
ಕೊಪ್ಪಳ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನಗರದ ಸಾಹಿತ್ಯ ಭವನದಲ್ಲಿ ಜಿಲ್ಲೆಯ ಅರೆಕಾಲಿಕ ಕಾನೂನು ಸ್ವಯಂ ಸೇವಕರ ತಂಡಕ್ಕೆ ಹಮ್ಮಿಕೊಂಡಿರುವ ಕಾರ್ಯಾಗಾರದ ಎರಡನೇ ದಿನವಾದ ಗುರುವಾರ ವಿಷಯ ತಜ್ಞರು ಕಾನೂನು ಪಾಲನೆಯ ಕುರಿತು ಮಾಹಿತಿ ಒದಗಿಸಿದರು.
ಜನಸಾಮಾನ್ಯರು ಮತ್ತು ನ್ಯಾಯಾಲಯದ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕಾದ ಜವಾಬ್ದಾರಿ ಹೊತ್ತಿರುವ ಜಿಲ್ಲೆಯ ಅರೆಕಾಲಿಕ ಕಾನೂನು ಸ್ವಯಂಸೇವಕರಿಗೆ ಬೆಂಗಳೂರಿನಿಂದ ಬಂದಿದ್ದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ತಂಡದವರು ಆಸ್ತಿ ವರ್ಗಾವಣೆಯ ವಿಧಗಳು, ತಯಾರಿ ಮಾಡಿಕೊಳ್ಳಬೇಕಾದ ದಾಖಲೆಗಳು, ಸೇಲ್‌ದೀಡ್ ಮಹತ್ವ, ನೊಂದಿರುವ ಜನರಿಗೆ ಹೇಗೆ ನೆರವಾಗಬೇಕು ಎನ್ನುವ ವಿಷಯಗಳನ್ನು ಹೇಳಿಕೊಟ್ಟರು.
ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳಲ್ಲಿ ತಯಾರಿಸಬೇಕಾದ ದಾಖಲೆಗಳು, ಕೌಟುಂಬಿಕ ದೌರ್ಜನ್ಯಗಳಲ್ಲಿ ನೊಂದ ಮಹಿಳೆಗೆ ಒದಗಿಸಬೇಕಾದ ಸಾಂತ್ವನದ ರೀತಿ, ಮನವಿ, ವಕೀಲರ ಮೂಲಕ ಪ್ರತಿವಾದ ಸಲ್ಲಿಕೆ, ಆಸ್ತಿ ಕುರಿತ ದಾಖಲೆಗಳು, ಅಧಿಕಾರ ಪತ್ರ (ಪವರ್ ಆಫ್ ಅಟಾರ್ನಿ) ಹೊಂದಿರುವ ವ್ಯಕ್ತಿ ಚಲಾಯಿಸಬಹುದಾದ ಅಧಿಕಾರಿದ ಮಾಹಿತಿ ಒದಗಿಸಿದರು.
ಕಾನೂನಿನಲ್ಲಿ ಅಂಗವಿಕಲರಿಗೆ ಇರುವ ಸೌಲಭ್ಯಗಳ ಕುರಿತು ಕೊಪ್ಪಳದ ಸಮೂಹ ಸಾಮರ್ಥ್ಯ ಸಂಸ್ಥೆ ನಿರ್ದೇಶಕ ಹಂಪಣ್ಣ ಅವರು ಮಾತನಾಡಿ ‘ಅಂಗವಿಕಲರಿಗೆ ಸರ್ಕಾರದಿಂದ ಸೌಲಭ್ಯಗಳನ್ನು ಒದಗಿಸಲು ಅರೆಕಾಲಿಕ ಸ್ವಯಂ ಸೇವಕರ ಪಾತ್ರ ಬಹಳಷ್ಟಿದೆ. ಅವರಿಗೂ ಇರುವ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ಮಾನಸಿಕ ರೋಗಿಗಳ ನೆರವಿಗೆ ಇರುವ ಟೆಲಿಮಾನಸ ಸೌಲಭ್ಯ ಪಡೆದುಕೊಳ್ಳಬೇಕು’ ಎಂದರು.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಕೊಪ್ಪಳ ಯೋಜನಾಧಿಕಾರಿ ಪೂರ್ಣಿಮಾ ಏಳುಬಾವಿ, ಮಕ್ಕಳ ರಕ್ಷಣಾ ಘಟಕದ ಪ್ರತಿಭಾ, ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕ ಶರಣಪ್ಪ ಸಿಂಗನಾಳ ಅವರು ಕಾನೂನು ಸ್ವಯಂ ಸೇವಕರಿಗೆ ಜನರಿಗೆ ಸಹಾಯ ಮಾಡಲು ಇರುವ ಅವಕಾಶಗಳ ಬಗ್ಗೆ ತಿಳಿಸಿಕೊಟ್ಟರು.
ಅರೆಕಾಲಿಕ ಕಾನೂನು ಸ್ವಯಂ ಸೇವಕರು ತಮಗೆ ಲಭಿಸಿದ ಅವಕಾಶ ಬಳಸಿಕೊಂಡು ಜನಸಾಮಾನ್ಯರ ಮನೆಬಾಗಿಲಿಗೆ ನ್ಯಾಯಾಲಯವನ್ನು ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು.ಮಹಾಂತೇಶ ಎಸ್. ದರಗದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.