
ಕುಷ್ಟಗಿ: ತಾಲ್ಲೂಕಿನ ಕೊರಡಕೇರಾ ಗ್ರಾಮದ ಮಾರುತೇಶ್ವರ ಕಾರ್ತಿಕೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.
ಶುಕ್ರವಾರ ಬೆಳಿಗ್ಗೆ ಕೆಂಚಮ್ಮನ ದೇವಸ್ಥಾನದಿಂದ ಉತ್ಸವದ ಕಳಸವನ್ನು ಮೆರವಣಿಗೆ ಮೂಲಕ ತರಲಾಯಿತು. ಡೊಳ್ಳು, ಛತ್ರಿ, ಚಾಮರ, ಭಜನೆ ವಿವಿಧ ಕಲಾತಂಡಗಳು ಮೆರವಣಿಗೆಗೆ ಕಳೆ ತಂದವು.
ವಿಧಾನಸಭೆ ಪ್ರತಿಪಕ್ಷದ ಮುಖ್ಯಸಚೇತಕ ದೊಡ್ಡನಗೌಡ ಪಾಟೀಲ ಅವರು ಕಲಾವಿದರೊಂದಿಗೆ ಡೊಳ್ಳು ಬಾರಿಸಿ ಗಮನಸೆಳೆದರು. ಗ್ರಾಮದ ನೂರಾರು ಜನರು ಮಾರುತೇಶ್ವರನಿಗೆ ದೀರ್ಘದಂಡ ನಮಸ್ಕಾರ ಸೇವೆ ನೆರವೇರಿಸಿ ಹರಕೆ ತೀರಿಸಿದರು. ನಂತರ ಹಾನಗಲ್ಲ ಕುಮಾಶ್ವರರ ಪುರಾಣದ ಮಹಾಮಂಗಲೋತ್ಸವ ನೆರವೇರಿತು.
ಉತ್ಸವದಲ್ಲಿ ವಿವಿಧ ಕಲಾ ಮೇಳಗಳು, ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಹಾಗೂ ಸುತ್ತಲಿನ ವಿವಿಧ ಗ್ರಾಮಸ್ಥರು ಸಹಸ್ರ ಸಂಖ್ಯೆ ಜನರು ಭಾಗವಹಿಸಿದ್ದರು. ಭಕ್ತರು ಹರಕೆ ಸಮರ್ಪಿಸುವ ದ್ಯೋತಕವಾಗಿ ದೇವಸ್ಥಾನದ ಸುತ್ತಲೂ ತೆಂಗಿನ ಕಾಯಿ ಅರ್ಪಿಸುವ ‘ಸುತ್ತುಕಾಯಿ’ ಸಂಪ್ರದಾಯ ನೆರವೇರಿಸಿದರು.
ರಾತ್ರಿ ಸ್ಥಳೀಯ ಕಲಾವಿದರು ‘ತವರಿನ ತಾಳಿ’ ಸಾಮಾಜಿಕ ನಾಟಕ ಅಭಿನಯಿಸಿದರು. ಗುರುವಾರ ಗಂಗೆ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸುವುದು ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳು ನಡೆದವು. ಮಾರುತೇಶ್ವರ ದೇವಸ್ಥಾನದ ಗೋಪುರದ ಕಳಸದ ಮೆರವಣಿಗೆ ವಿಜೃಂಭಣೆಯಿಂದ ನೆರವೇರಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾನಪ್ಪ ತಳವಾರ, ವಕೀಲ ಫಕೀರಪ್ಪ ಚಳಗೇರಿ, ರಾಜು ಗಂಗನಾಳ, ತಾಲ್ಲೂಕು ಹಾಲುಮತ ಸಮಾಜದ ಅಧ್ಯಕ್ಷ ಮಲ್ಲಣ್ಣ ಪಲ್ಲೇದ, ಕೆ.ಮಹೇಶ್, ಬಸವರಾಜ ಹಳ್ಳೂರು, ಅಶೋಕ ಬಳೂಟಗಿ, ಕಂದಕೂರಪ್ಪ ವಾಲ್ಮೀಕಿ, ಕಲ್ಲೇಶ ತಾಳದ ಹಳ್ಳೂರು, ಕಂದಕೂರಪ್ಪ, ಶಶಿಧರ ಕವಲಿ ಇತರರು ಇದ್ದರು.
ಶಾಖಾಪುರ ರಥೋತ್ಸವ: ತಾಲ್ಲೂಕಿನ ಶಾಖಾಪುರ ಗ್ರಾಮದಲ್ಲಿ ಶನಿವಾರ ಮಾರುತೇಶ್ವರ ಕಾರ್ತಿಕೋತ್ಸವದ ನಿಮಿತ್ತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಮಹಾರಥೋತ್ಸವ ನೆರವೇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.