ಕೊಪ್ಪಳ: ನಗರದ ಬಸವೇಶ್ವರ ವಾರ್ಡಿನ ಹನುಮಪ್ಪನ ದೇವಸ್ಥಾನದಲ್ಲಿ ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ನಿಮಿತ್ತ ಗ್ರಂಥಾಲಯ ಗುಡಿ ಪ್ರಾರಂಭಿಸಲಾಯಿತು. ಕಾರ್ಯಕ್ರಮವನ್ನು ಬಾಬಾಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ದೀಪ ಬೆಳಗಿಸುವುದರೊಂದಿಗೆ ಚಾಲನೆ ನೀಡಲಾಯಿತು.
ಮುಖಂಡ ಮಾರುತಿ ಕಟ್ಟಿಮನಿ ಮಾತನಾಡಿ, ‘ನಮ್ಮ ವಾರ್ಡಿನ ಹನುಮಪ್ಪನ ಗುಡಿಯಲ್ಲಿ ಗ್ರಂಥಾಲಯ ಗುಡಿ ಪ್ರಾರಂಭಿಸಿದ್ದೇವೆ. ಸದರಿ ಗ್ರಂಥಾಲಯ ಗುಡಿಯಲ್ಲಿ ಸದ್ಯ ದಿನಪತ್ರಿಕೆಗಳಿದ್ದು, ಮುಂಬರುವ ದಿನಗಳಲ್ಲಿ ಪುಸ್ತಕ, ನಿಯತಕಾಲಿಕೆಗಳೆಲ್ಲವೂ ದೊರಕಲಿವೆ. ನಿತ್ಯ ಪತ್ರಿಕೆಗಳನ್ನು ದೇವಸ್ಥಾನದ ಆವರಣದಲ್ಲಿಯೇ ಓದಿ, ಅಲ್ಲಿಯೇ ಮರಳಿ ಇಡಲು ಅನುಕೂಲ ಕಲ್ಪಿಸಲಾಗಿದೆ. ಬಾಬಾಸಾಹೇಬರು ಪುಸ್ತಕಪ್ರಿಯರಾಗಿದ್ದರು. ಓದುವ ಆಸಕ್ತಿ ಬೆಳೆಸುವ ಈ ಕಾರ್ಯಕ್ಕೆ ಅವರ ಜಯಂತಿ ದಿನದಂದೇ ಚಾಲನೆ ನೀಡುತ್ತಿರುವುದು ನಮ್ಮ ವಾರ್ಡಿನ ಜನರೆಲ್ಲರಿಗೂ ಅಕ್ಷರದ ದೀಪ ಹಚ್ಚುವ ಕೆಲಸಕ್ಕೆ ಚಾಲನೆ ಸಿಕ್ಕಂತಾಗಿರುವುದು ಖುಷಿ’ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಶಂಕರಯ್ಯ ಮಾತನಾಡಿ, ‘ಸಾರ್ವಜನಿಕರು ಓದುವ ಹವ್ಯಾಸ ಬೆಳೆಸಿಕೊಳ್ಳಲು ಯುವಕರು ಮಾಡಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ. ತಾವೆಲ್ಲರೂ ಈ ದೇವಸ್ಥಾನವನ್ನು ಸ್ವಚ್ಛವಾಗಿರುವುದಷ್ಟೇ ಅಲ್ಲ, ಅಕ್ಷರದ ದೀಪ ಬೆಳಗಿಸುವಂತಹ ಕಲ್ಪನೆಯಲ್ಲಿ ಇದು ಸಾಗಬೇಕಿದೆ. ಗ್ರಂಥಾಲಯ ಗುಡಿ ಪ್ರಾರಂಭಿಸಿದ್ದು ನಿಜಕ್ಕೂ ಸಂತಸ. ಯಾವ ಸಮಾಜಕ್ಕೆ ಒಂದು ಕಾಲದಲ್ಲಿ ಅಕ್ಷರದಿಂದ ವಂಚಿತರಾಗಿಸುತ್ತಿದ್ದರೋ ಅಂತಹ ಸಮಾಜದ ಯುವ ಬಳಗ ಇಂದು ಓದಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದು ಸಂತಸದ ವಿಷಯ’ ಎಂದರು.
ಡಾ.ಸಿದ್ಧಲಿಂಗಪ್ಪ ಕೊಟ್ನೇಕಲ್, ಮಹಾಲಕ್ಷ್ಮಿ ಕಂದಾರಿ, ರಮೇಶ ಗಿಣಗೇರಿ, ಈಶಪ್ಪ ದೊಡ್ಡಮನಿ, ಶ್ರವಣಕುಮಾರ ಶರ್ಮಾ, ಪರಶುರಾಮ ಕಿಡದಾಳ, ಗವಿಸಿದ್ಧಪ್ಪ ಗಿಣಗೇರಿ, ಶಿವಪುತ್ರಪ್ಪ ಬಂಗಾರಿ, ದೇವಪ್ಪ ಗಿಣಗೇರಿ, ವಿನಾಯಕ ಕಿಡದಾಳ, ಗವಿರಾಜ ದೊಡ್ಡಮನಿ, ಮಂಜುನಾಥ ಹಳ್ಳಿಕೇರಿ, ಕು.ವೈಭವ ಪೂಜಾರ, ಮಾರುತಿ ಕಿರುಬಂಡಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.