
ಗಂಗಾವತಿ: ನಗರದ ತಹಶೀಲ್ದಾರ್ ಕಚೇರಿಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಹಿರಿಯ ಉಪನೋಂಣಾಧಿಕಾರಿಗಳ ಮತ್ತು ಮದುವೆ ಅಧಿಕಾರಿಗಳ ಕಾರ್ಯಾಲಯ ಹಾಗೂ ಉಪವಿಭಾಗ ಆಸ್ಪತ್ರೆಗೆ ಶುಕ್ರವಾರ ಲೋಕಾಯುಕ್ತ ಡಿವೈಎಸ್ಸಿ ಲೋಕೇಶ್ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ, ದಾಖಲೆ, ಕಾರ್ಯವೈಖರಿ ಪರಿಶೀಲನೆ ನಡೆಸಿದರು.
ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ, ಕೊಠಡಿಯಲ್ಲಿ ಅಧಿಕಾರಿಗಳ ಕಾರ್ಯವೈಖರಿ, ಸರ್ವೆಯರ್ ಸಂಖ್ಯೆ, ಪೋಡಿ ಪ್ರಕರಣ, ಹಳೆಯ ದಾಖಲೆ ಮತ್ತು ರಿಜಿಸ್ಟರ್ ನಿರ್ವಹಣೆ, ಬಾಕಿ ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದರು.
ನಂತರ ಸಬ್ ರಿಜಿಸ್ಟರ್ ಕಚೇರಿಗೆ ಭೇಟಿ ನೀಡಿ, ಸಿಬ್ಬಂದಿ ಕೊರತೆ, 45 ರಜಿಸ್ಟರ್ ನಿರ್ವಹಣೆ ಲೋಪ, ಪುಸ್ತಕ ನಿರ್ವಹಣೆ ಲೋಪ, ಹಾಜರಾತಿ ಪುಸ್ತಕ ಪರಿಶೀಲಿಸಿ, ನಿರ್ವಹಣೆ ಇಲ್ಲದಿರುವುದು ಕಂಡು ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ನಂತರ ಪ್ರಭಾರಿ ಸಬ್ ರಿಜಿಸ್ಟರ್ ರವಿ ಅವರಿಗೆ ಅಗತ್ಯ ದಾಖಲೆಗಳ ನಿರ್ವಹಣೆಗೆ ಸೂಚಿಸಿದರು.
ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳಿಗೆ ನೀಡುವ ಚಿಕಿತ್ಸೆ, ಔಷಧಿ, ಸಿಬ್ಬಂದಿ, ವ್ಯವಸ್ಥೆ, ದಾಖಲೆಗಳ ನಿರ್ವಹಣೆ ಪರಿಶೀಲಿಸಿದರು.
ಡಿವೈಎಸ್‌ಪಿ ಲೊಕೇಶ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿ, ಹಿರಿಯ ಲೋಕಾಯುಕ್ತ ಅಧಿಕಾರಿಗಳ ಆದೇಶದಂತೆ, ವಿವಿಧ ಕಚೇರಿಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಲಾಗಿದ್ದು, ಸಾಕಷ್ಟು ಲೋಪದೋಷಗಳು ಕಂಡು ಬಂದಿವೆ. ವರದಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೊಪ್ಪಳ ಲೋಕಾಯುಕ್ತ ಸಿಬ್ಬಂದಿ ಗಣೇಶ, ರಾಜು, ಗುರುಪ್ರಸಾದ, ಶೈಲಾ, ಬಸವರಾಜ ಉಪಸ್ಥಿತರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.