ADVERTISEMENT

ಜಲಾಶಯದ ಸಮೀಪದಲ್ಲಿಯೇ ಒಡೆದ ಎಡದಂಡೆ ಕಾಲುವೆ: ಆತಂಕ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 4:41 IST
Last Updated 10 ಮಾರ್ಚ್ 2022, 4:41 IST
ಜಲಾಶಯದ ಸಮೀಪದಲ್ಲಿಯೇ ಒಡೆದ ಎಡದಂಡೆ ಕಾಲುವೆ: ಆತಂಕ
ಜಲಾಶಯದ ಸಮೀಪದಲ್ಲಿಯೇ ಒಡೆದ ಎಡದಂಡೆ ಕಾಲುವೆ: ಆತಂಕ   

ಕೊಪ್ಪಳ: ದಶಕದಿಂದ ಕಾಲುವೆ ನವೀಕರಣ ಮಾಡಬೇಕು ಎಂಬ ರೈತರ, ನೀರಾವರಿ ತಜ್ಞರ ಮಾತನ್ನು ನಿರ್ಲಕ್ಷಿದ ಪರಿಣಾಮ ತಾಲ್ಲೂಕಿನ ಮುನಿರಾಬಾದ್ ನ ತುಂಗಭದ್ರಾ ಜಲಾಶಯದ ಎಡದಂಡೆ ಕಾಲುವೆ ಒಡೆದು ಅಪಾರ ನೀರು ಪೋಲಾಗುತ್ತಿದೆ.

ಮೂರು ಜಿಲ್ಲೆಗಳ ಜೀವದಾಯಿನಿ ಎಂದೇ ಹೆಸರಾದ ಎಡದಂಡೆ ಕಾಲುವೆ 1.50 ಲಕ್ಷ ಹೆಕ್ಟೇರ್ ಗೆ ನೀರು ಉಣಿಸುವ ಸಾಮರ್ಥ್ಯವಿದೆ. ಅಣೆಕಟ್ಟೆಯ 100 ಮೀಟರ್ ಅಂತರದಲ್ಲಿಯೇ ಕಾಲುವೆ ಒಡೆದು ಜಮೀನಿಗೆ ನುಗ್ಗಿದೆ.

ಕಾಲುವೆ ಮೇಲೆ ಇರುವ ಬೃಹತ್ ಮರದ ಬೇರುಗಳು ಕಾಲುವೆಯ ಸಿಮೆಂಟ್ ಬೆಡ್ ಅಡಿ ಹತ್ತಾರು ಅಡಿ ಬೆಳೆದು, ಮರ ಉರುಳಿ ಬಿದ್ದಾಗ ಕಾಲುವೆ ಸಂಪೂರ್ಣ ಒಡೆದಿದೆ.

ADVERTISEMENT

ಬುಧವಾರ ಸಂಜೆಯೇ ಹನಿ, ಹನಿ ನೀರು ಪೋಲಾಗುತ್ತಿರುವುದು ಕಂಡು ಬಂತು. ಗುರುವಾರ ನಸುಕಿನ 2 ಗಂಟೆಗೆ ಸಂಪೂರ್ಣ ಒಡೆದು ಹೋಗಿ ಜಮೀನುಗಳತ್ತ ನುಗ್ಗಿ ಮತ್ತೆ ನದಿ ಸೇರುತ್ತಿದೆ.

ಕಳೆದ ಮೂರು ವರ್ಷದಿಂದ ಕಾಲುವೆಯಲ್ಲಿ ನೀರು ಇಲ್ಲದೇ ಬೆಳೆಗೆ ನೀರು ಕೊಡಿ ಎಂಬ ಹೋರಾಟ ನಿರಂತರವಾಗಿ ನಡೆದಿತ್ತು. ಈ ವರ್ಷ ಉತ್ತಮ ಮಳೆಯಿಂದ ಜಲಾಶಯ ತುಂಬಿ 2021 ಜನವರಿಯಿಂದ 2022 ಮಾರ್ಚ್ 8 ರವರೆಗೆ ನಿರಂತರ ನೀರು ಹರಿದು ರೈತರು ಎರಡು ಬೆಳೆ ಬೆಳೆದಿದ್ದರು. ಯಾವುದೇ ಹೋರಾಟ ಈ ಸಂದರ್ಭದಲ್ಲಿ ನಡೆಯಲಿಲ್ಲ.‌ ಆದರೆ ಜಲಾಶಯ ತಾಂತ್ರಿಕ ಮಂಡಳಿಯ ನಿರ್ಲಕ್ಷ್ಯ ಈ ಅಪಘಡಕ್ಕೆ ಇಂದು ಕಾಲುವೆ ಸಾಕ್ಷಿಯಾಗಿದೆ.

ಪ್ರತಿವರ್ಷ ಎರಡು ತಿಂಗಳು ನೀರು ಬಂದ್ ಮಾಡಿ ಕಾಲುವೆ ಸ್ವಚ್ಛಗೊಳಿಸುವ ಕಾರ್ಯಕ್ಕೆ ಕೋಟ್ಯಂತರ ಹಣ ವಿನಿಯೋಗಿಸಲಾಗುತ್ತದೆ. ಆದರೆ ಅಲ್ಲಲ್ಲಿ ಅಕ್ರಮ ಪಂಪ್ ಸೆಟ್ ಗಳಿಂದ ಬೋಂಗಾ ಬಿದ್ದು ಕಾಲುವೆ ಒಡೆದು ಸುದ್ದಿಯಾಗುತ್ತಿತ್ತು. ಈ ಸಾರಿ ಜಲಾಶಯದ ಸಮೀಪದಲ್ಲಿಯೇ ಕಾಲುವೆ ಒಡೆದು ಆತಂಕ ಮೂಡಿಸಿದೆ.

200 ಟಿಎಂಸಿ ಅಡಿ ನೀರಿನ ಸಾಮರ್ಥ್ಯದ ಜಲಾಶಯದಲ್ಲಿ 34 ಟಿಎಂಸಿ ಅಡಿ ಹೂಳು ತುಂಬಿದೆ. ಉಳಿದ ನೀರಿನಲ್ಲಿ ಕೃಷಿ, ಕುಡಿಯುವ ನೀರು, ವಿದ್ಯುತ್, ಕಾರ್ಖಾನೆಗಳ ಬಳಕೆಗೆ ನೀಡಲಾಗುತ್ತಿದೆ. ಕಳೆದ ಮುಂಗಾರು ಮತ್ತು ಹಿಂಗಾರು ಉತ್ತಮ ಮಳೆ ಮತ್ತು ಮಲೆನಾಡು ಭಾಗದಲ್ಲಿ ಸತತ ಮಳೆಯಿಂದ ಜಲಾಶಯ ತುಂಬಿ ತುಳುಕಿತ್ತು.

ಕಾಲುವೆ ಒಡೆದ ಸುದ್ದಿ ತಿಳಿಯುತ್ತಲೇ ಗುರುವಾರ 3ಗಂಟೆಗೆ ನೀರಿನ ಹರಿವು ಬಂದ್ ಮಾಡಲಾಗಿದೆ. ಸ್ಥಳಕ್ಕೆ ಜಲಾಶಯದ ಮುಖ್ಯ ಎಂಜಿನಿಯರ್ ಚವ್ಹಾಣ, ಎಇಇ ಬಸಪ್ಪ ಜಾನಕರ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

ಎಡದಂಡೆ ಮುಖ್ಯ ಕಾಲುವೆಯ ಬಲಭಾಗ ಕಾಲುವೆ ಒಡೆದಿದ್ದು, ನೇರವಾಗಿ ನದಿ ಸೇರುತ್ತಿದೆ. ಮುನಿರಾಬಾದ್ ಸೇರಿದಂತೆ ಯಾವುದೇ ಜನವಸತಿ ಪ್ರದೇಶದತ್ತ ನೀರು ನುಗ್ಗಿಲ್ಲ. ಶೀಘ್ರವಾಗಿ ದುರಸ್ತಿ ಕಾರ್ಯ ನಡೆಸಲಾಗುತ್ತದೆ ಎಂದು ಬಸಪ್ಪ ಜಾನಕರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.