಿಧಾನಕ್ಕೆ ಒಳಪಟ್ಟ ಒಬ್ಬ ಸಾಮಾನ್ಯ ಪ್ರಜೆ' ಎಂದು ಹೇಳಿದರು.

'ಮೊದಲು ಸಂಸದ ಕರಡಿ ಸಂಗಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಸವದಿ ಪರಿಹಾರ ತರುವ ಕೆಲಸ ಮಾಡಲಿ. ಜನ ಮನಸ್ಸು ಮಾಡಿದರೆ ಮಾತ್ರ ನಾನು ಲೀಡರ್ ಆಗುವೆ. ಮನಸ್ಸು ಮಾಡದಿದ್ದರೆ, ಮನೆಯಲ್ಲಿರುವೆ.ನಾನು ಸೋತ ಕಾರಣಕ್ಕೆ ಕೆಲಸ ವಿಲ್ಲದೆ ಏನೇನೋ ಮಾತನಾಡಿದ್ದಾರೆ ಎನ್ನುವ ಸವದಿ ಅವರೂ ಸೋತಿದ್ದಾರೆ. ಆತ್ಮವಲೋಕನ ಮಾಡಿ ಕೊಳ್ಳಲಿ' ಎಂದರು.

ADVERTISEMENT

‘ಕನಕಗಿರಿ ಶಾಸಕರ ಬಗ್ಗೆ ಏನಾದರೂ ಮಾತನಾಡಿದರೆ ಎಲ್ಲ ವೇಸ್ಟ್. ಹಬ್ಬದಶುಭ ಸಂದರ್ಭದಲ್ಲಿ ಸಕರಾತ್ಮಕವಾಗಿ, ಅಭಿವೃದ್ಧಿ ಕುರಿತು ಮಾತನಾಡುವುದು ಉತ್ತಮ. ಕ್ಷೇತ್ರದಲ್ಲಿ ಅರಾಜಕತೆ ಹೆಚ್ಚಾಗು ತ್ತಿದೆ. ಸದ್ಯದಲ್ಲಿಯೇ ಮಹತ್ವದ ಬದಲಾವಣೆಗಳು ಆಗುತ್ತವೆ' ಎಂದು ಹೇಳಿದರು.

‘ತಂಗಡಗಿ ಅವರಿಗೆ ಬೆಂಜ್‌ ಕಾರು ಎಲ್ಲಿಂದ ಬಂತು' ಎಂಬ ಶಾಸಕ ಬಸವರಾಜ ದಡೇಸ್ಗೂರ ಟೀಕೆಗೆ ಉತ್ತರಿಸಿದ ಅವರು,'ನನಗೆ ಗ್ರಾನೈಟ್ ಉದ್ಯಮವಿದೆ. ನನ್ನ ಸಹೋದರರು ವ್ಯವಹಾರ ನೋಡುತ್ತಾರೆ. ದುಬಾರಿ ಕಾರು ಕೊಳ್ಳುವುದು ನನಗೆ ಅಚ್ಚುಮೆಚ್ಚು. ಗೋಣಿ ಚೀಲದಲ್ಲಿ ದುಡ್ಡು ಇಟ್ಟುಕೊಂಡು, ಲುಂಗಿ ಹಾಕಿಕೊಂಡು ಹೋದರೆ ಶೋರೂಂನವರು ಒಂದು ರೀತಿ ನೋಡುತ್ತಾರೆ.ಬೆಂಜ್‌ ಕಾರು ನೋಡಿ ಯೋಗ್ಯತೆ ಅನುಸಾರ ಸಾಲ ಕೊಡುತ್ತಾರೆ' ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.