ADVERTISEMENT

26 ತಾಸು ಶೋಧ, ಚಿಂಚೋಳಿಕರ್‌ ಬಳಿ ₹4.5 ಕೋಟಿ ಆಸ್ತಿ ಪತ್ತೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 13:34 IST
Last Updated 1 ಜೂನ್ 2023, 13:34 IST
ಕೊಪ್ಪಳದಲ್ಲಿರುವ ಝರಣಪ್ಪ ಎಂ. ಚಿಂಚೋಳಿಕರ್ ಮನೆ
ಕೊಪ್ಪಳದಲ್ಲಿರುವ ಝರಣಪ್ಪ ಎಂ. ಚಿಂಚೋಳಿಕರ್ ಮನೆ   

ಕೊಪ್ಪಳ: ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ (ಕೆಆರ್‌ಐಡಿಎಲ್) ಕಾರ್ಯನಿರ್ವಾಹಕ ಎಂಜಿನಿಯರ್ ಝರಣಪ್ಪ ಎಂ. ಚಿಂಚೋಳಿಕರ್ ಕಾರ್ಯನಿರ್ವಹಿಸುತ್ತಿದ್ದ ಇಲ್ಲಿನ ಕಚೇರಿ‌ ಮತ್ತು ಮನೆಯಲ್ಲಿ 26 ತಾಸು ಶೋಧ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಅಂದಾಜು ₹ 4.5 ಕೋಟಿ ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.

ಬುಧವಾರ ಬೆಳಿಗ್ಗೆ 6ಕ್ಕೆ ಆರಂಭವಾಗಿದ್ದ ಶೋಧ ಕಾರ್ಯ ಗುರುವಾರ ಬೆಳಿಗ್ಗೆ 8ಕ್ಕೆ ಪೂರ್ಣಗೊಂಡಿತು. ಸಂಜೆ ಅವುಗಳ ಮೌಲ್ಯವನ್ನು ಲೆಕ್ಕ ಮಾಡಲಾಯಿತು. ಅಧಿಕಾರಿಗಳು ಬುಧವಾರ ಬೆಳಿಗ್ಗೆಯಿಂದ ರಾತ್ರಿಯ ತನಕ ಕಚೇರಿಯಲ್ಲಿ ಮಾತ್ರ ಶೋಧ ಮಾಡಿದ್ದರು. ಕಲಬುರಗಿಗೆ ತೆರಳಿದ್ದ ಚಿಂಚೋಳಿಕರ್‌ ಮಧ್ಯರಾತ್ರಿ ಕೊಪ್ಪಳಕ್ಕೆ ಬಂದರು. ಬಳಿಕ ಅಧಿಕಾರಿಗಳು ಇಲ್ಲಿನ ಶಿವಶಾಂತವೀರ ನಗರದಲ್ಲಿರುವ ಅವರ ಮನೆಯಲ್ಲಿ ಶೋಧ ನಡೆಸಿದಾಗ ಅಪಾರ ಪ್ರಮಾಣದ ಹಣ, ಚಿನ್ನ ಮತ್ತು ದಾಖಲೆಗಳು ಲಭ್ಯವಾಗಿವೆ.

‘ಕಲಬುರಗಿ ನಗರದಲ್ಲಿ ನಾಲ್ಕು ಸಾವಿರ ಚದರ ಅಡಿಯಲ್ಲಿ ನಿರ್ಮಾಣ ಹಂತದಲ್ಲಿರುವ ಬೆಲೆ ಬಾಳುವ ಮನೆ, ಬೀದರ್‌ನಲ್ಲಿ ಮನೆ, ಚಿಟಗುಪ್ಪ ತಾಲ್ಲೂಕಿನ ಮುತ್ತಂಗಿ ಗ್ರಾಮದ ಫಾರ್ಮ್‌ ಹೌಸ್‌ ಮತ್ತು ಬ್ಯಾಂಕ್‌ನಲ್ಲಿಟ್ಟಿರುವ ₹ 1.5 ಕೋಟಿ ನಿಶ್ಚಿತ ಠೇವಣೆ (ಎಫ್‌ಡಿ) ಸೇರಿ ₹ 3.5 ಕೋಟಿ ಆಸ್ತಿ ಮೌಲ್ಯ ಎಂದು ಅಂದಾಜಿಸಲಾಗಿದೆ. ಕೊಪ್ಪಳದ ಮನೆಯಲ್ಲಿ ಸಿಕ್ಕ ಚಿನ್ನ, ನಗದು, ಲ್ಯಾಪ್‌ಟಾಪ್‌, ಸ್ಮಾರ್ಟ್‌ ಫೋನ್‌ಗಳು, ವಾಹನಗಳು, ಟ್ಯಾಬ್‌ ಸೇರಿ ಇವೆಲ್ಲವುಗಳ ಮೌಲ್ಯ ₹ 1 ಕೋಟಿ ಆಗಲಿದೆ’ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದರು. ಚಿಂಚೋಳಿಕರ್‌ ವಿರುದ್ಧ ಕೊಪ್ಪಳದಲ್ಲಿ ಎಫ್‌ಐಆರ್‌ ದಾಖಲಾಗಿದೆ.

ADVERTISEMENT

‘ಚಿಂಚೋಳಿಕರ್‌ ಕಲಬುರಗಿಗೆ ತೆರಳಿದ್ದರಿಂದ ಅವರು ಬರುವ ತನಕ ಮನೆ ಕೀಲಿ ತೆಗೆಯುವಂತಿರಲಿಲ್ಲ. ‌ಹೀಗಾಗಿ ಶೋಧ ಕಾರ್ಯ ಪೂರ್ಣಗೊಳ್ಳಲು 26 ತಾಸು ಬೇಕಾಯಿತು’ ಎಂದು ಅಧಿಕಾರಿಯೊಬ್ಬರು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.