ADVERTISEMENT

ಮೋದಿಗೆ ತಾಕತ್ತಿದ್ದರೆ SCSP–TSP ನಿಧಿ ಕಾಯ್ದೆ ಜಾರಿಗೆ ತರಲಿ: ತಂಗಡಗಿ ಸವಾಲು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2025, 14:38 IST
Last Updated 1 ಮಾರ್ಚ್ 2025, 14:38 IST
<div class="paragraphs"><p>ಶಿವರಾಜ ತಂಗಡಗಿ</p></div>

ಶಿವರಾಜ ತಂಗಡಗಿ

   

ಕೊಪ್ಪಳ: ‘ದೇಶದಲ್ಲಿ ಎಸ್‌ಸಿಎಸ್‌ಪಿ–ಟಿಎಸ್‌ಪಿ ನಿಧಿ ಕಾಯ್ದೆ ಜಾರಿ ಮಾಡಿದ್ದು ಕರ್ನಾಟಕ. ಪ್ರಧಾನಿ ನರೇಂದ್ರ ಮೋದಿಗೆ ತಾಕತ್ತಿದ್ದರೆ ದೇಶದಲ್ಲಿ ಇಂಥ ಕಾಯ್ದೆ ಜಾರಿ ಮಾಡಲಿ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.

‘ಬಿಜೆಪಿಗರಿಗೆ ನಾಚಿಕೆಯೇ ಇಲ್ಲ. ಆ ಪಕ್ಷದ ನಾಯಕರು ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಗುಲಾಮರಂತೆ ನಡೆದುಕೊಳ್ಳುತ್ತಿದ್ದಾರೆ. ಗ್ಯಾರಂಟಿ ಬೇಡ ಎಂದು ಛಲವಾದಿ ನಾರಾಯಣಸ್ವಾಮಿ ನೇರವಾಗಿ ಹೇಳಲಿ. ಇದನ್ನು ಬಿಟ್ಟು ಕಾಯ್ದೆ ಬಗ್ಗೆ ಟೀಕೆ ಮಾಡುವುದು ಏಕೆ’ ಎಂದು ಪ‍್ರಶ್ನಿಸಿದರು.

ADVERTISEMENT

‘ದಲಿತರಿಗೆ ಸೇರಬೇಕಾದ ಹಣ ದುರ್ಬಳಕೆಯಾಗಿದೆ ಎಂದು ನಾರಾಯಣಸ್ವಾಮಿ ಕೊಪ್ಪಳದ ಜಿಲ್ಲಾಡಳಿತದ ಬಾಗಿಲು ಹಾಕಿ ಹೋರಾಟ ಮಾಡುವುದಕ್ಕಿಂತ ಮೋದಿ ಮನೆಯ ಬಾಗಿಲು ಹಾಕಲಿ. ಇವರು ಮೋದಿ ಹತ್ತಿರ ಹೋದರೆ ಕುತ್ತಿಗೆ ಹಿಡಿದು ಹೊರಹಾಕುತ್ತಾರೆ. ಬಿಜೆಪಿಯರವರಿಗೆ ಬಡವರ ಬಗ್ಗೆ ಕಾಳಜಿಯಿಲ್ಲ; ಅದಕ್ಕಾಗಿ ಗ್ಯಾರಂಟಿ ಯೋಜನೆಗಳ ವಿರೋಧಿಯಾಗಿ ಮಾತನಾಡುತ್ತಿದ್ದಾರೆ’ ಎಂದು ಕುಟುಕಿದರು.

ಜಿಲ್ಲಾ ಕೇಂದ್ರದ ಸಮೀಪದಲ್ಲಿ ಬಲ್ಡೋಡಾ ಸಂಸ್ಥೆ ಉಕ್ಕಿನ ಕಾರ್ಖಾನೆ ಸ್ಥಾಪನೆ ಮಾಡಲು ಮುಂದಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ‘ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದಂತೆ ಪಕ್ಷಾತೀತವಾಗಿ ಹಾಲಿ ಮತ್ತು ಮಾಜಿ ಶಾಸಕರ ಸರ್ವಪಕ್ಷದ ನಿಯೋಗ ತೆಗೆದುಕೊಂಡು ಹೋಗಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡುತ್ತೇವೆ. ಜನರ ಆಶಯಕ್ಕೆ ಬದ್ಧವಾಗಿರುತ್ತೇವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.