ಗಂಗಾವತಿ: ‘ಸಮಾಜದಲ್ಲಿನ ನೋವು-ನಲಿವನ್ನು ಅಭಿವ್ಯಕ್ತಿಸುವ, ಲೋಪದೋಷ ತಿದ್ದುವ ಬರಹಕ್ಕೆ ಆಯುಷ್ಯ ಜಾಸ್ತಿ. ಯಾವ ಬರಹಗಳು ಮಾನವನ ಕಳಕಳಿ, ಜೀವನಾನುಭವ ಹೊಂದಿರುತ್ತವೋ ಅಂತವು ಓದುಗನ ಸ್ಪೃತಿಪಟಲದಲ್ಲಿ ನೆಲೆಯೂರುತ್ತವೆ. ಇಂದು ಬರಹಕ್ಕೆ ವಿಪುಲ ಅವಕಾಶಗಳಿವೆ’ ಎಂದು ಹಾಸ್ಯ ಕಲಾವಿದ ಬಿ. ಪ್ರಾಣೇಶ ಅಭಿಪ್ರಾಯಟ್ಟರು.
ನಗರದ ಸುಶಮೀಂದ್ರ ಗುರುಕುಲದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಈಚೆಗೆ ನಡೆದ ರಾಘವೇಂದ್ರ ಮಂಗಳೂರು ಅವರ ‘ಭೂಮಿ ದುಂಡಗಿದೆ’, ‘ನ್ಯಾನೋ ಕತೆಗಳು’ ಎಂಬ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬರಹದ ಮೂಲಕ ಪ್ರತಿಯೊಬ್ಬರು ವಿಭಿನ್ನ ರೀತಿಯ ಸಂವೇದನೆಗಳನ್ನು ಅಭಿವ್ಯಕ್ತಿಸಲು ಮುಕ್ತ ಅವಕಾಶವಿದೆ. ಸದ್ಯ ಸಾಹಿತ್ಯ ಲೋಕಕ್ಕೆ ವಿಭಿನ್ನ ಪ್ರಕಾರದ ಬರಹಗಳು ಕಾಲಿಡುತ್ತಿದ್ದು, ಮೂರ್ನಾಲ್ಕು ಸಾಲಿನ ನ್ಯಾನೋ ಕತೆಗಳು ಓದುಗರನ್ನು ಹೆಚ್ಚಾಗಿ ಗಮನ ಸೆಳೆಯುತ್ತಿವೆ’ ಎಂದರು.
ಹಿರಿಯ ಕವಿ ರಾಘವೇಂದ್ರ ದಂಡಿನ್ ಅವರು ಭೂಮಿ ದುಂಡಗಿದೆ ಎಂಬ ವಿಡಂಬನಾ ಕೃತಿ ಪರಿಚಯಿಸಿ ಮಾತನಾಡಿ, ಲೋಕದ ಡೊಂಕು ತಿದ್ದುವ ಆಶಯವುಳ್ಳ ಬರಹ ಯಾವಾಗಲೂ ಚರ್ಚೆಗೆ ನಾಂದಿ ಹಾಡುತ್ತದೆ. ಈ ಕೃತಿ ಮನುಷ್ಯನ ವ್ಯಕ್ತಿತ್ವದ ಸಣ್ಣತನ, ದೌರ್ಬಲ್ಯಗಳನ್ನು ಹೇಳುತ್ತಾ ಆದರ್ಶ ಮೌಲ್ಯಗಳ ಕುರಿತು ಬೆಳಕು ಚೆಲ್ಲುತ್ತದೆ. ಎಂದರು.
ಲೇಖಕ ರಾಘವೇಂದ್ರ ಮಂಗಳೂರು ಮಾತನಾಡಿದರು.
ಹಿರಿಯ ಸಾಹಿತಿ ಲಿಂಗಾರೆಡ್ಡಿ ಆಲೂರು ನ್ಯಾನೋ ಕಥೆಗಳನ್ನು ವಾಚಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ, ಹಿರಿಯ ಸಾಹಿತಿ ಶೇಖರಗೌಡ ಸರನಾಡಗೌಡರ, ನಾರಾಯಣರಾವ ವೈದ್ಯ, ಜನಾರ್ದನ ರಾವ ಅಲಬನೂರು, ಪ್ರಗತಿ ಗ್ರಾಮೀಣ ಬ್ಯಾಂಕ್ ಬಳ್ಳಾರಿ ಚೇರ್ಮನ್ ಜಿ.ಆರ್. ದಿಲ್ಲಿಬಾಬು, ಕರ್ನಾಟಕ ಪ್ರಗತಿ ಗ್ರಾಮೀಣ ಬ್ಯಾಂಕಿನ ಚೀಫ್ ಮ್ಯಾನೇಜರ್ ಕೆ.ವಿ.ರಾಜಾರಾವ್ ಭಾಗವಹಿಸಿದ್ಧರು.
ಶ್ವೇತಾ ರಂಗನಾಥ ಕುಲಕರ್ಣಿ ಪ್ರಾರ್ಥಿಸಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ ಅಂಗಡಿ ಸ್ವಾಗತಿಸಿದರು. ಗುಂಡೂರು ಪವನಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ರುದ್ರೇಶ ಮಡಿವಾಳ ಅವರು ವಂದಿಸಿದರು. ಉಮಾ ದೇವಿ ನೆರವೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.