ADVERTISEMENT

ಹನುಮಸಾಗರ: ತಡವಾಗಿ ಕಟ್ಟಿದ ಹೂವು, ಇಳುವರಿ ಕುಸಿತ

ಸಂಕಷ್ಟದಲ್ಲಿ ಮಾವು ಬೆಳೆಗಾರರು

ಕಿಶನರಾವ್‌ ಕುಲಕರ್ಣಿ
Published 13 ಮೇ 2022, 2:42 IST
Last Updated 13 ಮೇ 2022, 2:42 IST
ಹನುಮಸಾಗರ ಭಾಗದಲ್ಲಿ ಈ ಬಾರಿ ಮಾವಿನ ಇಳುವರಿಯಲ್ಲಿ ಕುಸಿತವಾಗಿದ್ದು, ಮಾವು ಬೆಳಗಾರರು ಸಂಕಷ್ಟ ಎದುರಿಸುವಂತಾಗಿದೆ
ಹನುಮಸಾಗರ ಭಾಗದಲ್ಲಿ ಈ ಬಾರಿ ಮಾವಿನ ಇಳುವರಿಯಲ್ಲಿ ಕುಸಿತವಾಗಿದ್ದು, ಮಾವು ಬೆಳಗಾರರು ಸಂಕಷ್ಟ ಎದುರಿಸುವಂತಾಗಿದೆ   

ಹನುಮಸಾಗರ: ಲಾಕ್‌ಡೌನ್ ಕಾರಣದಿಂದ ಹಿಂದಿನ ವರ್ಷ ಸಾಕಷ್ಟು ಪೆಟ್ಟು ತಿಂದ ಮಾವು ಬೆಳೆಗಾರರಿಗೆ ಈ ಬಾರಿಯೂ ಮಾವು ಕಹಿಯಾಗಿದ್ದು, ರೈತರಿಗೆ ತೀವ್ರ ನೋವು ತಂದಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವಿನ ಇಳುವರಿ ಭಾರಿ ಪ್ರಮಾಣದಲ್ಲಿ ಕುಸಿತವಾಗಿದೆ. ತೇವಾಂಶದಿಂದಾಗಿ ಮರಗಳು ತಡವಾಗಿ ಹೂ ಬಿಟ್ಟರೂ ಬಳಿಕ ಬಿಸಿಲು, ಗಾಳಿಗೆ ಅರ್ಧದಷ್ಟು ಉದುರಿ ಹೋದವು. ನಿರೀಕ್ಷಿತ ಪ್ರಮಾಣದಲ್ಲಿ ಕಾಯಿ ಕಟ್ಟಲಿಲ್ಲ. ಕಟ್ಟಿದ ಕಾಯಿ ಮರದಲ್ಲಿ ನಿಲ್ಲಲಿಲ್ಲ. ಈ ಎಲ್ಲ ಕಾರಣದಿಂದ ಮಾವಿನ ಇಳುವರಿ ಕಡಿಮೆಯಾಗಲು ಕಾರಣವಾಗಿದೆ ಎಂದು ರೈತ ರುದ್ರಗೌಡ ಗೌಡಪ್ಪನವರ ಹೇಳುತ್ತಾರೆ.

ತಡವಾಗಿ ಆದರೂ ನಿರೀಕ್ಷಿತ ಪ್ರಮಾಣದಲ್ಲಿ ಮರದ ತುಂಬ ಹೂವು ಹೊಂದಿದ್ದರೂ ಕ್ರಮೇಣ ಕಾಯಿ ಕಟ್ಟುವ ಹಂತದಲ್ಲಿ ವಾತಾವರಣದಲ್ಲಿ ಹೆಚ್ಚಿನ ಉಷ್ಣತೆಯಿಂದಾಗಿ ಹೂವು, ಮಿಡಿ ಉದುರಿ ಬಿದ್ದ ಕಾರಣವಾಗಿ ಶೇ 50ರಷ್ಟು ಇಳುವರಿ ಕುಂಠಿತವಾದಂತಾಗಿದೆ. ಮಾರುಕಟ್ಟೆಯಲ್ಲಿ ಎರಡು ತಿಂಗಳ ಕಾಲ ಮೆರೆಯುತ್ತಿದ್ದ ಮಾವು, ತಡವಾಗಿ ಬಂದ ಕಾರಣವಾಗಿ ಈ ವರ್ಷ ಒಂದು ತಿಂಗಳೂ ಇರುವ ಸಾಧ್ಯತೆ ಇಲ್ಲ ಎಂದು ಸಹಾಯಕ ತೋಟಗಾರಿಕಾ ನಿರ್ದೇಶಕ ಕಳಕನಗೌಡ ಪಾಟೀಲ ತಿಳಿಸಿದರು.

ADVERTISEMENT

ತಾಲ್ಲೂಕಿನಲ್ಲಿ 40 ಹೆಕ್ಟೇರ್‌ಗಿಂತಲೂ ಅಧಿಕ ಪ್ರದೇಶದಲ್ಲಿ ರೈತರು ಕೇಸರ, ಬೇನಿಸಾನ್, ದಶೇರಿ, ರತ್ನಗಿರಿ ಆಪೂಸು, ನೀಲಂ, ತೋತಾಪುರಿ ತಳಿಗಳನ್ನು ಬೆಳೆಯುತ್ತಾರೆ. ಡಿಸೆಂಬರ್‌ನಲ್ಲಿ ಹೂವು ಬಿಟ್ಟು, ಏಪ್ರಿಲ್ ತಿಂಗಳಲ್ಲಿ ಬರಬೇಕಾಗಿತ್ತು, ಆದರೆ ವಾತಾವರಣದ ವೈಪರೀತ್ಯದಿಂದಾಗಿ ಹೆಚ್ಚುಕಡಿಮೆ ಎರಡು ತಿಂಗಳು ತಡವಾಗಿ ಹೂವು ಬಂದಿದ್ದೇ ಇದಕ್ಕೆ ಕಾರಣ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.

ಸಾಮಾನ್ಯವಾಗಿ ಒಂದೆಡೆ ಎಲೆಗಳು ಉದುರಿದರೆ, ಮತ್ತೊಂದೆಡೆ ಚಿಗುರುತ್ತಿತ್ತು. ಆದರೆ ಈ ಬಾರಿ ಉದುರಿದೆಯೇ ಹೊರತು ಚಿಗುರಲಿಲ್ಲ. ಶೇ100ರಷ್ಟು ಹೂವು ಬಿಟ್ಟಿತ್ತು ಇದರಲ್ಲಿ ಶೇ 80ರಷ್ಟು ಕಾಯಿಯೂ ಕಚ್ಚಿತು. ಆದರೆ ಕಾಯಿ ಬಲಿಯುವ ಮುನ್ನವೇ ಉದುರಿತು ಎಂದು ಕಬ್ಬರಗಿ ಗ್ರಾಮದ ಮಾವು ಬೆಳೆಗಾರ ಬಸವರಾಜ ಕಬ್ಬರಗಿ ವಿಷಾದ
ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.