ADVERTISEMENT

ಪಂಚಮಸಾಲಿಗಳ ಸಂಕಷ್ಟ ಅರ್ಥವಾಗಲಿ

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 1:24 IST
Last Updated 17 ಜನವರಿ 2021, 1:24 IST
ಕುಷ್ಟಗಿಯಲ್ಲಿ ನಡೆದ ಪಂಚಮಸಾಲಿ ಸಮುದಾಯದ ಪಾದಯಾತ್ರೆಯಲ್ಲಿ ಕಂಡುಬಂದ ಜನಸ್ತೋಮ
ಕುಷ್ಟಗಿಯಲ್ಲಿ ನಡೆದ ಪಂಚಮಸಾಲಿ ಸಮುದಾಯದ ಪಾದಯಾತ್ರೆಯಲ್ಲಿ ಕಂಡುಬಂದ ಜನಸ್ತೋಮ   

ಕುಷ್ಟಗಿ: ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಕೇವಲ ಶಾಲು ಹೊದಿಸಿ, ಊಟ ಹಾಕಿ ಸನ್ಮಾನ ಮಾಡಿ ಕಳಿಸುವುದಷ್ಟೇ ಕೆಲಸವಲ್ಲ. ಪಂಚಮಸಾಲಿ ಸಮುದಾಯದ ಕೊಡುಗೆ, ನೋವು, ಸಂಕಷ್ಟಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲು ಸಚಿವ ಮುರುಗೇಶ ನಿರಾಣಿ ಪ್ರಯತ್ನಿಸಬೇಕು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಸಮುದಾಯಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಕೂಡಲಸಂಗಮದಿಂದ ಬೆಂಗಳೂರು ವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಶನಿವಾರ ಕೊಪ್ಪಳ ಜಿಲ್ಲೆಯನ್ನು ಪ್ರವೇಶಿಸಿದ ನಂತರ ಕುಷ್ಟಗಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ನಿರಾಣಿ ಸಚಿವರಾಗಿರುವುದು ಪಂಚಮಸಾಲಿ ಕೋಟಾದ ಅಡಿಯಲ್ಲಿ ಎಂಬುದನ್ನು ಮರೆಯಬಾರದು. ತಮ್ಮ ಮೇಲಿನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಬೇಕು. ಪಂಚಮಸಾಲಿ ಸಮುದಾಯದ ಬೇಡಿಕೆ ಈಡೇರಿಸುವಂತೆ ಶಾ ಅವರೇ ಮುಖ್ಯಂತ್ರಿಗೆ ಸೂಚಿಸುವಂತಾಗಬೇಕು’ ಎಂದು ಹೇಳಿದರು.

ಹೃದಯ ಶ್ರೀಮಂತಿಕೆಯಲ್ಲಿ ಪಂಚಮಸಾಲಿ ಸಮುದಾಯದವರು ಆಗರ್ಭ ಶ್ರೀಮಂತರು. ಆದರೆ ಆರ್ಥಿಕವಾಗಿ ಬಡವರು. ಮಕ್ಕಳ ಶೈಕ್ಷಣಿಕ ಮತ್ತು ಉದ್ಯೋಗದ ಮೀಸಲಾತಿಗಾಗಿ ದಶಕಗಳ ನಂತರ ಬೀದಿಗಿಳಿದು ಹೋರಾಟ ಮಾಡುವಂಥ ಜಾಗೃತಿ ಸಮುದಾಯದಲ್ಲಿ ಬಂದಿದೆ. ಶಿಕ್ಷಣ, ಉದ್ಯೋಗದಲ್ಲಿನ ಅನ್ಯಾಯ ಸರಿಪಡಿಸಲು ಮೀಸಲಾತಿಯ ತುಣುಕು ರೊಟ್ಟಿಯನ್ನು ಕೊಡಿ ಎಂದು ಸರ್ಕಾರವನ್ನು ಕೇಳುತ್ತಿದ್ದೇವೆ. ಹೊರತು ಎಲ್ಲವನ್ನೂ ನಮಗೇ ಕೊಡಿ ಎಂದು ಕೇಳಿಲ್ಲ ಎಂದರು.

ADVERTISEMENT

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗಾಗಿ ಸಮುದಾಯ ಬಹಳಷ್ಟು ತ್ಯಾಗ ಮಾಡುತ್ತ ಬಂದಿದೆ. ಅವರ ಕಾಲದಲ್ಲಿ ನಮ್ಮ ಬೇಡಿಕೆ ಈಡೇರದಿದ್ದರೆ ಮುಂದೆ ಯಾರಿಂದಲೂ ಈಡೇರಿಸಲು ಸಾಧ್ಯವಾಗುವುದಿಲ್ಲ. ಕೇವಲ ನಮ್ಮವರಿಗೆ ನಿಗಮ ಮಂಡಳಿ ಅಧಿಕಾರ, ಮಂತ್ರಿ ಸ್ಥಾನ, ಅನುದಾನ ನೀಡಿದರಷ್ಟೇ ಸಾಲದು. 2 ಎ ಮೀಸಲಾತಿ ಕಲ್ಪಿಸುವ ಮೂಲಕ ಮಾತ್ರ ಪಂಚಮಸಾಲಿ ಸಮುದಾಯದ ಋಣ ಸಂದಾಯ ಮಾಡಲು ಸಾಧ್ಯ. ಆದರೆ ಈ ಹಿಂದೆಯೂ ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಯಾವುದೇ ಮನವಿ ನೀಡದ, ಹೋರಾಟಕ್ಕೂ ಇಳಿಯದ ಮೂರು ಸಮುದಾಯಗಳಿಗೆ ಅವರ ಪ್ರಭಾವಕ್ಕೆ ಒಳಗಾಗಿ ಕೇಳದಿದ್ದರೂ 2 ಎ ಮೀಸಲಾತಿ ನೀಡಿದ್ದರು. ಆದರೆ ನಾವು ಅನೇಕ ದಶಕಗಳಿಂದ ವಿವಿಧ ರೀತಿಯಲ್ಲಿ ಸರ್ಕಾರಕ್ಕೆ ಮನವಿ ಮಾಡುತ್ತ ಬಂದಿದ್ದೇವೆ. ಗಡುವು ನೀಡಿದ್ದೇವೆ. ಮುಖ್ಯಮಂತ್ರಿ ಮನೆ ಬಾಗಿಲಿಗೆ ಹೋಗಿ ಮೀಸಲಾತಿ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ. ಆದರೂ ಸರ್ಕಾರ ಈ ವಿಚಾರದಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.

ನಂತರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ,‘ಮೀಸಲಾತಿ ಕಲ್ಪಿಸದೇ ಇದ್ದಲ್ಲಿ ಸಮುದಾಯ ಬಹಳಷ್ಟು ನಿರಾಸೆಗೆ ಒಳಗಾಗುವ ಸಾಧ್ಯತೆ ಇದ್ದು, ನಿರಾಸೆ ಪ್ರತೀಕಾರದ ರೂಪ ಪಡೆದರೆ ಪರಿಣಾಮ ಏನೇ ಆದರೂ ಅದಕ್ಕೆ ಅಚ್ಚರಿ ಪಡಬೇಕಿಲ್ಲ’ ಎಂದು ಸರ್ಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು.

ಸಂಸದ ಸಂಗಣ್ಣ ಕರಡಿ, ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ, ವಿಜಯಾನಂದ ಕಾಶಪ್ಪನವರ ಇತರರು ಪಾದಯಾತ್ರೆ ಬೆಂಬಲಿಸಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಹೇಶ, ಪ್ರಮುಖರಾದ ಚಂದ್ರಶೇಖರ ನಾಲತ್ವಾಡ, ಬಸವರಾಜ ಹಳ್ಳೂರು, ವೀಣಾ ಕಾಶಪ್ಪನವರ್, ಮಹಾಂತೇಶ ಅಗಸಿಮುಂದಿನ, ಬಸವಲಿಂಗಪ್ಪ, ನಿಂಗಪ್ಪ ಮಂಗಳೂರು, ಉಮೇಶ ಮಂಗಳೂರು, ದೊಡ್ಡಪ್ಪ ಕಂದಗಲ್ ಸೇರಿದಂತೆ ಪಂಚಮಸಾಲಿ ಸಮುದಾಯದ ಅನೇಕ ಹಿರಿಯರು, ಪಾದಯಾತ್ರೆಯಲ್ಲಿದ್ದರು.

ಜನ ಸ್ವಾಮೀಜಿ ಅವರನ್ನು ಸಂಭ್ರಮದಿಂದ ಬರಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.