ADVERTISEMENT

ಕೊಪ್ಪಳ: ಸಂಗಣ್ಣ ಕರಡಿಗೆ ಕೈ ತಪ್ಪಿದ ಟಿಕೆಟ್; ಮುಳುವಾಯಿತೇ ಟಿಕೆಟ್‌ ಪಟ್ಟು?

ಕಾರ್ಯಕರ್ತರ ಮುನಿಸು, ಚುನಾವಣಾ ಸವಾಲು ಎದುರಿಸುವ ಸಂದಿಗ್ದದಲ್ಲಿ ಜಿಲ್ಲೆಯ ಬಿಜೆಪಿ ನಾಯಕರು

ಪ್ರಮೋದ
Published 14 ಮಾರ್ಚ್ 2024, 5:32 IST
Last Updated 14 ಮಾರ್ಚ್ 2024, 5:32 IST
ಸಂಗಣ್ಣ ಕರಡಿ
ಸಂಗಣ್ಣ ಕರಡಿ   

ಕೊಪ್ಪಳ: ಸತತ ಎರಡು ಬಾರಿ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿರುವ ಸಂಗಣ್ಣ ಕರಡಿ ಅವರಿಗೆ ಈ ಬಾರಿ ಟಿಕೆಟ್‌ ಕೈ ತಪ್ಪಿದ್ದು, ಹಿಂದಿನ ಎರಡೂ ವಿಧಾನಸಭಾ ಚುನಾವಣೆ ವೇಳೆ ತಮ್ಮವರಿಗೆ ಟಿಕೆಟ್‌ ಕೊಡಬೇಕು ಎಂದು ಹಿಡಿದಿದ್ದ ಪಟ್ಟು ಮುಳುವಾಯಿತೇ? ಎನ್ನುವ ಚರ್ಚೆ ಜಿಲ್ಲೆಯ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.

ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿಯು ವೈದ್ಯ ಬಸವರಾಜ ಕ್ಯಾವಟರ ಅವರಿಗೆ ಟಿಕೆಟ್ ನೀಡಿದೆ. ಪಂಚಮಸಾಲಿ ಸಮುದಾಯದ ಬಸವರಾಜ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರೂ ಹೌದು.

ಹಾಲಿ ಸಂಸದರಿಗೇ ಟಿಕೆಟ್‌ ಸಿಗುತ್ತದೆ ಎನ್ನುವ ನಿರೀಕ್ಷೆ ಬಿಜೆಪಿಯ ಅನೇಕ ಕಾರ್ಯಕರ್ತರಲ್ಲಿತ್ತು. ಆದರೆ ಪಕ್ಷ ಹೊಸ ಮುಖಕ್ಕೆ ಮಣೆ ಹಾಕುತ್ತಿದ್ದಂತೆ ಸಂಗಣ್ಣ ಕರಡಿ ಬೆಂಬಲಿಗರು ಹಾಗೂ ಕೆಲ ಕಾರ್ಯಕರ್ತರು ಅವರ ಮನೆ ಬಳಿ ಬಂದು ಕಣ್ಣೀರು ಹಾಕಿದರು. ’ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವು ಸುಲಭ ಮಾಡುವ ಸಲುವಾಗಿಯೇ ಬಿಜೆಪಿಯಲ್ಲಿ ಯಾರಿಗೂ ಗೊತ್ತಿಲ್ಲದ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಣ್ಣೀರು ಹಾಕುತ್ತಿದ್ದ ಬೆಂಬಲಿಗರನ್ನು ಸಂಸದರು ಸಮಾಧಾನ ಪಡಿಸಿದರು.

ADVERTISEMENT

ಹಿಂದಿನ ಎರಡೂ ವಿಧಾನಸಭಾ ಚುನಾವಣೆಗಳ ವೇಳೆ ಕೊಪ್ಪಳ ಕ್ಷೇತ್ರದಿಂದ ಸಿ.ವಿ. ಚಂದ್ರಶೇಖರ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ’ನಮಗೇ ಟಿಕೆಟ್‌ ನೀಡಬೇಕು’ ಎಂದು ಸಂಸದರು ಪಟ್ಟು ಹಿಡಿದಿದ್ದರಿಂದ 2018ರಲ್ಲಿ ಸಂಸದರ ಪುತ್ರ ಅಮರೇಶ ಕರಡಿ ಮತ್ತು 2023ರಲ್ಲಿ ಅವರ ಸೊಸೆ ಮಂಜುಳಾ ಕರಡಿ ಅವರಿಗೆ ಪಕ್ಷ ಟಿಕೆಟ್‌ ನೀಡಿತ್ತು. ಇಬ್ಬರೂ ಸೋತಿದ್ದರು. ಹಿಂದಿನ ವಿಧಾನಸಭಾ ಚುನಾವಣೆ ವೇಳೆ ನಾವು ಹೇಳುವವರಿಗೆ ಟಿಕೆಟ್‌ ಕೊಡದಿದ್ದರೆ ಪಕ್ಷ ಬಿಡುವುದಾಗಿಯೂ ಹೇಳಿದ್ದರು. ಬಹಿರಂಗ ಸಭೆ ನಡೆಸಿ ಶಕ್ತಿ ಪ್ರದರ್ಶಿಸಿ ವರಿಷ್ಠರಿಗೆ ಒತ್ತಡ ಹೇರುವ ತಂತ್ರವನ್ನೂ ಅನುಸರಿಸಿದ್ದರು. ಇದಕ್ಕೆ ಮಣಿದು ಪಕ್ಷದ ವರಿಷ್ಠರು ಸಂಸದರ ಕುಟುಂಬಕ್ಕೆ ಟಿಕೆಟ್‌ ನೀಡಿತ್ತು.

ಟಿಕೆಟ್‌ಗಾಗಿ ಹಿಂದೆ ಹೇರಿದ್ದ ಒತ್ತಡ ಅವರಿಗೆ ಮುಳುವಾದಂತೆ ಕಾಣುತ್ತಿದೆ. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ’ಪಕ್ಷ ನನಗೆ ಯಾಕೆ ಟಿಕೆಟ್‌ ನೀಡಿಲ್ಲ ಎನ್ನುವುದು ಗೊತ್ತಿಲ್ಲ. ಪಕ್ಷ ಕೈಗೊಂಡಿರುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಹೊಸಬರಿಗೆ ಅವಕಾಶ ನೀಡಿದ್ದು ಅವರಿಗೆ ಬೆಂಬಲ ನೀಡುವಂತೆ ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ’ ಎಂದರು.

ಶಾಸಕರಿಂದ ಸಂಸದ ಸ್ಥಾನ: 1994ರಿಂದಲೂ ರಾಜ್ಯ ಚುನಾವಣಾ ರಾಜಕಾರಣದಲ್ಲಿರುವ ಸಂಗಣ್ಣ ಕರಡಿ ಅವರು ಮೊದಲ ಬಾರಿಗೆ ಪಕ್ಷೇತರರಾಗಿ ಶಾಸಕರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಜೆಡಿಯುನಿಂದ, 2008ರಲ್ಲಿ ಜನತಾದಳದಿಂದ, 2011ರಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ರಾಘವೇಂದ್ರ ಹಿಟ್ನಾಳ ಎದುರು ಸೋತ ಬಳಿಕ ಮರುವರ್ಷವೇ ನಡೆದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಮೊದಲ ಬಾರಿಗೆ ಸಂಸದರಾಗಿದ್ದರು. 

ಡಾ. ಬಸವರಾಜ ಕ್ಯಾವಟರ

ಕಾರ್ಯಕರ್ತರ ಒತ್ತಡದಿಂದ ಟಿಕೆಟ್ ಸಿಕ್ಕಿದೆ. ಸಂಸದ ಸಂಗಣ್ಣ ಕರಡಿ ನನಗೆ ತಂದೆ ಸಮಾನರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುವೆ. ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವೆ.

-ಬಸವರಾಜ ಕ್ಯಾವಟರ ಬಿಜೆಪಿ ಅಭ್ಯರ್ಥಿ

ಯಾವ ಕಾರಣಕ್ಕಾಗಿ ಪಕ್ಷ ನನಗೆ ಟಿಕೆಟ್‌ ನೀಡಿಲ್ಲ ಎನ್ನುವ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಪಕ್ಷದ ನಿರ್ಧಾರವನ್ನು ಗೌರವಿಸುತ್ತೇನೆ. ಆದರೆ ಕಾರ್ಯಕರ್ತರಿಗೆ ಸಾಕಷ್ಟು ನೋವಾಗಿದೆ.

-ಸಂಗಣ್ಣ ಕರಡಿ ಸಂಸದ

ಸಂಗಣ್ಣ ಕರಡಿ ಬೆಂಬಲಿಗರ ಆಕ್ರೋಶ 

ತಮಗೆ ಟಿಕೆಟ್‌ ಕೈ ತಪ್ಪುತ್ತಿದ್ದಂತೆ ಭಾವುಕರಾದ ಸಂಗಣ್ಣ ಕರಡಿ ಅವರು ಕಣ್ಣೀರು ಹಾಕುತ್ತಿದ್ದ ತಮ್ಮ ಕಾರ್ಯಕರ್ತರನ್ನು ಸಮಾಧಾನಪಡಿಸುತ್ತಿದ್ದರು. ಸಂಸದರ ಮನೆ ಮುಂದೆ ಜಮಾಯಿಸಿದ ಕಾರ್ಯಕರ್ತರು ’ಒಂದು ಗ್ರಾಮ ಪಂಚಾಯಿತಿ ಬಗ್ಗೆಯೂ ಸರಿಯಾಗಿ ಮಾಹಿತಿ ಗೊತ್ತಿಲ್ಲದವರು ಲೋಕಸಭಾ ಅಭ್ಯರ್ಥಿಯಾಗಿದ್ದಾರೆ. ಅನೇಕ ವರ್ಷಗಳಿಂದ ಪಕ್ಷ ಕಟ್ಟಿದವರಿಗಿಂತ ಪಕ್ಷದ ಯಾವ ಕೆಲಸವನ್ನೂ ಮಾಡದವರಿಗೆ ಟಿಕೆಟ್‌ ನೀಡಿದ್ದು ಸರಿಯೇ? ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ‘ಆರ್‌ಎಸ್‌ಎಸ್‌ನ ಕೆಲ ನಾಯಕರ ಕೈವಾಡದಿಂದ ಸಂಗಣ್ಣ ಅವರಿಗೆ ಟಿಕೆಟ್‌ ಕೈ ತಪ್ಪಿದೆ. ಎರಡ್ಮೂರು ದಿನಗಳಲ್ಲಿ ಪಕ್ಷ ತನ್ನ ನಿರ್ಧಾರ ಬದಲಿಸದೇ ಹೋದರೆ ಪ್ರತಿಭಟನೆ ಮಾಡುತ್ತೇವೆ. ಸ್ಥಳೀಯ ನಾಲ್ಕೈದು ಜನ ಮುಖಂಡರು ಸೇರಿಕೊಂಡೇ ಟಿಕೆಟ್‌ ತಪ್ಪಿಸಿದ್ದಾರೆ’ ಎಂದು ಆರೋಪಿಸಿದರು.  

‘ಒಬ್ಬ ವ್ಯಕ್ತಿಯಿಂದ ಕ್ಷೇತ್ರವೇ ಹಾಳಾಯಿತು‘

‘ಒಬ್ಬ ವ್ಯಕ್ತಿಯ ಸ್ವಾರ್ಥದಿಂದಾಗಿ ಕ್ಷೇತ್ರವೇ ಹಾಳಾಗಿ ಹೋಯಿತು. ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು ನಮ್ಮು ಮುಂದಿನ ನಡೆಯ ಬಗ್ಗೆ ಎರಡ್ಮೂರು ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಜೆಡಿಎಸ್‌ ರಾಜ್ಯ ಕೋರ್‌ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಹೇಳಿದರು. ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಅವರು ‘ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಯಾಗಿ  ಚುನಾವಣೆ ಎದುರಿಸುವುದಾಗಿ ನಮ್ಮ ನಾಯಕರು ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಸ್ಥಳೀಯವಾಗಿ ನನಗೆ ಎರಡು ಬಾರಿ ಟಿಕೆಟ್‌ ತಪ್ಪಿಸಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ’ ಎಂದರು. ‘ಒಬ್ಬ ವ್ಯಕ್ತಿ ಸ್ವಾರ್ಥಕ್ಕಾಗಿ ಮಾಡಿದ ತಪ್ಪಿನಿಂದಾಗ ಕ್ಷೇತ್ರ ಹಾಳಾಗಿದ್ದು ಭಗವಂತ ತಕ್ಕ ಶಿಕ್ಷೆ ಕೊಟ್ಟಿದ್ದಾನೆ. ಅವರ ತಪ್ಪು ನಿರ್ಧಾರಗಳಿಂದ ಪಕ್ಷಕ್ಕೆ ಹಾನಿಯಾಗಿದೆ. ತನು ಮನ ಹಾಗೂ ಧನದಿಂದ ನಾನೂ ಪಕ್ಷಕ್ಕೆ ಸಾಕಷ್ಟು ದುಡಿದಿದ್ದೇನೆ. ಕೊಪ್ಪಳ ಕ್ಷೇತ್ರದಲ್ಲಿ ನನಗೆ ನನ್ನದೇ ಆದ ವರ್ಚಸ್ಸುಯಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಎರಡೂ ಪಕ್ಷಗಳಿಂದ ಆಹ್ವಾನವಿದೆ. ಎರಡ್ಮೂರು ದಿನಗಳಲ್ಲಿ ಆಗುವ ಬೆಳವಣಿಗೆ ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳುವೆ’ ಎಂದು ಯಾರ ಹೆಸರನ್ನೂ ಉಲ್ಲೇಖಿಸದೇ ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.