ಕೊಪ್ಪಳ: ‘ಸಾಹಿತ್ಯದ ಮೂಲಕ ತಮ್ಮ ವಿಚಾರಗಳನ್ನು ಮುಕ್ತವಾಗಿ ಹೇಳಿದವರನ್ನು ಕೊಲ್ಲಿಸಲಾಗುತ್ತಿದೆ. ಹಿಂದಿನ ಹಲವು ವರ್ಷಗಳಿಂದ ಲೇಖಕರು ತೊಂದರೆ ಎದುರಿಸುತ್ತಿದ್ದು, ಮನೆಗೆ ಬಂದವರನ್ನೂ ಅನುಮಾನದಿಂದ ನೋಡುವ ಸ್ಥಿತಿ ಎದುರಾಗಿದೆ’ ಎಂದು ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಪುಸ್ತಕ ಬಹುಮಾನ, ದತ್ತಿ ಪುಸ್ತಕ ಬಹುಮಾನ, 2022ನೇ ಸಾಲಿನ ಗೌರವ ಪ್ರಶಸ್ತಿ ಮತ್ತು ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿದ ಅವರು ‘ಮೌಢ್ಯ ನಿರಾಕರಿಸಿ ವೈಜ್ಞಾನಿಕ ವಿಚಾರದಿಂದ ಬರೆಯುವುದು ತಪ್ಪೇ’ ಎಂದು ಪ್ರಶ್ನಿಸಿದರು.
‘ಕರ್ನಾಟಕದಲ್ಲಿ ಕನ್ನಡವೇ ಕಲಿಕಾ ಭಾಷೆಯಾಗಬೇಕು. ಆಡಳಿತದಲ್ಲಿ ಕಡ್ಡಾಯವಾಗಿ ಕನ್ನಡ ಜಾರಿಗೊಳ್ಳಬೇಕು. ಹಿಂದಿ ರಾಷ್ಟ್ರಭಾಷೆ ಎಂದು ಹೇರುವ ಪ್ರಯತ್ನ ನಡೆಯುತ್ತಿದ್ದು, ಭಾರತ ಬಹುಸಂಸ್ಕೃತಿ, ಬಹು ಆಯಾಮಗಳನ್ನು ಹೊಂದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿ.ಆರ್. ಅಂಬೇಡ್ಕರ್ ಬದಲು ದೇವರನ್ನು ಸ್ಮರಿಸಿ ಎನ್ನುತ್ತಿದ್ದಾರೆ. ಇಂಥ ಸರ್ಕಾರದಿಂದ ಲೇಖಕರು ಏನು ತಾನೆ ನಿರೀಕ್ಷೆ ಮಾಡಲು ಸಾಧ್ಯ’ ಎಂದು ಪ್ರಶ್ನಿಸಿದರು.
ಪ್ರಶಸ್ತಿ ಪ್ರದಾನ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ‘ಹಿಂದಿನ ಸರ್ಕಾರ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಬಲ ಕುಗ್ಗಿಸಿತ್ತು. ನಮ್ಮ ಸರ್ಕಾರ ಪ್ರತಿ ಅಕಾಡೆಮಿಗೂ ವಾರ್ಷಿಕ ₹80 ಲಕ್ಷ ಅನುದಾನ ನೀಡಿದೆ. ಬೆಂಗಳೂರು, ಮೈಸೂರು ಭಾಗಕ್ಕೆ ಸೀಮಿತವಾಗಿದ್ದ ಇವುಗಳ ಕಾರ್ಯಚಟುವಟಿಕೆಗಳನ್ನು ಉತ್ತರ ಕರ್ನಾಟಕಕ್ಕೂ ವಿಸ್ತರಿಸಲಾಗುತ್ತಿದೆ’ ಎಂದು ತಿಳಿಸಿದರು.
ನಾಲ್ಕು ಜನರಿಗೆ ಗೌರವ ಪ್ರಶಸ್ತಿ, 10 ಜನರಿಗೆ ಸಾಹಿತ್ಯ ಶ್ರೀ, 17 ಬರಹಗಾರರಿಗೆ ಪುಸ್ತಕ ಬಹುಮಾನ ಮತ್ತು ಎಂಟು ಜನ ಲೇಖಕರಿಗೆ ಅಕಾಡೆಮಿಯ ಪುಸ್ತಕ ದತ್ತಿ ಬಹುಮಾನ ನೀಡಲಾಯಿತು. ಇತ್ತೀಚೆಗೆ ನಿಧನರಾದ ಮುಜಾಫರ್ ಅಸ್ಸಾದಿ ಅವರಿಗೆ ಪುಸ್ತಕ ಬಹುಮಾನ ಲಭಿಸಿದ್ದು, ಅವರ ಪುತ್ರಿ ಪ್ರಶಸ್ತಿ ಸ್ವೀಕರಿಸಿದರು.
ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ಜ. 27ರಂದು ಅದ್ದೂರಿ ಸಮಾರಂಭ ನಡೆಸಿ ಭುವನೇಶ್ವರಿ ದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು.ಶಿವರಾಜ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ
ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸಾಹಿತಿಗಳಿಂದಲೇ ಪ್ರಶಸ್ತಿ ಕೊಡಿಸಿದ್ದರೆ ಚೆನ್ನಾಗಿತ್ತು. ಗೌರವ ಪ್ರಶಸ್ತಿ ಇನ್ನಷ್ಟು ಕೆಲಸ ಮಾಡಲು ಪ್ರೇರಣೆಯಾಗಿದೆ.ಅಗ್ರಹಾರ ಕೃಷ್ಣಮೂರ್ತಿ, ಪ್ರಶಸ್ತಿ ಪುರಸ್ಕೃತರು
ಮಾನವೀಯ ಮೌಲ್ಯಗಳನ್ನು ಜನರಲ್ಲಿ ಬಿತ್ತುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ನನಗೆ ಲಭಿಸಿದ ಸಾಹಿತ್ಯಶ್ರೀ ಪ್ರಶಸ್ತಿ ಶೋಷಿತರ ಧ್ವನಿಯಾದ ಎಲ್ಲರಿಗೂ ಅರ್ಪಣೆ.ಅನಸೂಯ ಕಾಂಬಳೆ, ಪ್ರಶಸ್ತಿ ಪುರಸ್ಕೃತೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.