ಕುಷ್ಟಗಿ: ‘ಪಕ್ಷಾತೀತವಾಗಿ ಹೇಳಬೇಕೆಂದರೆ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಮುಖ್ಯಮಂತ್ರಿಯಾಗುವುದು ಒಳ್ಳೆಯದು’ ಎಂದು ವಿಧಾನಸಭೆ ಪ್ರತಿಪಕ್ಷದ ಮುಖ್ಯ ಸಚೇತಕರೂ ಆಗಿರುವ ಇಲ್ಲಿಯ ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಶುಕ್ರವಾರ ಇಲ್ಲಿ ಸುದ್ದಿಗಾರರ ಬಳಿ ಮಾತನಾಡಿದ ಅವರು, ‘ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಕುರ್ಚಿಗೆ ತೀವ್ರ ಪೈಪೋಟಿ ಇದ್ದು ಅಭಿವೃದ್ಧಿತ್ತ ಗಮನಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಸಾಧ್ಯವಾಗದ ಕಾರಣ ಹಿನ್ನಡೆಯಾಗುತ್ತಿದೆ. ಕುರ್ಚಿ ಎಳೆದುಕೊಳ್ಳಲು ಶಿವಕುಮಾರ ಪ್ರಯತ್ನಿಸುತ್ತಿದ್ದರೆ ಸಿದ್ದರಾಮಯ್ಯ ಅವರಂತೂ ಕುರ್ಚಿ ಬಿಡುವ ಸ್ಥಿತಿಯಲ್ಲಿ ಇಲ್ಲ. ಇಂಥ ನಿಶ್ಚಿತತೆಗೆ ತೆರೆ ಎಳೆಯುವ ಮನಸ್ಸು ಕಾಂಗ್ರೆಸ್ಸಿಗರಿಗಿದ್ದರೆ ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿಸುವುದು’ ಉತ್ತಮ ಎಂದು ಅಭಿಪ್ರಾಯಪಟ್ಟರು.
ಸಿ.ಎಂ ತಾರತಮ್ಯ: ಅಭಿವೃದ್ಧಿ, ಸಮಸ್ಯೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯಾ ಜಿಲ್ಲೆಗಳ ಕೇವಲ ಕಾಂಗ್ರೆಸ್ ಶಾಸಕರೊಂದಿಗೆ ಮಾತ್ರ ಚರ್ಚಿಸುವ ಮೂಲಕ ತಾರತಮ್ಯ ನೀತಿ ಅನುಸರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಪಾಟೀಲ, ಸಿದ್ದರಾಮಯ್ಯ ರಾಜ್ಯಕ್ಕೆ ಮುಖ್ಯಮಂತ್ರಿ ಕಾಂಗ್ರೆಸ್ಸಿಗೆ ಮಾತ್ರವಲ್ಲ ಹಾಗಾಗಿ ಪಕ್ಷಾತೀತವಾಗಿ ನಡೆದುಕೊಳ್ಳುವ ಮುತ್ಸದ್ದಿತನ ಪ್ರದರ್ಶಿಸಬೇಕಿತ್ತು ಎಂದರು.
ಪುರಸಭೆಗೆ ಉದ್ಯಾನ: ‘ನಿಡಶೇಸಿ ಕೆರೆ ತಟದಲ್ಲಿರುವ ಉದ್ಯಾನ ನಿರ್ವಹಣೆ ಹೊಣೆಯನ್ನು ಕುಷ್ಟಗಿ ಪುರಸಭೆಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರೊಂದಿಗೆ ಚರ್ಚಿಸಿದ್ದೇನೆ. ಸದ್ಯ ಕೊರಡಕೇರಾ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು ನಿರ್ವಹಣೆ ಸಾಧ್ಯವಾಗದೆ ಉದ್ಯಾನ ಹಾಳುಬಿದ್ದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.