ADVERTISEMENT

ಮಾರುತೇಶ್ವರ ಕಾರ್ತಿಕೋತ್ಸವಕ್ಕೆ ಸಾಕ್ಷಿಯಾದ ಅಪಾರ ಭಕ್ತರು  

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 6:06 IST
Last Updated 11 ನವೆಂಬರ್ 2025, 6:06 IST
ಕುಕನೂರು ತಾಲ್ಲೂಕಿನ ಮಸಬಹಂಚಿನಾಳ ಮಾರುತೇಶ್ವರ ದೇವಸ್ಥಾನದಲ್ಲಿ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು
ಕುಕನೂರು ತಾಲ್ಲೂಕಿನ ಮಸಬಹಂಚಿನಾಳ ಮಾರುತೇಶ್ವರ ದೇವಸ್ಥಾನದಲ್ಲಿ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು   

ಕುಕನೂರು: ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಮಾರುತೇಶ್ವರ ಕಾರ್ತಿಕ ಮಹೋತ್ಸವ ಸೋಮವಾರ ಅಪಾರ ಭಕ್ತಾದಿಗಳಿಂದ ಸಂಪನ್ನವಾಯಿತು.

ಈ ಭಾಗದ ಆರಾಧ್ಯ ದೈವವಾಗಿರುವ ಮಾರುತೇಶ್ವರ ಸ್ವಾಮಿಗೆ ಭಕ್ತರು ಬೆಳಗ್ಗೆಯಿಂದ ತಂಡೋಪತಂಡವಾಗಿ ಹರಿದು ಬಂದರು. ಕೆಲವರು ಪಾದ ನಡಿಗೆಯಿಂದ ಸಹ ಬಂದರು. ಬೆಳಗ್ಗೆಯಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.

ಹರಕೆ ಹೊತ್ತವರು ಮಡಿಯಿಂದ ಭಕ್ತಿ ಸಮರ್ಪಿಸಿದರು. ಸಂಜೆ ಆಗುತ್ತಿದ್ದಂತೆ ಭಕ್ತರು ದೇವಸ್ಥಾನ ಬಳಿ ಆಗಮಿಸಿ ಪಣತಿಯಲ್ಲಿ ದೀಪ ಹಚ್ಚಿದರು. ಕಾರ್ತಿಕ ಮಹೋತ್ಸವಕ್ಕೆ ಹೆಸರಾಗಿರುವ ಮಾರುತೇಶ್ವರ ತಾಣವಾಗಿರುವ ಮಸಬಹಂಚಿನಾಳದಲ್ಲಿ ಬರೋಬ್ಬರಿ 1.5 ಲಕ್ಷದಷ್ಟು ಭಕ್ತರು ಆಗಮಿಸಿ ದೀಪ ಹಚ್ಚಿ ಭಕ್ತಿಯ ಭಾವ ಮೆರೆದಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

ADVERTISEMENT

ಕಣ್ಮನ ಸೆಳೆದ ದೀಪಾಲಂಕಾರ: ಮಾರುತೇಶ್ವರ ದೇವಸ್ಥಾನ ಶಿಲಾ ದೇವಸ್ಥಾನವಾಗಿ ನಿರ್ಮಾಣವಾಗುತ್ತಿದ್ದು, ದೇವಸ್ಥಾನಕ್ಕೆ ಅಳವಡಿಸಲಾದ ದೀಪಾಂಲಕಾರ ದೇವಸ್ಥಾನದ ಮೆರುಗು ಹೆಚ್ಚಿಸಿದೆ. 

ಅನ್ನಸಂತರ್ಪಣೆ: ಕಾರ್ತಿಕಕ್ಕೆ ಆಗಮಿಸಿದ ಅಪಾರ ಭಕ್ತಾದಿಗಳಿಗೆ ಮಂಗಳವಾರ ಮುಂಜಾವಿನವರೆಗೂ ಅನ್ನಸಂತರ್ಪಣೆ ಜರುಗಿತು. 25 ಕ್ವಿಂಟಲ್ ಗೋದಿ ಹುಗ್ಗಿ, ಬದನೆಕಾಯಿ ಪಲ್ಲೆ, ಅನ್ನ, ಸಾಂಬಾರ ಪ್ರಸಾದ ವಿತರಣೆಯಾಯಿತು.

ಟೊಂಕ ಕಟ್ಟಿ ನಿಂತ ಗ್ರಾಮಸ್ಥರು: ದೇವಸ್ಥಾನ ಸೇವಾ ಸಮಿತಿ ಹಾಗೂ ಗ್ರಾಮಸ್ಥರು, ಭಕ್ತಾಧಿಗಳು ಕಾರ್ತಿಕ ಮಹೋತ್ಸವಕ್ಕೆ ಆಗಮಿಸುವ ಭಕ್ತ ವೃಂದಕ್ಕೆ ಮಹಾಪ್ರಸಾದ ವಿತರಣೆಗೆ ಟೊಂಕ ಕಟ್ಟಿ ನಿಂತು ಪ್ರಸಾದ ಸೇವೆ ಮಾಡಿದರು. ಮಾರುತೇಶ್ವರ ಸ್ವಾಮಿಯ ಪ್ರಸಾದ ಕಾರ್ಯ ಕಳೆದ ಎರಡು ಮೂರು ದಿನಗಳಿಂದ ಸಹ ಆರಂಭವಾಗಿದೆ. ವರ್ಷದಿಂದ ವರ್ಷಕ್ಕೆ ಇಲ್ಲಿನ ಪ್ರಸಾದ ವಿತರಣೆ ಜನಮಾನಸದಲ್ಲಿ ಹೆಸರು ಪಡೆಯುತ್ತಿದೆ. ಮಾರುತೇಶ್ವರ ಕಾರ್ತಿಕಕ್ಕೆ ತೆರಳಿದರೆ ಪ್ರಸಾದ ಸ್ವೀಕರಿಸಿ ಬರಲೇಬೇಕು ಎನ್ನುವ ಮಟ್ಟಕ್ಕೆ ಮಾನ್ಯತೆ ಪಡೆದಿದೆ.

ಭಾಗಿಯಾದ ಮಾಜಿ ಸಚಿವ ಹಾಲಪ್ಪ ಆಚಾರ್

ಮಸಬಹಂಚಿನಾಳ ಕಾರ್ತಿಕ ಮಹೋತ್ಸವದಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್ ಆಗಮಿಸಿ ಪ್ರಸಾದ ಸೇವೆಯನ್ನು ವೀಕ್ಷಿಸಿದರು. ಮಾರುತೇಶ್ವರ ಸ್ವಾಮೀಯ ದೈವ ಶಕ್ತಿ ಅಪಾರ. ಶ್ರದ್ಧಾ ಭಕ್ತಿಯಿಂದ ಜನತೆ ಕಾರ್ತಿಕ ಮಹೋತ್ಸವದಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.