ADVERTISEMENT

ಪತ್ರಿಕೆ ಓದುವ ಮನೋಭಾವ ಬೆಳೆಯಲಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 4:19 IST
Last Updated 28 ನವೆಂಬರ್ 2022, 4:19 IST
ಕೊಪ್ಪಳದಲ್ಲಿ ಭಾನುವಾರ ಸಾಹಿತಿ ಜಿ.ಎಸ್. ಗೋನಾಳ ಅವರ ಕೃತಿ ‘ಸವಾಲುಗಳ ಸರಮಾಲೆಯಲ್ಲಿ ಪತ್ರಿಕೋದ್ಯಮ’ ಕೃತಿಯನ್ನು ಅತಿಥಿಗಳು ಬಿಡುಗಡೆ ಮಾಡಿದರು
ಕೊಪ್ಪಳದಲ್ಲಿ ಭಾನುವಾರ ಸಾಹಿತಿ ಜಿ.ಎಸ್. ಗೋನಾಳ ಅವರ ಕೃತಿ ‘ಸವಾಲುಗಳ ಸರಮಾಲೆಯಲ್ಲಿ ಪತ್ರಿಕೋದ್ಯಮ’ ಕೃತಿಯನ್ನು ಅತಿಥಿಗಳು ಬಿಡುಗಡೆ ಮಾಡಿದರು   

ಕೊಪ್ಪಳ: ‘ಸಾಕಷ್ಟು ಶ್ರಮಪಟ್ಟು ರೂಪಿಸುವ ಪತ್ರಿಕೆಯನ್ನು ಓದುವ ಮನೋಭಾವವನ್ನು ಜನ ಬೆಳೆಸಿಕೊಳ್ಳಬೇಕು. ಹೆಚ್ಚೆಚ್ಚು ಪತ್ರಿಕೆಗಳನ್ನು ಓದುವುದರಿಂದ ಜ್ಞಾನ ವೃದ್ದಿಯಾಗಲಿದೆ’ ಎಂದು ಪತ್ರಕರ್ತ ಮಂಜುನಾಥ ಅಬ್ಬಿಗೇರಿ ಹೇಳಿದರು.

ನಗರದಲ್ಲಿ ಭಾನುವಾರ ಮಾದಿನೂರಿನ ವಿಶಾಲ ಪ್ರಕಾಶನ, ಸಿರಿಗನ್ನಡ ವೇದಿಕೆ ಹಾಗೂ ಜಿಲ್ಲಾ ವಾರ್ತಾ ಪತ್ರಿಕೆ ಬಳಗದ ಸಹಯೋಗದಲ್ಲಿ ಸಾಹಿತಿ ಜಿ.ಎಸ್. ಗೋನಾಳ ಅವರ ‘ಸವಾಲುಗಳ ಸರಮಾಲೆಯಲ್ಲಿ ಪತ್ರಿಕೋದ್ಯಮ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ’ಪತ್ರಿಕೆಗಳನ್ನು ಆರಂಭಿಸುವುದು ಸವಾಲಿನ ಕೆಲಸವಾಗಿದ್ದು, ಸಾಲ ಮಾಡಿ ಪತ್ರಿಕೆಗಳನ್ನು ಆರಂಭಿಸಿದ್ದೆವು. ನೂರಾರು ಸಮಸ್ಯೆಗಳ ನಡುವೆಯೂ ಅತ್ಯಂತ ಕಡಿಮೆ ದರದಲ್ಲಿ ಓದುಗರಿಗೆ ಪತ್ರಿಕೆ ನೀಡಲಾಗುತ್ತಿದೆ. ಕೇರಳದಲ್ಲಿ ಓದುವಷ್ಟು ಪತ್ರಿಕೆಯನ್ನು ನಮ್ಮ ರಾಜ್ಯದಲ್ಲಿ ಓದುವುದಿಲ್ಲ’ ಎಂದರು.

ಸಾಹಿತಿ ಜಿ.ಎಸ್.ಗೋನಾಳ ಮಾತನಾಡಿ ‘ದೇಶದ ನಾಲ್ಕನೇ ಅಂಗ ಪತ್ರಿಕೋದ್ಯಮ ತನ್ನ ಹೊಣೆಗಾರಿಕೆ ನಿರ್ವಹಿಸುತ್ತಿದೆ. ದೇಶದ ಅಭಿವೃದ್ಧಿಯಲ್ಲಿ ಮಾಧ್ಯಮದ ಕೊಡುಗೆ ಅಪಾರವಾಗಿದೆ’ ಎಂದರು. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ADVERTISEMENT

ರಾಜೇಂದ್ರ ಗಡಾದ, ಯತ್ನಟ್ಟಿಯ ರುದ್ರಮುನಿ ಸ್ವಾಮೀಜಿ, ಶರಣಬಸಪ್ಪ ಬಿಳೆಎಲೆ, ಚನ್ನಯ್ಯ ಹಿರೇಮಠ, ಡಾ. ಮಹಾಂತೇಶ ಮಲ್ಲನಗೌಡರ್, ಪರ್ತಕರ್ತರಾದ ಬಸವರಾಜ ಗುಡ್ಲಾನೂರು, ಸಾದಿಕ್ ಅಲಿ, ಎಚ್ ಎಸ್ ಹರೀಶ, ಬಸವರಾಜ ಹನಸಿ, ಸೋಮಶೇಖರ ಗಾಂಧಿ, ಕೆ.ಎಸ್‌. ಗಾಂಧಿ, ಸಿದ್ದನಗೌಡ ಪಾಟೀಲ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.